Friday, 30 May 2014

ಪಾಪದ ಸ್ಪರ್ಧೆ (Race of sin)

ಇಲ್ಲಿ ಪಾಪಗಳ ಸ್ಪರ್ಧೆ ಏರ್ಪಟ್ಟಿದೆ;
ಸುತ್ತೂರು, ಜಿಲ್ಲೆ ಗಡಿಗಳ ದಾಟಿ
ದೇಶ-ವಿದೇಶಗಳಿಂದ ಆಗಮಿಸಿದ 
ಕಟ್ಟುಮಸ್ತು ಪಟುಗಳೆದುರಲ್ಲಿ
ನನ್ನ ಬಡಕಲು ಪಾಪಗಳು ಪಾಪಗಳಂತೆ
ಪಿಳಿ-ಪಿಳಿ ಕಣ್ಣರಳಿಸಿ ನೋಡುತ್ತಿವೆ;
ನಾನೊಬ್ಬ ಪಾಪಿಯೆಂದು ನಂಬಲಿಕ್ಕಾದರೂ
ಮತ್ತಷ್ಟು ಪಾಪ ಎಸಗಬೇಕಿದೆ!!

ಒಬ್ಬ ಪಾಪಿ ತನ್ನ ಪ್ರತಾಪ ಮೆರೆದ;
ತನ್ನ ಹಳೆ ಪಾಪದ ಚೀಲ ಬಿಚ್ಚಿ
ಒಂದೊಂದನ್ನೇ ಈಚೆಗಿಡುತ್ತಲೇ
ಸಂಪೂರ್ಣ ಬೆವೆತು ಹೋದ;
ಇನ್ನು ಲೆಕ್ಕ ಮಾತ್ರ ಮುಗಿದೇ ಇಲ್ಲ!!

ಮತ್ತೊಬ್ಬ, ತನದಲ್ಲದ ಕೊಡದಲ್ಲಿ
ತುಂಬಿ ತುಳುಕುತ್ತಿದ್ದ ಪಾಪದ ಹೊರೆಯ
ಅಸಹಾಯಕನಂತೆ ಹೊತ್ತು ದಣಿದಿದ್ದ;
ದಣಿಗಳು ದುಡಿಸಿಕೊಂಡು ದೂರಹಟ್ಟಿ, 
ಪಗಾರದ ನೆಪವೇರಿ ಹೊರಿಸಿರಬೇಕು?!!
ಎಂಬ ಗುಮಾನಿ ಆತನ ಕಣ್ಗಳಲ್ಲೇ 
ಸ್ಪಷ್ಟ ಗೋಚರಿಸುವಂತಿತ್ತು!!

ನಮೂದಿಸಿಕೊಂಡವರಲ್ಲಿ ಅನೇಕರು
ಯಾವ ಪಾಪ ಅರಿಯದವರಂತಿದ್ದರೂ
ನಿಯಮಾನುಸಾರ ಸೇರಿಸಿಕೊಳ್ಳಲೇ ಬೇಕಾಗಿತ್ತು;
ಓಟದಲ್ಲಿ ಬಂಡವಾಳ ಬಯಲಾಗುವುದಂತೂ ಖಚಿತ!!

ನಾನೂ ಭಾಗಿಯಾಗಿದ್ದೆ;
ಕಠಿಣವಲ್ಲದಿದ್ದರೂ 
ಸುಮಾರು ತಾಲೀಮು ನಡೆಸಿದ್ದ 
ಪಾಪಗಳ ಬೆಂಬಲವಿದ್ದಂತಿತ್ತು;
ಸಜ್ಜಾಗಿ ನಿಂತೆ, ಚಾಲನೆಯ ಸದ್ದಿಗೆ!!

ಓಟ ಮೊದಲಾಗಿತ್ತು,
ಕಣ್ಮುಚ್ಚಿ, ಒಂದೇ ಉಸಿರಲ್ಲಿ ಓಡಿದೆ;
ಎಲ್ಲರನ್ನೂ ಹಿಂದಿಕ್ಕುವ ಛಲ,
ನಾನೇ ಪರಮ ಪಾಪಿಯ ಬಿರುದು
ದೋಚಿಬಿಡುವ ಹುಮ್ಮಸ್ಸು;
ಎಲ್ಲವೂ ಹುಸಿಯಾಗುವ ಸೂಚನೆಗಳೇ!!

ಗುರಿ ಮುಟ್ಟುವುದು ತಡವಾದರೇನಂತೆ,
ಮುಟ್ಟುವುದಂತೂ ಗ್ಯಾರಂಟಿ!!

ಅಂದಹಾಗೆ; ಹುಸಿ ಹೊರೆ ಹೊತ್ತವರು
ಕಡೆಯಲ್ಲಿ ನಾಪತ್ತೆ;
ಅವರವರ ಪಾಪಗಳು
ಅವರವರ ಹೆಗಲೇರಿ ನಗುತ್ತಿದ್ದವು!!

ಅಬ್ಬಬ್ಬಾ ಅದೆಷ್ಟು ಪಾಪಿಗಳು ಜಗದೊಳಗೆ?!! 

                                         -- ರತ್ನಸುತ

ಇಲ್ಲಿ ಕಣ್ಣೀರು ಮಾರಾಟಕ್ಕಿದೆ

ಬೊಗಸೆಯಲಿ ಕಣ್ಣೀರ ಹಿಡಿದು
ಮಾರುವ ಸಲುವೇ ಊರೂರು ಸುತ್ತಿ ಬಂದೆ;
ಎಲ್ಲರೂ ವಿಚಾರಿಸಿದವರೇ ಹೊರತು
ಕೊಂಡುಕೊಳ್ಳಲಾರೂ ಮುಂದಾಗಲಿಲ್ಲ;

ಒಂದಷ್ಟು ವಿಚಾರ ಮಾಡಿದೆ;
ಸಂತೆಯಲ್ಲಿ ವೇದಿಕೆ ನಿರ್ಮಿಸಿ 
ಬಣ್ಣ ಹಚ್ಚಿಕೊಂಡೆ,
ನೆರೆದವರನ್ನೇಲ್ಲ ಸೆಳೆದು
ಬಣ್ಣ ಬಣ್ಣದ ತೋಟ್ಟನಿಟ್ಟೆ,
ಮುಗಿಬಿದ್ದು ಜನ ಸುತ್ತುವರಿದರು!!

ಜಾಹೀರಾತುಗಳು ಮುಗಿಲು ಮುಟ್ಟಿದವು,
ಪ್ರಾಯೋಜಕತ್ವಕ್ಕೆ ನೂಕು-ನುಗ್ಗಲು;
ಉದ್ದುದ್ದ ಸಾಲುಗಟ್ಟಿ, ನಿಗದಿತ ದರತೆತ್ತಿ
ರಸೀತಿ ಪಡೆದು ವೀಕ್ಷಿಸಲು ಕಂತು-ಕಂತು ಮಂದಿ!!

ನನ್ನ ಕಣ್ಣೀರಿಗೀಗ ಬಹು ಬೇಡಿಕೆ
"ಬದುಕು ಜಟಕಾ ಬಂಡಿ"
"ಇದು ಕಥೆಯಲ್ಲ ಜೀವನ"
ಮುಂತಾದವಕ್ಕೂ ಸೆಡ್ಡು ಹೊಡೆದು-
ನಿಂತು ಗೆಲ್ಲಬಲ್ಲ ಕಥೆಗಳು ನನ್ನಲ್ಲಿವೆ!!

ಕೆಲವರು ಕಣ್ಣೀರಿಗೆ ಕಣ್ಣೀರನ್ನೇ ಕಟ್ಟುತ್ತಾರೆ,
ಇನ್ಕೆಲವರು ನಿಟ್ಟುಸಿರು ಬಿಡುತ್ತಾರೆ;
ಕೆಲವರು ಕೌತುಕ ತೋರುತ್ತಾರೆ,
ಇನ್ಕೆಲವರು ನಾಟಕ ಮಾಡುತ್ತಾರೆ;
ನನ್ನ ಕೆಲಸ ಏನಿದ್ದರೂ 
ಎಲ್ಲರಿಗೂ ಸಮತೆಯ ಪ್ರದರ್ಶನ ನೀಡುವುದು!!

ಹಿಂದೆ "ನಯಾ ಪೈಸಾ" ಕೆಲಸಕ್ಕೆ ಬಾರದ ಸರಕು
ಇಂದು ಬಹು ಬೇಡಿಕೆಯ ವಸ್ತು;
ಉದ್ಯಮದ ಅ, ಆ, ಇ, ಈ ಕಲಿತವರು
ಏನು ಬೇಕಾದರೂ ಮಾಡ(ರ)ಬಹುದು;

ನಾನು ಈಗ ಗಂಡು ಸೂಳೆ;
ನನ್ನ ಕಣ್ಣೀರು ರಂಜಿಸುವನಕ
ನನಗೆ ಎಲ್ಲಿಲ್ಲದ ಬೆಲೆ!!

                         -- ರತ್ನಸುತ

ಆತ್ಮಾಹುತಿ

ನನ್ನ ಕೈಗೆ ಬಂದೂಕು ಕೊಟ್ಟು
ಬೆನ್ನು ಮಾಡಿ ಸಾಲಾಗಿ ನಿಂತವರ
ಅಮಾನುಷವಾಗಿ ಕೊಲ್ಲು ಅಂದರು;
ಬೇಕಂತಲೇ ಗುರಿ ತಪ್ಪಿಸಿ ಬಿಟ್ಟೆ

ಇನ್ನೂ ಹತ್ತಿರ ಕೊಂಡೊಯ್ದು ,
ಬಂದೂಕಿನ ಬಾಯನ್ನ ತಲೆಗೆ ಆನಿಸಿ
ಕುದುರೆಯ ಕೀಲಿಗೆ ಬೆರಳನು ನೆಟ್ಟು
"ಗೋ" ಅಂದರು; ಗುರಿ ತಪ್ಪಿಸಿಬಿಟ್ಟೆ!!

ಯಾರಿಗೂ ನೋವುಂಟು ಮಾಡಬಾರದೆಂಬ
ಜೀವನದ ಮಹತ್ವಾಕಾಂಕ್ಷಿ ಗುರಿ ಅದು;
ಸುತ್ತಲೂ ಕರತಾಡನದ ಸದ್ದಿನಲೆ,
ನಾನ್ನಲ್ಲಿಯ ಅಪರಾಧಿ ಎಚ್ಚರವಾಗುತ್ತಿದ್ದಾನೆ!!

ಉರುಳಿದ ಹೆಣಗಳು, ಬದುಕಿದ್ದ ಆ
ಕೊನೆ ನಿಮಿಷದವರೆಗೂ ಗುಸುಕ್-ಪಿಸುಕ್ ಅನ್ನದೇ
ಸತ್ತಾಗ ಜೀವನ ಪ್ರೀತಿಯಿಂದ ಒಂದೇ ಬಾರಿ ಚೀರಿ ಮುಗ್ಗರಿಸಿದವು
ನಾನ್ಯಾರೋ? ಅವರ್ಯಾರೋ? ಪರಸ್ಪರ ಪರಿಚಯವಿಲ್ಲ!!

ಮುಖ ನೋಡುವ ಆಸೆಯಿಂದ ಒಂದನ್ನ
ಹಿಂಜರಿಕೆಯಿಂದ ಇದ್ದಲ್ಲೇ ಹೊರಳಿಸಿದೆ
ಸೀಳು ಬಿಟ್ಟ ಬುರುಡೆಯಿಂದ ಚಿಮ್ಮಿದ ರಕ್ತದ ಮಡುವಲ್ಲಿ
ಮೆದುಳು, ಕಣ್ಗುಡ್ಡೆ ರಕ್ತಸಿಕ್ತವಾಗಿದ್ದವು

ಎಲ್ಲವನ್ನೂ ಸರಿಸಿ, ಅಂಗಿಯ ಅಂಚಿನಿಂದ
ಮೆದುವಾಗಿ ಸವರಿದಾಗ, ಅಲಾಸ್!!
ಅದು ನಾನೇ!! ಮಿಕ್ಕವರೆಲ್ಲ ನನ್ನವರು
ಸಿಡಿಸಿದವರೂ ನನ್ನವರೇ.... ಸತ್ತವರೂ ಅವರೇ!!

ನಾ ಬದುಕಿದ್ದೂ ಸತ್ತಿದ್ದೆ
ಚಪ್ಪಾಳೆ ನುಂತಿತು;
ಎಲ್ಲರೂ ಉರುಳಿ ಬಿದ್ದರು
ಕಡೆಗೆ ನಾನೂ ಬಿದ್ದೆ...!!

-- ರತ್ನಸುತ

ಉಸಿರ ಐಸಿರಿ

ಎಳೆ ಚಿಗುರ ಹೊಳಪಲ್ಲಿ
ಹೀಗೊಂದು ಹಾಡು
ಹಕ್ಕಿ ಮುಕ್ಕುತ ಅದನು
ಇಂಪಾದ ಕಾಡು
ಉದುರುವ ಲಯದಲ್ಲಿ
ಹದವಾದ ಪ್ರೇಮ
ಆ ಮರ ಈ ಮರ
ಅಜರಾಮ"ರಾಮ"

ಬಾನೆಲ್ಲ ಬನವಾಗಿ
ಹೂವಾಗಿ ನಗಲು
ಮುಂಗೋಪಿ ರವಿ ತಾನು
ಸಂಗಾತಿ ಮುಗಿಲು
ತೊರೆಯೊಂದರಡಿಯಲ್ಲಿ
ನವಿರಾದ ಉರುಟು
ಭೂತಾಯಿ ಮಡಿಲೆಲ್ಲ
ಹೆಜ್ಜೆಜ್ಜೆ ಒಗಟು!!

