ಅನುಸಂಧಾನ

ಮೌನ ವಹಿಸುವ ನಿನ್ನ ಹೊಗಳಲು 
ಮಾತಿಗೆ ಕೀಳರಿಮೆ ತರಿಸಿದೆ 
ನಿನ್ನ ನಡೆಯ ಎತ್ತಿ ಹಿಡಿಯಲು 
ಹಂಸಕೂ ಮುಜುಗರ ಪಡಿಸಿದೆ 
ಕಮಲ ಕಣ್ಣಿಗೆ ಹೊಲಿಸಿರಲು 
ಲೆಕ್ಕಿಸದೆ ಹೋದೆ ಅದರ ತಳಮಳ 
ಸಂಪಿಗೆ ಮೂಗಿನ ಹೋಲಿಕೆಗೆ  
ಪ್ರಶ್ನೆ ಎದ್ದಿತು "ಎಲ್ಲಿ ಪರಿಮಳ?"

"ಕ್ಷಿತಿಜವೂ ಕೈ ಚಾಚು ದೂರ" 
ಹೀಗೆ ಹುಸಿ ನುಡಿಯಾಡಿದವನಿಗೆ 
ಹೆಜ್ಜೆ ಇಡಲೂ ತೋಚದಾಗಲು 
ಇದು ಭೂಮಿಯ ಶಾಪವೇ?
ನೂರು ಕವಿತೆಯ ಹೋಗಳು ಹಾಡಿಗೆ 
ಬೇಡಿಕೆ ಇರದಂತೆ ತೋಚಿದೆ 
ನಿನ್ನ ಕಂಠವ ಜೇನು ಅನಲು 
ಕೋಗಿಲೆಗೆ ಕೋಪವೇ?

ಸಪ್ಪೆಯಾಗಿದೆ ಸಂಜೆ ಬಾನು 
ಒಪ್ಪುವಂತಿಲ್ಲ ಅರಳು ಹೂವು 
ಬೀಸು ಗಾಳಿಗೆ ಮುಗ್ಧತೆಯ ಕೊರತೆ 
ರಾತ್ರಿ ರಮ್ಯಕೆ ಭಯದ ಕಾವು 
ಕಾಮನ ಬಿಲ್ಲಿಗೆ ಒಂದೇ ಬಣ್ಣ 
ಅದು, ನೀಲ್ಗಟ್ಟಿ ಕಾಣದಾಗಿದೆ 
ಛಂದಸ್ಸು ಮರೆತವು ಅಡ್ಡಾದಿಡ್ಡಿ ಪದಗಳು 
ಮಾತ್ರೆ-ಗುಳಿಗೆ ಸಾಲದೆ 

ತೀರ ಮರಳಿನ ಮೇಲೆ ಗೀಚಲು 
ನಿರುತ್ಸಾಹಿ ಅಲೆಯ, ಅಸಾಧಾರಣ ನಡೆ 
ಅದೇಕೋ ಅಳಿಸದೇ ದೂರುಳಿಯಿತು 
ಮಾತು ಬಿಟ್ಟಿದ್ದರಿಂದಲೇ ?
ಭೋರ್ಗರೆದು ಸುರಿದ ಮಳೆಯಲಿ 
ನಾ ಮಿಂದೆ ಖುಷಿಯಲಿ ಆದರೆ 
ಸದ್ದಿಲ್ಲದೇ ತಾ ರದ್ದಿಯೇನಿಸಿತು 
ನೀ ನೆನಪಾದ ಕೂಡಲೇ!!

ನಿನ್ನ ನಂಟಿಗೆ ಪ್ರಕೃತಿಯನೇ 
ಗಂಟು ಬಿಗಿದು ಸ್ವಂತವಾಗಿಸೆ 
ನಿನ್ನ ಅರೆಕ್ಷಣ ಅಗಲುವಿಕೆಗೆ 
ಎಲ್ಲವೂ ನಿಸ್ವರೂಪಿಯೇ  
ರೂಢಿಯಾಗಿದೆ ಹೋಲಿ ಬರೆವುದು 
ಹೋಲಿಕೆಗೆ ಸ್ಪಂದಿಸದ ಪದಗಳ 
ನಿನ್ನ ಪರಿಚಯ ಮಾಡಿಸದೆ 
ಮುಂದುವರೆಯಲು ಸಾಧ್ಯವೇ?

                            --ರತ್ನಸುತ 

Comments

  1. ಇಲ್ಲಿನ ಲಯ, ಭಾಷಾ ಬಳಕೆ ಜೊತೆಗೆ ಒಳ್ಳೆಯ ಹೂರಣ ಮನ ಸೆಳೆಯಿತು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