ಕಡಲಾಳ ಜಗದಲ್ಲಿ
ಕನಸೆಂಬ ಮತ್ಸೆ
ಅಲೆಗಳೂ ಅರಿತಿವೆ
ದಡದಾ ಜಿಗುಪ್ಸೆ
ಕ್ಷಿತಿಜಕ್ಕೆ ಕೈ ಚಾಚಿ
ಬರೆವಾಕ್ಷರಕ್ಕೆ
ನಮ್ಮದೇ ಮೌನವಿದೆ
ಶಬ್ಧಾರ್ಥವೇಕೆ?!!

ತಂಪಾದ ತಿಳಿಗಾಳಿ
ಶ್ರವಣಕ್ಕೆ ಪ್ರೀತಿ
ಎದೆ ಗೂಡ ಮೊಗಸಾಲೆ
ಪದಮಾಲೆ ದಾಟಿ
ಮೊದಲಾದ ಸಾಲಲ್ಲಿ
ಬದಲಾದ ಭಾವ
ಇದ್ದಲ್ಲೇ ಕಂಪಿಸಿತು
ಶ್ರೀಮಂತ ಜೀವ!!

ಚಂದ್ರಂಗೂ ಮನಸಾಗಿ
ಮುಗಿಬಿದ್ದು ಬಂದ
ನಕ್ಷತ್ರ ಮಿನುಗಲ್ಲಿ
ಎಂಥ ಆನಾಂದ!!
ಹಸಿರುಟ್ಟ ಗೌರಮ್ಮ
ಉಸಿರಿತ್ತ ತಾಯಿ
ವನದೇವಿ ನಗುವಾಗ
ಮೊಗೆವಾಸೆ ಕೈಯ್ಯಿ!!

             -- ರತ್ನಸುತ

ಬೀದಿ ನಾಯಿ ಪಾಡು

ಬಿರು ಬಿಸಿಲಲ್ಲಿ ಕಣ್ಮುಚ್ಚಿ
ನಿಶ್ಚಿಂತೆಯಿಂದ ಮಲಗಿದ್ದ
ಬೀದಿ ನಾಯಿಗೆ
ಚುರುಕಾದ ಕಿವಿ,
ಅಷ್ಟೇ ಗಾಢವಾದ ನಿದ್ದೆ!!

ರಾತ್ರಿ ಮಿಕ್ಕ ರೊಟ್ಟಿ
ಮುಂಜಾನೆಗೆ ಮನಸೊಪ್ಪದಾಗ
ಸನ್ನೆಯಲ್ಲಿ ಕರೆದರೂ ಓಡಿ ಬರುವ
ಆ ಬೀದಿ ನಾಯಿಗೆ
ತನಗೊಂದು ಹೆಸರಿಡುವವರು,
ಆ ಹೆಸರಿಟ್ಟು ಕರೆವವರಿಲ್ಲವೆಂದು
ಬೇಸರವೇ ಇದ್ದಂತಿಲ್ಲ;
ಇಲ್ಲವೇ ಹಾಗೆ ನಟಿಸುತ್ತಿರಬೇಕು!!

ಕಳೆದ ವಾರವಷ್ಟೇ 
ಕಾರ್ಪೊರೇಷನ್ನವರು ಹಿಡಿದು
ಆಪರೇಷನ್ ಮಾಡಿ ಬಿಟ್ಟು ಹೋದ
ಹೆಣ್ಣು ನಾಯಿಗಳ ಹಿಂದೆ
ಯಾವ ಗಂಡಿಗೂ ಆಸಕ್ತಿ ಇಲ್ಲ;
ಪಾಪ, ಅವುಗಳ ನರಕ್ಕೂ ಕತ್ತರಿ ಬಿದ್ದಿದೆ!!

ಸಂತಾನ ಏಳಿಗೆಗೆ
ಪಕ್ಕದ ಬೀದಿಯ ಚಾಲಾಕಿ,
ಈ ಬೀದಿಯ ಪಟಾಕಿ ಸುಂದರಿಯ
ಬೇಟಿ ಆಗುವುದು ಅನಿವಾರ್ಯವೇ!!

ಹೇಗೋ ಹಾಗೆ ಒಗ್ಗೂಡಿ
ಗುಡ್ಡೆ, ಗುಡ್ಡೆ ಮರಿಗಳ ಹೆತ್ತು ಬಿಟ್ಟರೆ
ಇಡಿ ಬೀದಿಯ ಹೈಕಳೆಲ್ಲ 
ಒಂದೊಂದನ್ನ ತಂತಮ್ಮ ಮನೆಗೆ ಹೊತ್ತು
ಹತ್ತೋ, ಇಪ್ಪತ್ತೋ ದಿನ ಪೋಷಿಸಿ
ಮತ್ತೆ ಬೀದಿಗೆ ಬಿಟ್ಟಾಗ
ಕಳೆದ ರಾತ್ರಿಯ ರೊಟ್ಟಿ, ಮುದ್ದೆ,
ಅನ್ನ-ಸಾರು ವಗೇರೆಗೇ 
ನಾಲಿಗೆ ಚಾಚಬೇಕು!!

ಕಜ್ಜಿ ಮೈಯ್ಯ, ಹಣ್ಣು ಮುದಿ ನಾಯಿಗಳು
ಇನ್ನೂ ಕಲ್ಲೇಟು ತಿನ್ನುತ್ತಲೇ ಇವೆ;
ಹಾಗಿದ್ದೂ ನಾಲ್ವರಿಗೆ ಕಚ್ಚಿದ್ದು
ಅದರ ಪ್ರರಾಕ್ರಮಕ್ಕೆ ಪೂರಕವಾದ ಪ್ರಯತ್ನ!!

ನೆನ್ನೆ ಮೊನ್ನೆಯಷ್ಟೇ
ಮೊಲೆ ಹಾಲು ಕುಡಿಯುತ್ತಿದ್ದವು
ಇಂದು ತಾವೇ ಉಣಿಸುತ್ತಿರುವುದು 
ಕಾಲ ಚಕ್ರ ಉರುಳುತ್ತಿರುವ
ವೇಗಕ್ಕೆ ಸಾಕ್ಷಿಯಾದಂತಿದೆ!!

ರಾತ್ರಿಯಿಡಿ ಕಾವಲು ಕಾದು
ಭಯ ಪಡಿಸುವ ಜೊತೆಯಲ್ಲೇ
ಭಯದಲ್ಲಿ ಬದುಕುವ ಪಾಡು
"ನಾಯಿ ಪಾಡು" ಅನ್ನಬಹುದೇನೋ!!

ಅಂದಹಾಗೆ, ಇಂದು ರೌಂಡ್ಸ್ ಹಾಕಿದ
ಕಾರ್ಪೊರೇಷನ್ನೋರಿಗೆ
ಯಾವ ನಾಯಿಯೂ ಸಿಗಲಿಲ್ಲವಂತೆ;
ಪುಂಡಾಟಿಕೆಗೆ ಇನ್ನು ಗಟ್ಟಿ ಆಯಸ್ಸು ಇದೆ ಅಂತಾಯ್ತು!!

                                                         -- ರತ್ನಸುತ

ವಾರಾಂತ್ಯದ ಮುಂಜಾನೆ

ಕುರುಡು ಸ್ವಪ್ನಗಳ ಗರಡಿಯಲ್ಲಿ
ಇರುಳೆಲ್ಲ ಬೆವರು ಹರಿಸಿ ಎದ್ದೆ;
ಬಾಯಾರಿಕೆಯ ನೀಗಿಸಲು 
ಪಲ್ಲಂಗದ ಬದಿಗಿಟ್ಟಿದ್ದ 
ಚೊಂಬೂ ಬತ್ತಿ ಹೋಗಿತ್ತು;
ಹೇಗೆ?!!

ಹಾಸಿಗೆಯುದ್ದಕ್ಕೂ ಹರಡಿಕೊಂಡ
ನಿಚ್ಚಲ ಒಡಲೊಳಗಿನರಗಳು ಹಿಗ್ಗಿ
ಆಗಷ್ಟೇ ಸುಧಾರಿಸಿಕೊಳ್ಳುವಾಗ
ಥಟ್ಟನೆ ಪೋಲಿ ಸಂದೇಶವೊಂದು
ವಾಟ್ಸಾಪಿನ ಬಾಗಿಲ ಬಡಿಯುತ್ತೆ!!

ಹಳೆ ಸರಕುಗಳನ್ನ ಕೊನೆಬಾರಿಗೊಮ್ಮೆ
ಕಣ್ಣಾರೆ ಕಂಡು, ಮನಸಾರೆ ಆಸ್ವಾದಿಸಿ
ಅಳಿಸಿ ಹಾಕುವಾಗ
ಎಲ್ಲೋ ಒಂದು ಸಣ್ಣ ಮರುಕ;
ಹಿಂದೆಯೇ ನಿಟ್ಟುಸಿರು,
ಹೊಸ ಆಗಮನಕ್ಕೆ ವೇದಿಕೆ ಸಜ್ಜು!!

ತಲೆದಿಂಬಿನ ಅಂಚಿನ ಕಸೂತಿಯ
ಅರಿವಿಲ್ಲದಂತೆ ಕಿತ್ತು ಹಾಕಿ
ಮರು ಜೋಡಣೆಗೆ ಹೆಣಗಾಡುತ್ತೇನೆ;
ನನ್ನದೇ ಹುಚ್ಚು ಬಯಕೆಗಳಿಗೆ
ಬಲಿಯಾದವುಗಳ ನೆನೆನೆನೆದು
ಸುಮ್ಮನಾಗುತ್ತೇನೆ, ಸಣ್ಣಗಾಗುತ್ತೇನೆ!!

ಹಗಲನ್ನ ತಿರಸ್ಕಾರದಿಂದಲೇ ಒಪ್ಪಿಕೊಂಡು
ಇರುಳನ್ನ ಬಿಡದಂತೆ ಬಿಗಿಯಾಗಿ 
ಅಪ್ಪಿಕೊಳ್ಳುವ ಯೋಜನೆಯಲ್ಲಿ
ನಗುವ ಸಧ್ಯತೆಗಳ ಹೆಚ್ಚಿಸುತ್ತ
ಮರುಳನಂತೆ ನಕ್ಕು ಬಿಡುತ್ತೇನೆ;
ಶರಪಂಜರದ ಕಲ್ಪನಾಳಂತೆ
ಚೂರು ಅಸಹಜವಾಗಿಯೇ!!

ಯಾವ ಹುಚ್ಚು ನಾಯಿಯೂ
ನನ್ನನ್ನು ಕಚ್ಚಿದ ನೆನಪಿಲ್ಲ;
ರೇಬೀಸ್ ಖಾಯಿಲೆಯ ಲಕ್ಷಣವೆಂಬಂತೆ
ನೀರ ಕಂಡು ಹಿಂಜರಿವ ಬುದ್ಧಿ;
ಸ್ನಾನದ ವಿಷಯದಲ್ಲಂತೂ ಇದನ್ನ
ತಳ್ಳಿ ಹಾಕಲಾಗುತ್ತಿಲ್ಲ ನನಗೆ;
ಆದರೂ 
ಮನೆಯವರ ಒತ್ತಾಯಕ್ಕೆ ಮಣಿಯದೆ
ಬೇರೆ ದಾರಿಯಿಲ್ಲ!!

                                  -- ರತ್ನಸುತ

ನನಗೊಂದು ಕಥೆ ಹೇಳ್ತೀರಾ?!!

ಕಥೆ ಹೇಳುವ ಮನಸಿಲ್ಲ
ಕೇಳುವ ಮನಸಿದೆ;
ಮಚ್ಚು-ಕೊಚ್ಚುಗಳ ಕಥೆ
ತೆರೆಮರೆಯ ಬೆಚ್ಚನೆಯ 
ದಂತ-ದುರಂತ 
ಹರಿ-ಹರ ಒಂದಾದ 
ಜಲಚರ ಹುಟ್ಟಿಕೊಂಡ 
ಗಾಂಧಿ ಮಹಾತ್ಮನಾದ 
ಯೇಸು ಶಿಲುಬೆ ಏರಿದ 
ಬುದ್ಧ, ಅಕ್ಕ, ಅಣ್ಣ, ಅಲ್ಲಮನ ಕಥೆ
ಪ್ರಾಫೆಟ್ ಸಾರಿದ ಅಲ್ಲಾಹ್ನ ಕಥೆ
ಇತ್ಯಾದಿಗಳಾವುದಾದರೂ ಸರಿಯೇ!!

ಸಿಕ್ಕ ಸಿಕ್ಕ ತಿರುವುಗಳಲ್ಲಿ
ಒಮ್ಮೆ ಮೌನವಹಿಸಿ
"ಮುಂದೇನು?" ಎಂದು
ಊಹಿಸುತ್ತಲೇ, ನಾನೂ ಪಾತ್ರವಾಗುವ
ಮಗುವಿನಂಥ ಮನಸಿದೆ.

ನನ್ನೊಳಗಿನ ಕಲಾಕಾರನು
ತೂಕಡಿಕೆಯಿಂದ ಎಚ್ಚೆತ್ತು
ಬಣ್ಣ ಹಚ್ಚಿಕೊಳ್ಳುವಂತೆ
ಸ್ಪೂರ್ತಿಯಾಗಬಲ್ಲ ಯಾವುದಾದರೂ
ಕಥೆಗೆ ಮನಸೋಲುವ ಮನಸಿಗೆ
ಮೈಯ್ಯೆಲ್ಲ ಕಿವಿಗಳೇ;

ನೆರೆ ಮನೆಯ ಗುಸು-ಪಿಸು ಮಾತು
ಲಲ್ಲೆ ಹೊಡೆಯುತ್ತಾ ಕಾಲ ನೂಕುವವರ
ಮಾತುಗಳಿಗೆ ಎಲ್ಲಿಲ್ಲದ ಪ್ರೀತಿ;
ಮನೆ, ಮನೆ ಕಥೆಗಳೇ ಹಾಗೆ;
ಇದ್ದವರಿಗಿಂತ, ಉಳಿದವರಿಗೇ 
ಕೌತುಕ ಹೆಚ್ಚಿಸುವ,
ಚಟದಂತೆ ಮೈಗೂಡಿ ಬಿಡಿಸಿಕೊಳ್ಳ-
-ಲಾಗದ ಹಫೀಮಿನಂತೆ!!

ಸಿನಿಮಾ, ದಾರಾವಾಹಿ ಕಥೆಗಳು
ತಕ್ಕ ಮಟ್ಟಿಗೆ ಒಪ್ಪುಗೆಯಾದರೂ
ನಾಟಕೀಯತೆ ವಿಪರೀತವಾದಾಗ
ಸಹಜವಾಗಿ ನೋಡುವುದೇ ಒಂದು ಸಾಹಸ;
ಆ ಜಾಗದಲ್ಲಿ ನನ್ನನ್ನ ಕಲ್ಪಿಸಿಕೊಂಡು
ಅದ್ಭುತವಾಗಿ ನಟಿಸಿಬಿಡುತ್ತೇನೆ;

ಕನಸಿನ ಕಥೆಗಳು
ಎಳೆದಷ್ಟೂ ಚಾಚಿಕೊಳ್ಳುವ
ರಬ್ಬರ್ ಬ್ಯಂಡಿನಂತೆ;
ಎಲ್ಲೋ ಒಂದು ಕಡೆ
ತುಂಡಾಗುವುದಂತೂ ಗ್ಯಾರಂಟೀ!!

ಇಷ್ಟು ಹೇಳಿ-ಕೇಳಿ ಮುಗಿಸಿದ ಮೇಲೆ
ನನ್ನ ಕಥೆ ಕೇಳುವ ಸೌಜನ್ಯವಿದ್ದರೆ
ಒಂದು ಸನ್ನೆ ಮಾಡಿ ಸಾಕು
ಸಹಸ್ರಕ್ಕೆ ಒಂದೆಣಿಕೆ ಕೊಟ್ಟು
ಹೇಳಿ ಮುಗಿಸುತ್ತೇನೆ;
ನನಗೆ ಕಥೆ ಹೇಳುವುದೂ ಇಷ್ಟವೇ!!

                               -- ರತ್ನಸುತ

Friday, 23 May 2014

ಪ್ರಣಯ ಅಶ್ವಮೇಧ

ನಿನ್ನ ಕಣ್ಗಳಲ್ಲಿ
ಸಾವಿರ ಕುದುರೆಗಳ ಓಟವ
ತೋರುತ್ತಲೇ ಲಗಾಮು ಬಿಗಿದ
ನನ್ನ ಹೃದಯದಲ್ಲಿ 
ಇನ್ನೂ ಲೆಕ್ಕಾಚಾರದ ಒಗಟು;
ಅಸಲಿಗೆ ಗೆದ್ದದ್ದಾವುದು
ಸೋತದ್ದಾವುದು? ಎಂದು!!

ಕಣ್ಗಪ್ಪಿನ ಸೀಮೆ ದಾಟಿ
ನೆಗೆದ ಕುದುರೆಗಳಿಗೆ
ಕಾಲೇ ಇರಲಿಲ್ಲವೆಂದು ನಂಬಲು
ನಾ ಕುರುಡನಲ್ಲ;
ಆದರೂ ಒಂದು ಸಣ್ಣ ಅನುಮಾನ,
ಮಂಕು ಬಡಿದಿತ್ತೇ ಬಹುಶಃ?!!

ಹುಡುಗಿ,
ಈಗೀಗ ಎದೆಯಲ್ಲಿ ಗುಡುಗು- ಸಿಡಿಲು;
ಎಲ್ಲೋ ದೂರದಲ್ಲಿ ಸಮೀಪಿಸುತ್ತಿರುವಂತೆ
ಆ ಹುಚ್ಚು ಕುದುರೆಗಳು,
ಕಂಪಿಸಿದೆ ಧೂಳೆಬ್ಬಿಸಿ ಎದೆಯ
ಅಂದಾಜಿಗೇ ಸಿಗದಂತೆ!!

ಅಷ್ಟು ವೇಗದ ನಡುವೆ
ದಣಿವಾರಿಸಿಕೊಳ್ಳಲಾದರೂ
ನೆರಳತ್ತ ಸಾಗಿ ನಿಂತದ್ದು
ಗಮನಕ್ಕೆ ಬರಲೇ ಇಲ್ಲವೆಂದರೆ
ಅತಿಶಯೋಕ್ತಿ ಅಲ್ಲ ಬಿಡು;
ಮರಳುಗಾಡಿನೆದೆ ಮೇಲೆ
ಪಾಪಸುಕಳ್ಳಿಗಳು ಬಿಟ್ಟರೆ
ನೆರಳಿನಾಸರೆಗೆ ಬೇರೇನೂ ಗತಿಯಿಲ್ಲ!!

ಗಾಣಿಗೆ ಹಿಂಡಿಯ ಚಕ್ಕೆಗಳ 
ಗೋದಾಮನ್ನ ನಿಮಿಷದಲ್ಲೇ
ಜೀರ್ಣಿಸಿಕೊಳ್ಳಬಲ್ಲ ಅಶ್ವಗಳಿಗೆ
ಹಸಿ ಭಾವನೆಗಳ ಭೋಜನವವಿಟ್ಟರೆ
ಮೂತಿ ತಿರುಗಿಸುತ್ತಿವೆ;
ಥೇಟು ನೀನು ಸಿಟ್ಟು ಮಾಡಿಕೊಂಡಂತೆ!!

ಹಿಡಿದು ಹೇಗೋ ಕಟ್ಟಿದ್ದಂತೂ ಆಯಿತು;
ಯುದ್ಧಕ್ಕೆ ಸಿದ್ಧನಾಗುವ ಮೊದಲೇ
ದಂಡೆತ್ತಿ ಬಂದ ನೀನು
ನನ್ನ ಕೊಲ್ಲುವುದು ಅದೆಷ್ಟು ಸಲೀಸೆಂದು
ನಿನಗೇ ಗೊತ್ತಾಗುತ್ತದೆ ಬಾ;
ಹಿಂದೆ ಅದೆಷ್ಟೋ ಬಾರಿ
ನನ್ನ ಇರಿದಿರಿದು ಕೊಂದಿದ್ದೆ
ನಿನಗೇ ಗೊತ್ತಿಲ್ಲದಂತೆ,
ಗೊತ್ತಿದ್ದೂ ಒಂದು ಕೊಲೆ ನಡೆದೇ ಹೋಗಲಿ!!

                                              -- ರತ್ನಸುತ

ರಣರಂಗದಲ್ಲಿ

ಕೆಂಪು ಕೋಟೆಯ ಸುತ್ತ
ಹಸಿರು ಗರಿಕೆ
ಹಳದಿ ಹೂವಿನ ಪಕಳೆ
ಮುದುಡಿತೆದಕೆ?
ಕೊಡಲಿ ಹಲ್ಲಿಗೆ ಸಿಕ್ಕಿ
ಒಣಗಿ ರಕುತ
ಕುಪ್ಪೆ ಶಿರಗಳು ಉದುರಿ
ಉರುಳಿ ಅಳುತ!!

ಯಾರೋ ಹಾಕಿದ ಕೇಕೆ
ಬೆಚ್ಚಿ ಕೂಸು
ಹುಟ್ಟು ಕಿವುಡಾಗಿದ್ದ-
-ರೆಷ್ಟು ಲೇಸು?!!
ಕಣ್ಣು ಹಿಂಗಿದ ಕೆಥೆಗೆ
ಅಂತ್ಯವೆಲ್ಲಿ?
ಪೇಟೆ-ಸಂತೆಯ ಬೆಳಕು 
ಆತ್ಮ ಕೊಳ್ಳಿ!!

ಗುಂಡು ಹಾರುವ ವೇಗ
ಕಂಡು ಹಿಡಿದು
ಕನಸ ವೇಗಕೆ ಪಾಠ
ಕಲಿಸುವಾಗ
ಕೋವಿ ಹಿಡಿದರೆ ಚೂರು
ಕಲಿವುದೇನೋ?
ಸಾವು ಸವರಲು ಬೇಗ
ಒಲಿವುದೇನೋ?!!

ಖಾಲಿ ಬಯಲಿಗೆ ಬೇಲಿ
ಮೌನವಾಗಿ
ಆದ ಗಾಯವು ಹೀಗೇ
ಮಾಗಿ-ಮಾಗಿ
ಹದ್ದು ಕುಕ್ಕಿತು ಅಲ್ಲಿ
ದೇಹ ಮುಕ್ತಿ
ಸ್ಪೂರ್ತಿಯಾಯಿತು ಸತ್ತ
ದೇಶ ಭಕ್ತಿ!!

ನನ್ನ ಗೋರಿಗೆ ನೀನು
ನಿನ್ನ ಗೋರಿಗೆ ಅವನು
ಅವನ ಗೋರಿಯ ಯಾರು
ಮುಚ್ಚುವವರು;
ನಾಮ ಫಲಕಗಳೆಲ್ಲ
ನೆನ್ನೆಗಳ ಗುರುತು
ನಾಳೆ ಸತ್ತರೆ ಯಾರು
ಕೆತ್ತುವವರು?!!

ಸಿದ್ಧ ಉತ್ತರಕಿಲ್ಲಿ
ಪ್ರಶ್ನೆಯಿಲ್ಲ
ಎದ್ದ ಪ್ರಶ್ನೆಗೆ ಸೂಕ್ತ
ಕುರುಹೂ ಇಲ್ಲ್ಲ;
ಇರುಳ ಕನಸುಗಳೆಲ್ಲ
ನನಸಾಯಿತು
ಹಗಲುಗನಸಿಗೆ ಸಮಯ
ಇರದಾಯಿತು!!

            -- ರತ್ನಸುತ

ನುಡಿ ನಲ್ಲೆ

ನುಡಿ ನಲ್ಲೆ 
ಏನನ್ನಾದರೂ ನುಡಿ,
ಮಡಿಯೆಂದಾದರೂ ನುಡಿ,
ಮಡಿವುದೇ ಸೊಗಸು
ನಿನ್ನ ನುಡಿ ಕೇಳಿ!!

ತುಡಿತಗಳ ನುಡಿ
ಬಗ್ಗಿ ಬಡಿ ನನ್ನ
ಅಸಹಾಯಕತೆಗಳ;
ಮೊದಲ ಹೆಜ್ಜೆ ಇಡುವನಕ
ಸ್ವಲ್ಪ ತಡಿ!!

ನನ್ನಾಸೆಗಳ ಹಡೆವವಳು
ಬೇಡಿ ವರ ಪಡಿ
ಬೇನೆಗಳ ನನಗೊಲಿಸಿ
ಸೋನೆ ಜಡಿ
ಮನದಲಿ ನೀನೇ ಗುಡಿ!!

ನನ್ನೊಲವೇರಲಿ
ನಿನ್ನ ಮುಡಿ
ಹಣೆಯಲಿ ನನ್ನ
ಎತ್ತಿ ಹಿಡಿ
ನೀನಾಗು ಜೀವ ಗಡಿ!!

                -- ರತ್ನಸುತ

ನೆನಪಿನ ರೈಲು

ನೆನಪಿನ ರೈಲಿಗೆ
ಅದೆಷ್ಟು ಬೋಗಿಗಳೋ
ಲೆಕ್ಕ ಹಾಕುತ್ತಲೇ ಸೋಲಬೇಕು!!

ಇಂಜಿನ್ನಿಗೆ ಬಿಡುವೇ ಇಲ್ಲ;
ಒಂದೇ ಸಮನೆ ಸಾಗಿಸುತ್ತಿದೆ
ಇದ್ದ-ಬದ್ದ ಸರಕನ್ನೆಲ್ಲ ಎಲ್ಲಿಂದೆಲ್ಲಿಗೋ!!

ಅಲ್ಲಲ್ಲಿ ಚೂರು ನಿಧಾನಿಸಿ
ಹತ್ತಿಳಿದವರ, ಹತ್ತಿಳಿಸಿದವುಗಳ
ಬೆಂಬಲಕ್ಕೆ ಸಣ್ಣ ತಗಡು ದ್ವಾರ;

ಉಳಿದವರು, ಇಳಿದವರು
ಹತ್ತಲಿರುವವರು, ಹತ್ತದಿರುವವರಿಗೂ
ಒಂದು ಮೀಸಲಾತಿಯಿದೆ;
ಮುಂಗಡ ಪಾವತಿ, ತತ್ಕಾಲಿನ ಗೋಜಲು
ಉದ್ದ ಸಾಲು, ಸಮಯ ಪೋಲು
ಯಾವ ಪೀಕಲಾಟವೂ ಅಲ್ಲಿಲ್ಲ!!

ಈತನಕ ಯಾವತ್ತೂ ಕೆಡದ ಇಂಜಿನ್ನು,
ಸವೆಯದ ಹಳಿ-ಚಕ್ರಗಳು,
ತುಕ್ಕು ಹಿಡಿಯದ, ಸೋರದ ಉಪ್ಪರಿಗೆ,
ಹರಿದುಹೋಗದ ಸೀಟು,
ಪ್ರಶಾಂತ ಪಯಣಕ್ಕೆ ಅಡ್ಡಗಟ್ಟದ ಟಿ.ಟಿ.ಇ,
ತುಟ್ಟಿ ಅನಿಸದ ಪ್ರಯಾಣ ದರ!!
ನೆನಪಿನ ರೈಲು ನಿಜಕ್ಕೂ ದಯಾಮಯಿ!!

ಕೊನೆಯ ನಿಲ್ದಾಣದ ಸುಳುವೂ ಕೊಡದೆ
ಗುಪ್ತತೆಯ ಕಾಯ್ದುಕೊಂಡ ರೈಲಿಗೆ
ಅಸಲಿಗೆ ಮೊದಲಾದುದ್ದೇಲ್ಲೋ ನೆನೆಪಿಲ್ಲ;
ನೆನಪಿಗೇ ನೆನಪಿಲ್ಲವೆಂದು ನಗದಿರಿ!!
ಪಾಪ, ಅದೆಷ್ಟು ಹೊರೆ ಹೊತ್ತಿದೆ!!
ಮರುವಿಗೆ ಕ್ಷಮಾರ್ಹ ಈ ನೆನಪು!!

ಹಬ್ಬದ ನೆನಪುಗಳ ಹೊಸ ಉಡುಗೆಯ ಕಂಡು
ಮರುಗಿದ ಚಿಂದಿ-ತೇಪೆಯುಟ್ಟ ಬಡಪಾಯಿಗಳಿಗೆ
ಮಧ್ಯವರ್ತಿಗಳ ಸಾಂತ್ವನ!!
ಒಟ್ಟಾರೆ, ಎಲ್ಲಕ್ಕೂ ಇದೆ ಇಲ್ಲಿ ಸನ್ಮಾನ!!

ಸದ್ದು ಮಾಡದೆ ಸಮೀಪಿಸುತಿದೆ 
ಹಸಿರು ಬಾವುಟವ ಹಿಡಿದ ಮನಸಿನೊಳಗೆ
ಸರಕು ಇಳಿಸಲು, ಹೊರೆಸಲು ಕೂಲಿಗಳಿಲ್ಲ
ಎಲ್ಲವೂ ಮನಸಿನದ್ದೇ ಹೊರೆ!!

                                         -- ರತ್ನಸುತ

ಒಲವಲ್ಲಿ ಇಂತಿಷ್ಟು

ಬಿಟ್ಟುಗೊಡದ ಹಠವ ಹೊತ್ತು
ಎಷ್ಟು ಬಾರಿ ಮಾತು ಬಿಟ್ಟೆ!!
ಕೇಳಿ ನೋಡು ಒಮ್ಮೆ ನಿನ್ನ ಅಂತರಂಗವ;
ನೀನು ಸುಟ್ಟು ಹೋದ ಬಳಿಕ
ಹೇಗೆ ಬರೆವೆ ಪ್ರೇಮ ಪತ್ರ?
ಮೂಗನಾಗುವಂತೆ ನೀಡು ಒಂದು ಶಾಪವ!!

ನನ್ನ ಕಣ್ಣ ಹನಿಯ ಕಂಡು
ಬೆಚ್ಚಿ ಬೀಳುವುದಕ್ಕೂ ಮುನ್ನ
ನಿನ್ನ ಕೆನ್ನೆಯನೊಮ್ಮೆ ಹಾಗೆ ಮುಟಿ ನೋಡಿಕೋ;
ಸಣ್ಣ ಮಾತೂ ಆಡದಂತೆ
ಗೊಂಬೆಯಂತೆ ಕೂತ ನಿನ್ನ
ಕೆಣಕುವಾಗ ಚೂರು-ಪಾರು ಸಿಟ್ಟು ಮಾಡಿಕೋ!!

ಗಂಟು ಬಿದ್ದ ಮೊಗವನೊಲ್ಲೆ
ತುಂಟ ನಗೆಯ ಹಾಗೇ ಚೆಲ್ಲೇ!!
ಬಂಟನಾಗಿಬಿಡುವೆ ನಿನ್ನ ಚೆಲುವ ಪಾಲಿಗೆ;
ಹೊಗಳಿ, ಹೊಗಳಿ ಮಣಿಯಲಿಲ್ಲ
ನಿನ್ನ ಬಿಟ್ಟು ಬೇರೆಯಿಲ್ಲ
ಕನಸಿನಲ್ಲೂ ನಿನ್ನ ಹೆಸರ ಜಪಿಸಿ ನಾಲಿಗೆ!!

ಹಿಂದಿನಿಂದ ಚಿತ್ರ ತಾರೆ
ಹೊಸ ಸೀರೆ ಕೊಳ್ಳು ಬಾರೆ!!
ಅಂದವೊಡನೇ ಏನು ನಿನ್ನ ಸಿಗ್ಗು ಸಡಗರ?!!;
ಹತ್ತಿರಕ್ಕೆ ಬರುವೆ ನನ್ನ
ಕೊಲ್ಲುವಂತೆ ದಿಟ್ಟ ಹಿಡಿವೆ
ಕೊಟ್ಟರೇನು ಗಂಟು ಕಳೆವೆ ಕೆನ್ನೆಗುಂಗುರ?!!

ಬಣ್ಣ ಬಣ್ಣ ವೇಷ ತೊಟ್ಟು
ನಿನ್ನ ಸೆಳೆವ ನನ್ನ ಯತ್ನ
ಮಾತಿನಲ್ಲಿ ತಪ್ಪಿ ಕೂಡ ಬಣ್ಣ ತಾಳದು;
ನಮ್ಮ ಪ್ರೇಮ ನಮ್ಮ ಶಕ್ತಿ
ಸ್ವರ್ಗ ಸಿರಿಗೂ ಹೆಚ್ಚು ಆಸ್ತಿ
ನಿಂದಿಸುವವರೆದುರು ನಮ್ಮ ನೆರಳೂ ಬಾಗದು!!

                                                -- ರತ್ನಸುತ

ಗುಂಡಿಗೂ ಗಂಡಾಂತರ

ಗುಂಡಿ ಕಳಚಿ ಬಿತ್ತು
ಮತ್ತೊಂದು ಕೊಂಡುಕೊಳ್ಳಲೆಂದು
ಅಂಗಡಿಗೆ ಹೋದೆ;

ವಾಪಸ್ಸು ಬಂದವನೇ
ಇದ್ದೆಲ್ಲ ಗುಂಡಿಗಳ ಕಿತ್ತೆಸೆದೆ
ಏನಾಯಿತು? ಕೇಳಿ ಮುಂದೆ;

ಅಂಗಡಿಯವ ಕೇಳಿದ
"ಯಾವ ಬಣ್ಣ?"
ಹೌದು, ಯಾವ ಬಣ್ಣ?!!
ಕೊಂಡಾಗ ಕಡುಗೆಂಪು,
ಮೊದಲ ಒಗೆತಕ್ಕೇ ಮಂದಗೆಂಪು
ಮುಂದೆ ಕೇಸರಿ, ಹಳದಿ....
ಈಗ ಹಳದಿಯೇ?!!
ಮತ್ತೆ ಅಂಗಡಿಯವ-
"ಸಾರ್ ಯಾವ ಬಣ್ಣ?"
ನನಗೆ ಕೇಳಿಸಲೇ ಇಲ್ಲ!!

ಎಚ್ಚೆತ್ತು ಕೇಳಿದೆ
"ಇದ್ದೆಲ್ಲ ಬಣ್ಣಗಳ ತೋರಿ"
ಕೇಳಿದ
"ಡಿಜೈನೋ, ಡಿಜೈನ್ಲೆಸ್ಸೋ??
ಟ್ರಾನ್ಸ್ಪರೆಂಟೋ, ಇಲ್ಲ??
ಶೈನಿಂಗೋ, ಪ್ಲೈನೋ??
ನಾಲ್ಕು ತೂತೋ, ಎರಡೋ??"

ಮತ್ತೆ ಯೋಚಿಸಿದೆ;
ಶರ್ಟ್ ಕೊಂಡಗ ಗಮನಿಸಿರಲಿಲ್ಲ;
ಗಮನವೆಲ್ಲ ಬಟ್ಟೆಯ ಕ್ವಾಲಿಟಿ
ಸಹಾಯ ಸಖಿಯರ ಮೇಲೆ
ಪ್ರೈಸ್ ಟ್ಯಾಗ್ ಮೇಲಿತ್ತು!!

ಅಂಗಡಿಯವ ಗೊಣಗಿದ
ನನ್ನ ಕಿವಿಗೆ ತಟ್ಟಿತು;
ಇದ್ದುದರಲ್ಲಿ ಒಂದ ಆರಿಸಿಕೊಂಡೆ
ಲೆಕ್ಕ ಹಾಕಿದೆ...1,2,3....
ತಪ್ಪುತ್ತಾ ಹೋಯಿತು;
ದಿನಾಲೂ ನನ್ನ ಮಾನ ಕಾಯುತ್ತಿದ್ದ
ಪುಣ್ಯಾತ್ಮನ ಸ್ಥಿತಿಯಿದು!!

ಡಜನ್ ಕೊಂಡು ಮನೆಗೆ ಹಿಂದಿರುಗಿದೆ
ಇನ್ನು ಮುಂದೆ ಹೇಳೋದೇನಿದೆ?
ಎಲ್ಲ ತಿಳಿದಿರೋದೇ ತಾನೆ!!

                                    -- ರತ್ನಸುತ

ವಿಸ್ಮಿತನ ವರಸೆ

ಅಂದು ಉಟ್ಟ ಸೀರೆಯಲ್ಲಿ
ನೆಟ್ಟ ನೇರ ನೋಟದಲ್ಲಿ
ನನ್ನ ಕುಕ್ಕಿ ತಿನ್ನುವಂತೆ
ನೀನು ನೋಡುತಿದ್ದೆ;
ದೂರದಲ್ಲೇ ಇದ್ದರೂನು
ಪಕ್ಕ ಒಂದು ಚಾಪೆ ಹಾಸಿ 
ಹೃದಯದಲ್ಲಿ ತಂತಿ ಮೀಟಿ
ಸದ್ದು ಮಾಡುತಿದ್ದೆ!!

ಕದ್ದು ನೋಡಲೊಂದು ಪುಳಕ
ಮುದ್ದು ಮುಖವ ಕಂಡ ಬಳಿಕ
ಬೆಪ್ಪು ಮನದ ಕಪ್ಪು ಮೋರೆ
ಕೆಂಪು ಮಂಗನಂತೆ;
ಖುದ್ದು ನಾನೇ ಜಾರಿ ಬಿದ್ದು
ನಿನ್ನ ನೆಪವ ಮುಂದೆ ಇಟ್ಟೆ
ನೆನಪ ಮಬ್ಬು ವಸ್ತ್ರದಲ್ಲಿ
ಕಣ್ಣ ಸುತ್ತಿಕೊಂಡೆ!!

ಕೆಟ್ಟ ಕನಸು ಎಲ್ಲಿ ಬಿಟ್ಟೆ?!!
ಎಂಬುದೊಂದೂ ತಿಳಿಯುತಿಲ್ಲ 
ಮತ್ತೆ-ಮತ್ತೆ ನಿನ್ನ ಕಂಡು
ಇನ್ನೂ ಮೂಖನಾದೆ;
ಕಟ್ಟ ಕಡೆಯ, ತುತ್ತ ತುದಿಯ
ಪ್ರಶ್ನೆಯೆಂದು ದನಿಯನೆತ್ತಿ
ಮುಗಿವ ಹೊತ್ತು ಆಗುವಲ್ಲಿ
ಪೂರ್ತಿ ಸತ್ತು ಹೋದೆ!!

ಉತ್ತರಕ್ಕೆ ನೀನು ತಿರುಗಿ
ಉತ್ತರಕ್ಕೆ ಬೆನ್ನ ಕೊಡುವೆ
ತತ್ತರಿಸಿತು ದಿಕ್ಕು ಮರೆತ
ನನ್ನ ಒಂಟಿ ಜೀವ;
ಎತ್ತರಕ್ಕೆ ಏರಿ ನಿಂತೆ 
ಸಪ್ತ ಕಡಲ ಕುಡಿದು ಬಂದೆ
ನಿನ್ನ ಒಂದು ನಗೆಯ ಕಂಡು
ಒಡಲು ಪೂರ ತೇವ!!

ಶಬ್ಧವಾಗಿ, ಮೌನವಾಗಿ
ಸ್ತಬ್ಧವಾಗಿ, ನೀಳವಾಗಿ
ಮುಗಿಲ ಹಾಗೆ ನೀನು ಒಂದು
ಕಣ್ಣ ಮುಂದೆ ಒಗಟು;
ಒಂದು ದೀರ್ಘ ಕವನದಂತೆ
ಅಲ್ಲಿ ಇಲ್ಲಿ ಅರ್ಥವಾದೆ
ಏನೂ ತೋಚದಾಯಿತೀಗ
ನಿನ್ನ ಚೆಲುವ ಹೊರತು!!

                    -- ರತ್ನಸುತ

Monday, 19 May 2014

ಒಂದಿರುಳ ಕಥೆಯಲ್ಲ!!

ಕಪ್ಪು ಹಲಗೆಯ ಮೇಲೆ 
ಬಿಳಿಯಕ್ಷರ
ಸಿಪ್ಪೆ ಸುಲಿದರೆ ಹಿಂದೆ
ಮಧು ಸಾಗರ
ಸುತ್ತ ಕತ್ತಲು ಮೂಡಿ
ಸುಖಿ ಚಂದಿರ
ಜೋಡಿ ಬೆತ್ತಲ ಕೋಣೆ
ಮನ್ವಂತರ!!

ಹಕ್ಕು ಯಾರದು ಎಂದು
ಕಾದಾಡಿರಿ
ಸಿಕ್ಕ ಸಿಕ್ಕವ ಬಿಡದೆ
ಕಿಸೆಗಿರಿಸಿರಿ
ಒಂದು ಮಂಚಕೆ ಉಂಟು 
ನಾಲ್ಕು ಕಾಲು
ನಾಲ್ಕೂ ಒಂದಾದರದು
ಧನ್ಯ ಬಾಳು!!

ಉರುಳುರುಳಿದರೆ ಬಿಡಿ
ಸತ್ತು ಬಿಡಲಿ
ಊರ ತುಂಬ ಚಾಡಿ
ಹೇಳಿ ಬರಲಿ
ಕತ್ತು ಕೊಟ್ಟಿರಿ ಕೊನೆಗೆ
ಎದೆಯ ಒತ್ತಿ
ಬತ್ತೋ ಬೆವರಿಗೆ ಏಟು
ಅಹಂ ಭಕ್ತಿ!!

ಸಣ್ಣ ಪಿಸುಗುಟ್ಟುಗಳು
ಬೆಟ್ಟದಷ್ಟು
ಒಮ್ಮೊಮ್ಮೆ ಎಡವಟ್ಟು
ಆಗುವಷ್ಟು
ತುಟಿ ಬೀಗ ಜಡಿದರೆ
ಉಂಟು ಉಳಿವು
ಇಲ್ಲವಾದರೆ ನಡುವೆ
ಸ್ಥಗಿತ ಒಲವು!!

ರಂಪವಲ್ಲದ ಒಡಲ
ನಡು ಮಂಥನ
ಶಾಂತ ಚಿತ್ತಕೂ ಚೂರು
ರೋಮಾಂಚನ
ಗದ್ದೆ ರೊಚ್ಚಿಗೂ ಉಂಟು
ಹುಟ್ಟು ಗುಣವು
ಹದ್ದು ಮೀರದೇ ಉಳಿದು
ಎಂಥ ಗೆಲುವು?!!

                  -- ರತ್ನಸುತ

ಹೀಗಾಗಬಹುದಾದರೆ?!!

ಕೈಗಂಟಿದ ನೆತ್ತರನ್ನ
ನೆತ್ತರಲ್ಲೇ ತೊಳೆದು
ಗೋಳಿಟ್ಟರೇನು ಬಂತು
ಕಲೆ ಬಿಟ್ಟುಕೊಳ್ಳುವುದೇ?!!

ಸುಟ್ಟ ಗಾಯದ ಸುತ್ತ
ಹತ್ತು ಹನಿಗಳ ಹರಿಸಿ
ಬತ್ತಿ ಕಣ್ಗಳು ನೋವ
ಹೊಣೆ ಹೊತ್ತುಕೊಳ್ಳುವುದೇ?!!

ಕತ್ತು ಇಚುಕುವ ಹಸ್ತ
ಬೆಚ್ಚಗುಳಿಯಿತು ಎಂದು
ತುಟಿ ಕಚ್ಚಿಕೊಂಡರೆ
ಸಿಕ್ಕು ಸಡಿಲಾಗುವುದೇ?!!

ಮೌನ ದಿಬ್ಬದ ಮೇಲೆ
ಮಾತ ನೆರಳಾನಿಸದೆ
ಸೋತ ಮುಖವನು ಕಂಡು
ಜೀತ ಕೊಡಲಾಗುವುದೇ?!!

ಹಾಯೋ ದೋಣಿಯ ಮೇಲೆ
ಮರಳ ಯಾನಕೆ ಕೂತು
ಗೆಲುವ ಮಂತ್ರವ ಜಪಿಸಿ
ದಡವ ಮುಟ್ಟಲುಬಹುದೇ?!!

ಮೊಲೆಯ ಶಂಕಿಸಿ ತಾನು
ಹಸುಳೆ ನಿಂತರೆ ಹೇಗೆ
ಪ್ರವಹಿಸುವ ಜೀವದ್ರವ
ಮನವ ತುಂಬಲುಬಹುದೇ?!!

ಹೆಜ್ಜೆ ಗುರುತನು ಬಿಡಲು
ಅಂಜುವಾ ಪಾದದೊಳು
ಜಂಗಮನ ಜಾಡಲಿ
ಮೋಕ್ಷ ದಕ್ಕಲುಬಹುದೇ?!!

                     -- ರತ್ನಸುತ

ಮಲ್ಲಿ-ಕಳ್ಳಿ

ಕಿಳ್ಳಿಗೂ ಮಲ್ಲಿಗೂ ಮನ್ಸು;
ಮಲ್ಲಿ ಮೂಗಿಗ್ ಕಂಪು,
ಕಳ್ಳಿ ಮುಳ್ಳು ಚೂಪು!!

ಕಳ್ಳಿ ಮಲ್ಲೀನ್ ಕಾದಿದ್ಕೂ
ಮಲ್ಲಿ ಕಳ್ಳೀನ್ ನಂಬಿದ್ಕೂ
ಅರ್ಥ ಐತೆ ಅಂತ ಹೇಳೋದ್
ಬೋ ಕಷ್ಟ ತಗಳಿ.. !!

ದಾಟ್ಕಂಡ್ ಕಿತ್ತೋರ್ 
ಕೈನ ಪರ್ಚಿ
ಶಾಪ ಹಾಕ್ಸೊಂಡ್ ಕಳ್ಳಿ
ಅದ್ನೇ ನಂಬಿ
ಹಬ್ಕೊಂಡಿತ್ತು
ಪಾಪ ಮಲ್ಲಿ ಬಳ್ಳಿ...!!

ಮೇಲ್ಮೇಲ್ ಹೆಂಗೋ
ಆಳ್ದಾಗ್ ಹಂಗೇ
ಬೇರೂ ಬಿಗಿಯಾಗೈತೆ,
ತವ್ರಿಗ್ ಬಂದ್ ಮಗ್ಳೂ ಪಟ್ಳು-
ಆಸೆ; ಸಂದಾಗೈತೆ!!

ಅಣ್ಣ ಬೇರಿಗ್ ಚೂರಿ ಹಾಕಿ
ಕಿತ್ಕೊಟ್ನೊಂದ್ ಕಡ್ಡಿ
ಕೇಳಿಲ್ವೇನೋ ಪಾಪ ಅವ್ನ್ಗೆ
ಕಣ್ಣೀರ್ ಹಬ್ಸಿದ್ ಸುದ್ದಿ!!

ಮಲ್ಲಿ ಬೇರಿಗ್ ಅಂಟ್ಕೊಂಡಿತ್ತು
ಕಳ್ಳೀದ್ ಒಂದಿಷ್ಟ್ ಬೇರು
ಒಂದೇ ಮಣ್ಣ ಹಂಚ್ಕೊಂಡ್ ಬೆಳ್ದೋ
ಬ್ಯಾರೆ ಮಾಡೋರ್ಯಾರು?!!

ಮಗ್ಳು ಹಿತ್ಲಾಗ್ ಬಿತ್ತಿದ್ ಬಳ್ಳಿ
ಹೂವ ಏನೋ ಬಿಡ್ತು
ಸುತ್ತ ಹಬ್ಬಿದ್ ಕಳ್ಳಿ ಮುಳ್ಳು
ಕೈಯ್ನ ಚುಚ್ಚ್ತಾಯಿತ್ತು;

ಕಳ್ಳೀನ್ ಕಿತ್ತ್ರೆ ಮಲ್ಲಿ ಇಲ್ಲ
ಮಲ್ಲೀನ್ ಕಿತ್ತ್ರೆ ಕಳ್ಳಿ
ಎಲ್ಲಿ ಋಣ ಗಂಟ್ಬೀಳ್ತದೋ
ಹೇಳೋರ್ಯಾರು ಹೇಳಿ?!!

                      -- ರತ್ನಸುತ

ಹಬ್ಬದ ಕೊನೆಯಲ್ಲಿ

ಉರಿದದ್ದು ಸಾಕು
ಆರಿಸಿ ಒಲೆಯ
ಸುಟ್ಟದ್ದು ಸಾಕು
ತಿನ್ನುವ ಸಮಯ

ನಾಳೆಗೆ ಇಟ್ಟರೆ
ಕೆಡುಕಿನ ಭೀತಿ
ಕೊಟ್ಟೆವು ಇಂದಿಗೆ
ಸಾಕಷ್ಟು ಪ್ರೀತಿ

ಬೆಂದದ್ದು ಸಾಕು
ತಿಂದದ್ದು ಸಾಕು
ಮುಗಿದರೆದ್ದೇಳಿ
ಮುಗಿದು ಎದ್ದೇಳಿ

ಮುಂದಿದೆ ಬದುಕು
ಒಂದೊಂದು ದಳಕೂ 
ಬಾಯ್ಮುಚ್ಚಿದವರಿಗೂ
ಕೂಗಾಡಿದವರಿಗೂ

ನಿತ್ಯವೂ ಹಬ್ಬದಲಿ
ತೊಳೆಯದಿರಿ ಕೈಯ್ಯ
ಸಾಲ ತೀರಿಸಲೊಂದು
ಕಣ್ಣಿರಲಿ ಸದ್ಯ !!

ಹೊಸ ನೀರು ಬಂತು
ಹೊಸ ತೇರು ಬಂತು
ಇನ್ನು ತಿಳಿವುದು ಬಾಕಿ
ಒಳಿತೆಷ್ಟು ಕಂತು?!!

              -- ರತ್ನಸುತ

ಇಳಿಸಂಜೆ ಮಂಕಾಗಿ

ಸುಮ್ಮನೆ ಕೂತಿದ್ದೇ ಆಯಿತು,
ಗಂಟೆ ಮೀರಿ ಮುಳ್ಳು ಜಾರಿ
ಮತ್ತೊಂದು ಸುತ್ತಿಗೆ ಸಜ್ಜಾಗಿದೆ
ತುಟಿ ಕದಲುವ ಸೂಚನೆಯಿಲ್ಲ!!

ಕಣ್ಣಲ್ಲಿ ಧೂಳಿದ್ದೂ ತೆಗೆಯಲು
ಮುಂದಾಗದ ಕೈ ಬೆರಳನ್ನ
ಕಣ್ಣೆವೆ ಗೋಗರೆದು ಸುಮ್ಮನಾಯಿತು,
ಈಗ ಲೋಕವೆಲ್ಲ ಮಂಜು ಮಸುಕು!!

ಗಾಳಿಗೆ ದಾಳಿಗೊಳಗಾದ
ಪುಡಿಗೂದಲ ಸರಿಪಡಿಸಲು 
ಅದೆಷ್ಟು ಶಕ್ತಿ ವ್ಯರ್ಥ?!!
ಬದಲಿಗೆ ಹುಡುಕುವ ಬಾಳಿನರ್ಥ!!

ಕಾಲಡಿಗೆ ಸಿಕ್ಕಿ ಸತ್ತ ಗರಿಕೆಗೆ
ನೆಟ್ಟ ಬೇರಿನ ಮೂಲದಲ್ಲಿ
ಸಣ್ಣ ಮರುಕ;
ಎಲ್ಲಿ, ಒಬ್ಬರಡಿಗೊಬ್ಬರು ಸಿಲುಕಿದರೂ
ಸುಳುವಿಲ್ಲ ಹನಿಯ ಜನನ?!!

ಎಲೆಯುದುರಿ ಸುಮ್ಮನಾಯಿತು,
ಬೆಳಕು ಕರಗಿ ಗುಮ್ಮ ಆಯಿತು,
ಚಂದ್ರನಿಗೋ ಮಂಪರು
ಎಚ್ಚರಿಕೆಯ ಗಂಟೆ ಮೊಳಗೀತೇ?

ಸಣ್ಣ ಆಕಳಿಕೆಯ ವಿರಾಮದ ನಂತರ
ಮತ್ತೆ ಮುಂದುವರಿದ ಮೌನ ಸಲ್ಲಾಪ;
ಯಾರಿಗೆ ಪ್ರೀತಿ?
ಇಬ್ಬರಲ್ಲೂ ನಿರುತ್ತರದ ಛಾಯೆ!!

                             -- ರತ್ನಸುತ

ಆಸೆಗಳಂದಮೇಲೆ ಹೀಗಿರಬೇಕು

ಒಂದೇ ದಿನಕ್ಕೆ ಹೆಮ್ಮರವಾದ
ಆಸೆಗಳ ಆಯಸ್ಸು ಅದೊಂದೇ ದಿನ;

ಆಸೆಗಳಂದಮೇಲೆ ಚಿಗುರಬೇಕು,
ಸತಾಯಿಸಿ ಬೆಳೆಯಬೇಕು,
ಅಚ್ಚರಿಯಂತೆ ಹಬ್ಬಬೇಕು,
ಸೊಕ್ಕಿನಿಂದ ಕೊಬ್ಬಬೇಕು,
ಬಿಡಿಸಿಕೊಳ್ಳಲಾಗದಂತೆ ಬೆಸೆದು,
ಬಸಿದು ಬಿಡಬೇಕು ಮನಸನು
ಪೂರ್ವ ಪೀಡಿತ ಖಾಯಿಲೆಯಂತೆ!!

ನೆರಳಾಗಬೇಕು ಮರಿ ಚಿಗುರಿಗೆ
ಮಡಿಲಾಗಬೇಕು ಕಪಿ ಮನಸಿನ
ಕೊಂಬೆ ಕೊಂಬೆಯ ಜಿಗಿತಕ್ಕೆ;
ಒಣಗಿ, ಬೋಳು-ಬೋಳಾಗಿ
ಮತ್ತೆ ಹೊಸತನ್ನುಟ್ಟು
ಮೆರೆಯಬೇಕು ಮರೆಯದೆ
ಹುಟ್ಟಿಕೊಂಡುದರ ಮೂಲವನ್ನ!!

ಬೇರು ತಾ ಹರಡಿ
ಗಟ್ಟಿ ಬುಡ-ಕಾಂಡಗಳ ಸಹಿತ
ಆಳವ ಕೆದಕಬೇಕು
ಆಗಸಕ್ಕೆ ಲಗ್ಗೆಯಿಡಲು!!

ಗಾಳಿ, ಬಿಸಿಲು,
ಬರ, ನೆರೆಗಂಜದೆ
ದೃಢವಾಗಿ ನಿಲ್ಲಬೇಕು
ಗಂಡೆದೆಯೊಳಗೊಂದು
ಹೆಣ್ಮಯತೆಯ ಕಾದಿರಿಸಿ!!

ನೀಗಿದ ಬಳಿಕ
ನೆಲಕುರುಳಬೇಕು
ಗುರುತಲ್ಲೇ ಮತ್ತೆರಡ
ಚಿಗುರುಗೊಡುತ!!

ಮಿತಿಯಿಲ್ಲದ 
ಆಸೆ ಪಡುವ ಮನಸು 
ಬುದ್ಧನೆದುರು ನೈವೇದ್ಯವ
ಮುತ್ತಿಕೊಂಡ ನೊಣದಂತೆ!!

                      -- ರತ್ನಸುತ

Thursday, 15 May 2014

ನೀನು

ಜಗದಲ್ಲಿ ಪುಳಕಿತ-
ಗೊಳಿಸಿದವುಗಳ ಕರ್ತೃ
ಹತ್ತು ಹಲವು
ಮೊದಲಿಗೆ ನಿನ್ನ ಒಲವು!!

ವಯಸಲ್ಲಿ ಚಿಗುರಿದ
ಮೀಸೆಗೂ ಮೊದಲಿಗೆ
ಸಣ್ಣ ನಲಿವು
ಕಾರಣ ನಿನ್ನ ನಗುವು!!

ಆಟವಲ್ಲದ ಆಟದಲಿ
ಸೋಲಲ್ಲೂ ಬೀಗಿದ
ನಾ ಕ್ರೀಡಾ ಪಟುವು
ಅಲ್ಲಿತ್ತು ನನ್ನ ಗೆಲುವು!!

ಏರಿದ ತಾಪಕ್ಕೆ
ಗುಳಿಗೆ ನುಂಗಲು ಜಿಡ್ಡು- 
ಎಲ್ಲ ಸಲವೂ
ಅದು ಪ್ರೇಮ ಜರವು!!

ರಾಡಿಯಾದರೂ ಹಾರಿ 
ಉಜಾಲಕ್ಕೆ ಮೊರೆ ಹೋದೆ
ಕೆಸರ ಹರಿವು
ಅಲ್ಲಿ ನಿನ್ನ ಸುಳುವು!!

ಬರೆಯುತ್ತ ಹಗುರಾದೆ 
ಬರ ಬರುತ್ತಾ ಏಕೋ
ನಿನ್ನ ನಿಲುವು 
ನೆರಳಿಟ್ಟ ಹೊಂಗೆ ಮರವು!!

                     -- ರತ್ನಸುತ

ರಾಧೆ ಧಾರೆ

ಜ್ವಲಿಸುವ ಕಾರಣಕ್ಕೇ ಇರಬೇಕು,
ನಾ ಮಂಜಿನ ಹನಿಯಾಗಿ
ನಿನ್ನ ಕಾಯುವಿಕೆಯಲ್ಲಿ ಬೇಯುವುದು;
ಪ್ರಿಯತಮ, ನಿನ್ನಿಂದ ಅಳಿವು-
ಉಳಿವುಗಳೆರಡೂ ಅವಿಸ್ಮರಣೀಯ-
ಸೋಲುಗಳೆಂದರೆ ಬೇಸರ ಬೇಡ!!

ವಿಸ್ತರಿಸಿಕೊಂಡ ಸರೋವರವಾದಲ್ಲಿ
ನೀ ಹಂಸ ಹೆಜ್ಜೆಯನಿಟ್ಟು
ಎಬ್ಬಿಸಿದ ತರಂಗಗಳಲ್ಲಿಯ ಮಾಹಿತಿ
ಎಂಟೂ ದಡಕ್ಕೆ ತಲುಪಿತೇನೋ ನೋಡು!!
ನಡುವೆಲ್ಲಾ ಸೊರಗುತ್ತಿರುವ ನಾನು
ಅಂಚುಗಳಲ್ಲೇ ನೆರೆದಿದ್ದೇನೆ
ನಿನ್ನ ತುಂಟತನದ ಕಾರಣದಿಂದ!!

ಕಚ್ಚಿ ಎಂಜಲು ಬಿಟ್ಟು ಹೋದೆ-
ಮಾಗಿದ ಗಲ್ಲದ ಮೇಲೆ,
ಗಿಣಿಗಳಿಗಾವ ಹಣ್ಣೂ 
ರುಚಿಕಟ್ಟನಿಸುತ್ತಿಲ್ಲವಂತೆ;
ಕಣ್ಣಲ್ಲೇ ತಿನ್ನುವಂತೆ 
ಮಾರು ದೂರದಲ್ಲಿ ಕೂತು ಕೆಕ್ಕರಿಸುತ್ತಿವೆ;
ಮುಂದಿನ ಬೇಟಿಯಲ್ಲಿ
ನಿನಗೆ ದೃಷ್ಟಿ ಬಿಡಿಸಬೇಕು, ಬೇಡನ್ನದಿರು!!

ಗಡಿಬಿಡಿಯಲ್ಲಿ ಗೋಜಲಾಗಿಸಿಬಿಟ್ಟೆ
ಮನಸಲ್ಲಿ ನಿನಗಾಗಿ ನೇಯುತ್ತಿದ್ದ
ರೇಷಿಮೆ ಕರೆಯೋಲೆಯ;
ಇನ್ನು ನೀನೇ ಬರಬೇಕು
ಎಲ್ಲವ ಬಿಡಿಬಿಡಿಯಾಗಿ ಜೋಡಿಸಿ
ನನ್ನಪೇಕ್ಷೆಯಂತೆ ಓದಲಿಕ್ಕೆ;
ಆಹಾ!! 
ನಿನ್ನ ನೆನಪೂ ಒಂದು ನಲ್ಮೆಯ ತೆಕ್ಕೆ!!

ಬೆಳಕ ಹಚ್ಚಿಟ್ಟು ಕಾವಲಿರುವೆ ಇನಿಯ
ನೀ ಕೊಟ್ಟ ಧಾವಂತ ನೀಗುವಂತದ್ದಲ್ಲ!!
ನೀನೇ ಉರಿದಿರಬಹುದೇ ಬಹುಶಃ?
ಬೆಳಕ ಬಳುಕಿಗೆ ಸಿಗ್ಗು ಮೂಡುತಿದೆ!!
ನಿಜವೇ ಆಗಿದ್ದಲ್ಲಿ ಅಪ್ಪು ನನ್ನ;
ನೀ ದಹಿಸುವ ರಭಸವೇ 
ನನಗೆ ಮುಕ್ತಿ ಮಾರ್ಗ.....

                                 -- ರತ್ನಸುತ

ನೆನಪುಗಳೇ ಹೀಗೆ

ಎದೆ ಮೇಲೆ ವಜೆ ಇಟ್ಟು
ಹಾರದಂತೆ ಕಾಯ್ದುಕೊಂಡೆ
ಸುಕೋಮಲ ನೆನಪುಗಳ
ಜೋಪಾನ ಪಡಿಸಿ;
ಎಲ್ಲಿಂದಲೋ ಹಾರಿ ಬಂದು
ಮಧ್ಯೆ ನುಸುಳಿಕೊಂತು
ತುಂಟ ನೆನಪು,
ಮೇಲೊಂದು ಹುಸಿ ಹಾಳೆ
ಮರೆಸಿಟ್ಟೆ ಹಾಗೇ!!

ನಾ ಅಂದು ಬಿಕ್ಕಿದಾಗ
ಆಕೆ ಕೊಟ್ಟು ಹೋದ
ಕರವಸ್ತ್ರದ ಕಸೂತಿಯಲ್ಲಿ
ಗುಪ್ತವಾದ ಹೆಸರು
ನನ್ನದೋ, ಆಕೆಯದೋ?
ಇನ್ನೂ ಪತ್ತೆ ಹಚ್ಚಲಿದ್ದೇನೆ;
ಹೊತ್ತು ಮುಳುಗೆದ್ದು
ಮತ್ತೆ ಹೊದ್ದು ಮುಳುಗಲಿದೆ!!

ಅದೆಷ್ಟೋ ಕಣ್ಣುಗಳು
ಕೆಣಕುವ ನೋಟದಲ್ಲಿ
ಮೆಲುಕು ಹಾಕಿಕೊಂಡ
ಪ್ರಣಯವನ್ನು
ದಾಖಲು ಮಾಡಲಾಗದೆ 
ಸೋತ ಪ್ರಯತ್ನಗಳು
ತೀರದ ಅಧ್ಯಾಯಗಳಂತೆ
ಎದುರು ಚೇಲ್ಲಾಡಿಕೊಂಡಿವೆ!!

ಹೆಜ್ಜೆ ಗುರುತುಗಳು ಕವಲೊಡೆದು
ದಿಕ್ಕಾಪಾಲಾಗಿ
ಯಾವು ಯಾರವು ಎಂದು
ಶೋಧಿಸುವಲ್ಲೇ ಅರ್ಧ ಜನುಮ;
ಇನ್ನುಳಿದದ್ದು ಹಿಂಬಾಲಿಕೆಗೆ
ಕಾಡು-ಮೇಡು, ಬೆಟ್ಟ-ಇಳಿಜಾರು
ನೀರಲ್ಲೂ ಗುರುತಿಟ್ಟು
ತಲುಪುವುದೇ ಆಯಿತು!!

ಏನನ್ನೂ ಮರೆವಂತಿಲ್ಲ, 
ಯಾವೊಂದನ್ನೂ ತೊರೆವಂತಿಲ್ಲ;
ಎಲ್ಲವೂ ಸೂಕ್ಷ್ಮಾತಿ ಸೂಕ್ಷ್ಮ
ಜೇವನ ಸೂಚ್ಯಗಳೇ;
ವಜೆ ತುಸು ಭಾರದ್ದೇ ಬೇಕು
ಕೋಮಲ ನೆನಪುಗಳ ಹಿಡಿತಕ್ಕೆ,
ಮುಪ್ಪಿಗೆ ಮರುವಿದೆ
ನೆನಪುಗಳು ಮುಪಾಗವು!!

                          -- ರತ್ನಸುತ

Wednesday, 14 May 2014

ಕಣ್ಣೀರ ಕಾವ್ಯ

ಕಣ್ಣೀರೂ ಕೆಲವೊಮ್ಮೆ
ನೆಪ ಹುಡುಕುತ್ತದೆ
ಕೆನ್ನೆಯ ಹಾದಿ ಹಿಡಿದು
ಅಂಗೈಯ್ಯ ದಡದಲ್ಲಿ ಹದವಾಗಲು!!

ಗೊತ್ತಿದ್ದೂ ಕಣ್ಣು
ನಟಿಸಿ ಬೀಳ್ಗೊಡುತ್ತದೆ
ಕ್ಷಣ ಕಾಲವಾದರೂ
ಸಪೂರ ಹಿಂಗಿ ಹಗುರಾಗಲು!!

ಸೋಜಿಗದಲ್ಲೇ 
ಎಂದೂ ಮಾತನಾಡದ ಕೆನ್ನೆ
ತಡೆದೊಮ್ಮೆ ಕೇಳಿತು
"ನಿನಗೆ ಕಣ್ಣು ಮುಖ್ಯವೋ,
ನಾನೋ, ಇಲ್ಲವೇ ಅಂಗೈಯ್ಯೋ?!!"

ಅಲ್ಲಿ ತನಕ ಯಾರೊಂದಿಗೂ 
ಸಂಧಾನಕ್ಕೆ ಕೂಡದ ಕಂಬನಿ
ಹರಿವಿಗೆ ತಡೆಯೊಡ್ಡಿ
ಪಿಸು ಮಾತಲ್ಲಿ 
"ಕಣ್ಣು ಚಂಚಲತೆಯ ಕಲಿಸಿತು,
ನೀನು ಚಲನೆಯನು ಕಲಿಸಿದೆ,
ಅಂಗೈ ಚಿರಂತನವ ನೀಡಿತು;
ಹೀಗಿರಲು 
ಸ್ಥಾವರವ ನಂಬಿ ಕೂತರೆ
ನಿಮ್ಮಗಳ ಅರಿಯಲಿ ಹೇಗೆ?
ಬೆರೆಯಲಿ ಹೇಗೆ?" ಅನ್ನುವಾಗಲೇ...

ಕೇಳು-ಕೇಳುತ್ತ
ನವಿರಾದ ಕೆನ್ನೆ
ಸರಾಗಮಾನ ಜಾಡಿನ
ದಿಕ್ಕು ತೋರಿ
"ಇಗೋ ನಿನ್ನ ಮನೆ ದಾರಿ, ಜಾರು"
ಅನ್ನುವಷ್ಟರಲ್ಲೇ...

ನಲುಮೆಯ ಬೆರಳು
ತನ್ನೊಡಲ ನೀಡಿ
ಕಡಲನ್ನೇ ತೀಡಿ
"ಬಿಡು ಕೆನ್ನೆ ಇನ್ನು-
ಇದು ನನ್ನ ಪಾಲು,
ಬರೆಯಬೇಕಿದೆ ಕುರಿತು
ಇನ್ನೆರಡು ಸಾಲು" ಎನ್ನುತ್ತ
ಹಾಳೆಯೆದೆಗಿಟ್ಟು ಅದ
ನಿರ್ಮಿಸದೆ ಯಾವ ಕದ
ಪದ ಮಾಲೆ ಗೀಚಿತು!!

ಇವೆಲ್ಲದರ ನಡುವೆ
ಮನಸೊಂದೂ ಇದೆಯೆಂದು
ಸಾಬೀತು ಪಡಿಸಿತು;
ಕವಿಯೊಡನೆ ಕೈಗೂಡಿ
ಕಾವ್ಯ ಮಳೆಗರೆಯಿತು!!

ನೋಡು-ನೋಡುತ್ತಲೇ
ಮತ್ತೊಮ್ಮೆ ಕಣ್ಗರಗಿ
ಕೆನ್ನೆ ಹಸಿಯಾಯಿತು!!

               -- ರತ್ನಸುತ

ತಿಪ್ಪೆ ಗೊಬ್ಬರ

ಪದಗಳ ಕುಪ್ಪೆ,
ಭಾವಗಳ ತಿಪ್ಪೆ,
ನನ್ನ ದಿನಚರಿ;
ತಳದಲ್ಲಿ ಕೊಳೆತವು,
ನಡುವಲ್ಲಿ ಸತ್ತವು,
ಮೇಲೊಂದಿಷ್ಟು ಉಸಿರಾಟದ
ಕೊನೆಯ ಸರದಿ!!

ಯಾರೋ ತಿಂದುಗುಳಿದ 
ಬೀಜಕ್ಕೂ ಇದೆ 
ಸ್ಥಳಾವಕಾಶ;
ಚಿಗುರುಗೊಡುವ
ಔದಾರ್ಯತೆಗೆ
ಎಳ್ಳಷ್ಟೂ ಕುಂದಿಲ್ಲ!!

ಆಳಕ್ಕೆ ಕೆದಕಿದಷ್ಟೂ
ಎರೆ ಹುಳುಗಳಂತೆ
ಕವಿತೆಗಳ ಹಿಂಡು;
ತಲೆ ಯಾವುದೋ,
ಬುಡ ಯಾವುದೋ
ಅರ್ಥವಾಗದವು;
ಎಲ್ಲವೂ ಓದಿಕೊಂಡವರ
ಊಹೆಗೆ ನಿಲುಕುವವು!!

ನಾರುವುದು ದಿಟ,
ಕಣ್ದೆರೆದರೆ ನಷ್ಟವಿಲ್ಲ
ಮೂಗಿಗಷ್ಟೇ ಘಾಸಿ;
ಮನಸನ್ನ ತಟ್ಟಲೂ ಬಹುದು
ಒಂದಿಷ್ಟು ಸವಿಗಂಪು 
ಕ್ಷಮಾದಾನದ ಓದುಗರಲ್ಲಿ!!

                    -- ರತ್ನಸುತ

Tuesday, 13 May 2014

ಸೋತ ಸ್ವಗತಗಳು

ಮತ್ತೆ ಮತ್ತೆ ಸುಡುವ ಸ್ವಗತಗಳು
ಬೆರಳೆಣಿಕೆಯಷ್ಟೇ ಆಗಿದ್ದರೂ
ದರ್ಬಾರುಗಳಿಗೆ ಕ್ಷಾಮವಿಲ್ಲದಂತೆ
ಮೆರೆದಾಡುವಾಗ
ಸುಮ್ಮನೆ ಸೋತುಬಿಡುತ್ತೇನೆ
ಎಲ್ಲ ಶಕ್ತಿಯ ಮೂಟೆ ಕಟ್ಟಿ!!

ಯಾರ್ಯಾರೋ ಕೆತ್ತಿ, ಬಿತ್ತಿ ಹೋದ
ನನ್ನತನವನ್ನ ಒಪ್ಪುವುದೂ
ಒಪ್ಪದಿರುವುದಕ್ಕೂ ಕಾರಣಗಳಿಲ್ಲ;
ನನ್ನೊಳಗೆ ನಾನೇ ಸೊತಿದ್ದೇನೆ
ಇಲ್ಲವಾದಲ್ಲಿ ಸಾಲು-ಸಾಲು ಗಜಿನಿಗಳು
ದಂಡೆತ್ತಿ ಬರುತ್ತಿರಲಿಲ್ಲ ದೋಚಲು ನನ್ನ!!

ಬೆಳಕಲ್ಲಿ ಮುಗ್ಗರಿಸುವ ನಾನು
ತಾಮಸ ಪ್ರಿಯ;
ಹಾಗೆಂದು ನೆಪವ ಹೂಡಿ
ಕತ್ತಲಲ್ಲೇ ಉಳಿದು ಬಿಡುತ್ತೇನೆ
ನನ್ನ ಪಾಲಿಗೆ ನಾನೇ ಅಪರಿಚಿತನಾಗಿ
ಹೀಗೇ ಅನೇಕ ಬಾರಿ!!

ಬೇಕು ಬೇಡದವರಿಗೆಲ್ಲ
ನಾ ಜಾಹೀರಾದಾಗಲೆಲ್ಲ 
ಮರೆಯಲ್ಲಿ ಕೂತು ಅತ್ತಿದ್ದೇನೆ
ನನಗಾಗಿ ಅಲ್ಲದಿದ್ದರೂ
ಕಿವಿಗೊಟ್ಟು ಸಹಿಸಿಕೊಂಡವರಿಗಾಗಿ !!

ಸುತ್ತ ಗೋರಿಗಳ ಕಟ್ಟಿ
ಕಲ್ಲುಗಳ ನಿಲ್ಲಿಸಿ
ನಾಲ್ಕು ಸಾಲು ಗೀಚಲು ಹೆಣಗಾಡುತ್ತೇನೆ;
ಕ್ಷಮಿಸಲಿ, ಅವೆಲ್ಲ ನನ್ನ ಸ್ವಂತಿಕೆಯ
ಸೋತ ಕುರುಹುಗಳು!!

                           -- ರತ್ನಸುತ

ಮಹಾನಗರದ ಬೀದಿಯಲ್ಲಿ

ರಸ್ತೆ ಬದಿಯಲ್ಲಿ ತೆರೆದ ಚರಂಡಿಯ ಪಕ್ಕ
ಬೋಳು ಮರಕ್ಕೆ ಸಂತಾಪ ಸೂಚಿಸುತ್ತ
ಯಾರೋ ಸೇದಿ ಬಿಸಾಡಿದ ಬೀಡಿ-ಸಿಗರೇಟುಗಳ
ಆರದ ಕಿಡಿಯನ್ನ ಹೊಸಕುತಿದ್ದೆ!!

ಪುಟಾಣಿ ಪಾಪುವಿನ ಕೈಯ್ಯಿಂದ ಜಾರಿ
ಚರಂಡಿಗೆ ಬಿದ್ದ ಬಿಸ್ಕತ್ತಿಗೆ
ಅಯ್ಯೋ ಪಾಪ ಅನಿಸುವ ಮೊದಲೇ
ಅದರಮ್ಮ ಮತ್ತೊಂದ ಕೊಟ್ಟು ಸುಧಾರಿಸಿದಳಾದರೂ
ನನ್ನ ಕಣ್ಣೆಲ್ಲ ಆ ಬಿದ್ದ ಬಿಸ್ಕತ್ತಿನ ಮೇಲೆಯೇ!!

ಅಲ್ಲಲ್ಲೇ ಉಗುಳುತ್ತಾ ಬಂದ ಒಬ್ಬ
ಯಾರೊಂದಿಗೋ ಫೋನಲ್ಲಿ ಮಾತಾಡುತ್ತ 
ಹೀಗಂದು ಬಿಟ್ಟ
"ಬೆಂಗ್ಳೂರ್ ಗಬ್ಬೆದ್ದೋಗದೆ ಅಂತೀನಿ!!"

ಅಡ್ಡಾದಿಡ್ಡಿ ಕಾರುಗಳ ನಿಲುಗಡೆ;
ಹಾದು ಹೋದವರೆಲ್ಲ ಒಬ್ಬರಿಗಿಂತ ಒಬ್ಬರು
ಸಂಸ್ಕೃತ ಪಂಡಿತರಂತೆ ಅರಚಿ
ಒಂದೆರಡು ಕಾರುಗಳ ಗೀರಿ
ಜಲ್ಲಿ, ಮರಳಿನ ಗುಡ್ಡೆಗಳ ಮೇಲೆ ಹರಿದು
ದಾಟುವಷ್ಟರಲ್ಲಿ, ಕಿವಿಗಳ ಜನ್ಮ ಪಾವನ!!

ಶಿಶು ವೈದ್ಯರ ಬಳಿ ತೋರಿಸಲು
ಕೆಲವರು ನಡೆದು, ಆಟೋದಲ್ಲಿ,
ಮಾಮೂಲಿ ಕಾರು, ಏ.ಸಿ ಕಾರುಗಳಲ್ಲಿ
ಚಿಣ್ಣರೊಡನೆ ಇಳಿಯುತ್ತಿದ್ದರೆ
ಯೋಗ್ಯತೆ ಅಳೆದಳೆದು ಟೋಕನ್ ಕೊಡುತ್ತಿದ್ದ
ಕಾಂಪೌಂಡರ್ನ ಚಹರೆ ನೋಡಬೇಕಿತ್ತು!!

ಬಿರು ಬಿಸಿಲಲ್ಲಿ ಕಾಗೆ, ಗುಬ್ಬಿಗಳಿಗೆ
ನೀರಿಗಾಗಿ ಆಹಾಕಾರ,
ಎಲ್ಲೋ ಚೂರು ಗಟಾರಿನಲ್ಲಿ
ನಿಂತದ್ದನ್ನೇ ಕುಡಿಯುತ್ತಿದ್ದವು

ಕಣ್ಣಿಲ್ಲದ ಅಸಹಾಯಕರು
ದಾರಿಗೆ ತಡಕಾಡುತ್ತಿದ್ದರೆ
ಇದ್ದವರು ತಪ್ಪು ದಾರಿ ಹಿಡಿದು
ಮೆರೆದಾಡುತ್ತಿದ್ದರು!!

                      -- ರತ್ನಸುತ

ಬಹುಶಃ!!

ಹಲವು ಕಾಗದ ಚೂರುಗಳ ನಡುವೆ
ಅಡಗಿಸಿಟ್ಟ ಪ್ರೇಮ ಪತ್ರಗಳು
ತಂಗಾಳಿಗೆ ತಲೆದೂಗುತ್ತಲೇ
ಹಗುರಾಗಿ ಹಾರುವಾಗ
ತಡೆವ ಸಾಹಸಿ ತಾನಾಗದ ಮನಸು
ಪಿಸುಗುಟ್ಟಿತು ಹೀಗೆ
"ನೀನಾಗೇ ತಲುಪಿಬಿಡು
ನನ್ನ ಮನದನ್ನೆಯ ಮಡಿಲಿಗೆ!!"

ನಟ್ಟ ನಡುವೆ ಸಿಕ್ಕ ಸಿಕ್ಕವರ
ಓದಿಗೆ ಸಿಗದಂತೆ ಎಚ್ಚರ ವಹಿಸಿ
ಆಗಸವ ಸವರುತ್ತಲೇ ಸಾಗಿದೆ
ಭಾವನೆಗಳ ಒಂಟಿ ಸವಾರಿ

ಅಲ್ಲಲ್ಲಿ ಲಜ್ಜೆ ಕೆಂಪಾದ ಮುಗಿಲು
ಕದ್ದು ಓದಿರಬೇಕು ಚೂರು,
ಅಲ್ಲಿ ಚಂದದ ಬಣ್ಣ ಬಣ್ಣದ
ಚಿತ್ತಾರ ಗೀಚಿದವರಾದರೂ ಯಾರು?!!

ಹಾರಿದ ಪತ್ರಕ್ಕೆ ಟಪಾಲು ಪೆಟ್ಟಿಗೆಯ,
ರಾಯಭಾರಿಗಳ ಹಂಗಿಲ್ಲ;
ಅದರ ಮುಂಬದಿಗೆ
ವಿಳ್ಹಾಸವನ್ನೂ ಬರೆದಿಲ್ಲ ನಾನು!!

ಹೇಗೆ ತಲುಪಬಲ್ಲದು
ಆ ದೂರದೂರಿನ ಚಲುವೆಯ ಮಡಿಲ?!!
ತಣಿಸಬಲ್ಲದೇ
ದಾಸೋಹಿ ಕಣ್ಣುಗಳ ದಣಿವನು?!!

ಗುಡುಗು ಸಿಡಿಲ ಸಹಿತ
ದೋ ಎಂದು ಸುರಿದಿದೆ ಮಳೆ;
ಆಕೆ ಲಕೋಟೆ ಹರಿದಿರಬೇಕು,
ಓದುತ್ತ ಬಿಕ್ಕಿರಬೇಕು ಬಹುಶಃ!!

                          -- ರತ್ನಸುತ

Thursday, 8 May 2014

ಮತ್ತೊಂದು ಅಮರ ಕಥನ

ಒಂದೇ ಬಾಣದ ಗುರಿಗೆ ಎದೆ ಕೊಟ್ಟು
ಒಂದೇ ಪ್ರಾಣದ ಎರಡು ಜೀವಗಳು
ಕೊನೆಗೊಂದೇ ಉಸಿರಲ್ಲಿ ಉಳಿದೆಲ್ಲ ಆಸೆಗಳ
ಕಂಬನಿ ಜಾರಿಸಿದಂತೆ ಗಳ-ಗಳನೆ ಸುರಿದುಕೊಳ್ಳುವಾಗ,
ಸೀಳಿ ಹೊರಟ ಬಾಣವು ಒಮ್ಮೆ
ಹಿಂದಿರುಗಿ ನೋಡುವಾಸೆಯಲ್ಲಿ ಗೆಲ್ಲಬಹುದಾದರೆ
ಸೋತ ತನ್ನ ತಾನೇ ಶಪಿಸಿಕೊಂಡು ನಾಚಿ
ಅದಾವುದೋ ಮರದ ಕೊಂಬೆಗೆ
ತಲೆ ಕೊಟ್ಟು ಸಾಯದೇ ನರಳುವುದು;
ಇತ್ತ ಜೋಡಿ ಜೀವಗಳು ತನಗೆ ವಂದಿಸುತ್ತ
ತೋಳಲ್ಲಿ ಕೊನೆ ನೆನಪನ್ನು ಎಣಿಸುತ್ತಿದ್ದವು!!

ಅಲ್ಲಿ ಬೆರೆತ ಎರಡು ಹೃದಯದ ನೆತ್ತರು
ನಿಷ್ಕಲ್ಮಷ ಪ್ರೇಮದಲ್ಲಿ ಎಂದೂ ಒಂದಾಗದ
ಮೈ ಮಾಂಸಕ್ಕೆ ಶಾಂತಿ ಕೋರಿ
ನೈಸರ್ಗಿಕವಾಗಿ ಬಿಡಿಸಲಾಗದಂತೆ ಒಂದಾಗಿತ್ತು!!

ನಿಚ್ಚಲವಾಗಿದ್ದ ಗಿಡ, ಮರ, ಬಳ್ಳಿ, ಹೂಗಳು,
ಇರುವೆ, ಜೇಡ, ಮಂಗ, ಮರಿಗಳೆಲ್ಲ
ಕಣ್ತೇವದಲ್ಲಿ ಬೆನ್ನು ಮಾಡಿ ಬೀಳ್ಗೊಟ್ಟವು
ಕೊನೆಯ ಸರತಿಯ ಸುರತವ ಸ್ವಾಗತಿಸಿ!!

ಹೆಪ್ಪುಗಟ್ಟಿದ ಪ್ರೀತಿ ಕಂದು ಬಣ್ಣಕ್ಕೆ ತಿರುಗಿತ್ತು,
ಮರದೊಳಗೆ ತಲೆ ಮರೆಸಿಕೊಂಡ ಬಾಣದಂಚೂ
ಅಂತೆಯೇ ಕಂಗೊಳಿಸುತ್ತಿರಬೇಕು!!

ಬಾಣವೂ ಅಮರ ಪ್ರೇಮ ಕಥನದಷ್ಟೇ ಜೀವಂತ,
ಖಳನ ಪಾತ್ರದಲ್ಲಿ;
ಮಣ್ಣಾದ ಆ ಜೋಡಿ ಹಕ್ಕಿಗಳ ಪಾಲಿಗದು
ಬೆಸೆದ ಚಮ್ಮಾರನಂತೆ, ಕಥಾ ನಾಯಕನೇ!!

                                        -- ರತ್ನಸುತ

ಹಕ್ಕಿ ಮತ್ತು ನಾನು

ನನ್ನಂತೆಯೇ ಕಾಣುವ ಹಕ್ಕಿ
ನನ್ನ ಮೀರಿ ಹಾರುತ್ತಿದೆ ದಿಗಂತದಾಚೆ
"ಅರೆ; ನಿನಗೆ ರೆಕ್ಕೆಗಳಿಲ್ಲ, ಪುಕ್ಕಗಳಿಲ್ಲ
ನೀ ಹೇಗೆ ಅದರಂತೆ?" ಕೇಳಿತು ಮತ್ತೊಂದು ಹಕ್ಕಿ!!

ಇದು ಅಂತಃಕರಣದ ಸಾಮ್ಯತೆ,
ಹೊರನೋಟಕ್ಕೆ ನಾನೇ ಬೆರೆ, ಹಕ್ಕಿಯೇ ಬೇರೆ
ಒಳಗಿನ ಬೇಗುದಿಯ ಪರಿಮಿತಿಗೆ 
ನಾ ಅದರ ಸಾಧನ, ಅದು ನನ್ನದು!!

ನಾ ಒಬ್ಬಂಟಿಗ, ಅದೂ ಒಬ್ಬಂಟಿ;
ಇಲ್ಲವಾದರೆ ನಾ ಬೇಸರದ ಕಾಳುಗಳ
ಎರಚುವಾಗ ಅದೊಂದೇ ಹಾರಿ ಬಂದು
ಕೊಕ್ಕಿನಲ್ಲಿ ಹೆಕ್ಕಿ ಹಾರುವ ಬದಲು
ಅಲ್ಲೇ ಉಳಿದು ನನಗಾಗಿ ಬಿಕ್ಕುತ್ತಿರಲಿಲ್ಲ
ನಾನೂ ಅದ ಕಂಡು ಹನಿಯುತ್ತಿರಲಿಲ್ಲ!!

ದಿನಾಲೂ ಇದೇ ಆಗಿತ್ತು;
ನಾ ಅಳುವುದು, ತಾ ಅಳುವುದು,
ಇಬ್ಬರಿಗಿಬ್ಬರೂ ಅತ್ತು ಸುಮ್ಮನಾಗುವುದು;
ಒರೆಸುವ ಕೈ ಮಾತ್ರ ದೂರ-ದೂರ!!
ಕಣ್ಣೀರೂ ಒಂದು ಭಾಷೆ 
ಅರಿತುಕೊಂಡೆವು ಇಬ್ಬರ ನೋವುಗಳ;

ತನ್ನ ಮನದ ತೆಕ್ಕೆ ಶಿಥಿಲವಾದುದ
ಅದೆಷ್ಟು ಸಲೀಸಾಗಿ ಅರಿತುಕೊಂಡೆ!!
ಮೂಖ ಮನಸಿನ ಭಾವಸ್ಪಂದನ
ತಂತಾನೇ ಜರುಗಿತ್ತು;
ಆದಷ್ಟೂ ಕೊರತೆಗಳು
ಕಣ್ಣಲ್ಲೇ ವಿನಿಮಯಗೊಂಡವು!!

ಇಬ್ಬರಲ್ಲೂ ವಿರಕ್ತ ಭಾವ
ನನ್ನ ಗುರಿ ಮಣ್ಣಿನತ್ತ 
ಅದರದ್ದು ದೂರ ದಿಗಂತ
ಇಬ್ಬರೂ ಒಟ್ಟೊಟ್ಟಿಗೆ 
ಮೋಕ್ಷ ಪಡೆದುಕೊಳ್ಳುವವರಿದ್ದೇವೆ !!

                               -- ರತ್ನಸುತ

ಬೊಂಬಾಟ್ ಬಾಡೂಟ

ವಿಸ್ತಾರವಾದ ಮುತ್ತುಗದ ಎಲೆ ಮೇಲೆ
ಮೂಲೆಯಲ್ಲಿ ಶಾಸ್ತ್ರಕ್ಕಿಷ್ಟು ಉಪ್ಪು,
ಹಿಂದೆಯೇ ಸೌತೆ, ಈರುಳ್ಳಿ, ನಿಂಬೆಯ ಚೂರು;
ಒಂದು ಸುದೀರ್ಘ ಪಯಣ ಬೆಳೆಸಿದ ಹಣೆಯ ಬೆವರು!!

ಅಷ್ಟರಲ್ಲೇ ಮನವನರಿತಂತೆ
ಸ್ಟೀಲ್ ಬಕೆಟ್ಟಿನ ತುಂಬ
ಜಿಡ್ಡು ಪದರವ ಹೊತ್ತ
ಬಿಸಿ, ಬಿಸಿ ಬೋಟಿ ಗೊಜ್ಜು ಎಲೆಯಲ್ಲಿ!!

ಬಿಟ್ಟರೆ ಕಣ್ಣೇ ತಿಂದುಬಿಡಬಹುದು;
ಒಂದೇ ಬೆರಳನ್ನ ಮಸಾಲೆಗೆ ಅದ್ದಿ
ಬಾಯಿಗಿಟ್ಟು ಚಪ್ಪರಿಸುವಂತೆ ತೋಚುತ್ತಲೇ
ಖಾಲಿಯಾಗಿಯೇ ಹೋಗಿತ್ತು!!

ಕಾಯುವ ಮುನ್ನವೇ ಚಿಲ್ಲಿ ಚಿಕನ್,
ಕಬಾಬ್ ತುಂಡುಗಳು
ಬೆಂದ ನಾಲಗೆಯ ಮೇಲೆ ಮತ್ತಷ್ಟು ಬೇಯಲು
ತುದಿ ಮೂಳೆಯ ಮೇಲೆ ನಿಂತಿದ್ದವು !!

ನಿರ್ವಿಕಾರ ಸಿಡಿ ಮದ್ದುಗಳ ಬಾಣಲೆಯಲ್ಲಿ ಕಂಡ
ಮುದ್ದೆಯ ಗುಡ್ಡೆಯಲ್ಲಿ
ಎದೆಗಿಳಿವ ಗುಂಡೊಂದರ ಮೇಲೆ
ನನ್ನ ಹೆಸರೇ ಬರೆದಂತೆ ತೋಚಿತ್ತು!!

ತೀರಾ ಕೊಬ್ಬಿರದ ಕುರಿಯಲ್ಲೂ ಏಟು ಕೊಬ್ಬು?!!
ಎಳೆ ಮಾಂಸದ ಚೂರು, ಹಲ್ಲು ಹೊಕ್ಕ ನಾರು
ಅದರ ಪರಿವಿರದೆ ಮುರಿದ ಮುದ್ದೆಗೆ
ಮೋಕ್ಷ ಕಾಣಿಸಿದ ಮೇಲೆ, ಕಬಾಬಿಗೂ ಮೋಕ್ಷ!!

ಅಲ್ಲಿಗೆ ಮಲಗಿದ್ದ ಉದರದಲಿ ಮಿಂಚಿನ ಸಂಚಾರ,
ಮುಟನ್ ಬಿರಿಯಾನಿಯ ಘಮಲಿಗೆ
ಆಗಲೇ ತಿಂಬಿದ ತಾನು
ಸ್ಥಳಾವಕಾಶಕ್ಕೆ ಸಂಚು ರೂಪಿಸುತ್ತಿತ್ತು!!

ಒಂದು ಲೋಟ ಜೀರಿಗೆ ರಸ,
ಜೊತೆಗೊಂದು ಏಲಕ್ಕಿ ಬಾಳೆ;
ಅಚ್ಚುಕಟ್ಟಾದ ಬಾಡಿಗೆ ಉಪ್ಪಿನಗತ್ಯವೆಲ್ಲಿ?!!
ಮತ್ತೆ ನೀರಲ್ಲಿ ಕಲೆಸಿ ಬಿಟ್ಟೆ!!

ನಿಂಬೆ ಚೂರನು ಹಿಂಡಿ
ರಸವನ್ನ ಮುಂಗೈಗೆ ತಿಕ್ಕುವ ಮುನ್ನ
ಕೊನೆಯದಾಗಿ ನೆಕ್ಕದಿದ್ದರೆ
ಪೂರ್ಣತೆಯ ಪ್ರಾಪ್ತಿ ದೊರೆವುದಾದರೂ ಎಲ್ಲಿ?!!

ಸುಟ್ಟ ನಾಲಗೆಗೆ ಸಕ್ಕರೆಯ ಸುರಿದು
ಚೂರಡಿಕೆ, ಸುಣ್ಣ, ವಿಳ್ಯದೆಲೆ ಸುತ್ತಿ
ಜಗಿದ ಏಟಿಗೆ ಕೆಂಪೆದ್ದ ನಾಲಗೆಯ
ಹೊರಚಾಚಿ ಕಾಣುವ ಹೊತ್ತಿಗೆ 
ಮತ್ತೊಂದು ಪಂಕ್ತಿಯಲ್ಲಿ ಕೂತು
ಮತ್ತಷ್ಟು ಸೊರಗುಟ್ಟುವ ತವಕ!!

                           -- ರತ್ನಸುತ

Tuesday, 6 May 2014

ಅನುಭಾವ

ಮಳೆ ಹನಿಗೆ ಹಿಡಿದೆ
ತೆಂಗಿನ ಗರಿಯ
ಕಂಬನಿಗೆ ಹಿಡಿವೆ ಅಂಗೈಯ್ಯನು;
ಇನಿದನಿಗೆ ಹಿಡಿದೆ
ಈ ನನ್ನ ಕಿವಿಯ
ಮಾರ್ದನಿಗೆ ಕೊಡುವೆ ಹೃದಯವನ್ನು!!

ಕಡುಗಪ್ಪು ಬರಣಿ
ಒಪ್ಪುವುದು ಕಣ್ಣ
ಮೆದುವಾಗಿ ಅದ್ದು ಕಿರುಬೆರಳನು;
ವಿಸ್ತಾರವನ್ನೂ 
ಬೆಳಗುತ್ತ ಬರಲಿ
ಹದವಾಗಿ ಹರಡು ಕಣ್ಣೆವೆಯನು!!

ಮನಸಲ್ಲಿ ಜಾಗ
ಇರಿಸುತ್ತ ಈಗ
ದೈನಿಕ ಸಂತೆ ತೆರೆದು ಬಿಡುವೆ;
ಎಲ್ಲ ದುಬಾರಿ
ಆಭರಣಗಳಿಗೆ
ನೂರರ ಕಡಿತ ನಿನ್ನ ಸಲುವೇ!!

ಕನಸಲ್ಲಿ ಒಂದು
ಬೆಳಕಾಗಿ ಬಂದು
ನೆರಳಾಟಕೆ ನಾಂದಿ ಹಾಡುವಾಸೆ;
ಹೊಗಳೋಕೂ ಮುನ್ನ
ಹೆಗಲನ್ನ ಪಡೆವೆ
ಕೈ ಹಿಡಿಯಲಿ ನನ್ನ ಕರ್ಮ ಭಾಷೆ!!

ನಗುವಲ್ಲಿ ಸಿಲುಕಿ
ಎದೆಯಲ್ಲಿ ಗಿಲಕಿ
ಗಲ್ಲೆಂದು ಗುಲ್ಲೆಬ್ಬಿಸೋ ಹಾಗಿದೆ;
ಒಲವನ್ನು ಕೆದಕಿ
ಕೈಯ್ಯನ್ನು ಕುಲುಕಿ
ಒಪ್ಪಂದವ ಮುಗಿಸಿ ಬಿಡಬಾರದೇ?!!

                              -- ರತ್ನಸುತ

ಮೋಕ್ಷ

"ಅಧಮ,
ಪ್ರಥಮಗಳೆಲ್ಲವೂ ಶ್ರೇಷ್ಟವಲ್ಲ!!
ಅದು ಪ್ರೇಮವೋ, ಮೈಥುನವೋ
ಸ್ಖಲನವೋ, ಇಲ್ಲ ವ್ಯಾಗ್ರವೋ!!
ಎಲ್ಲವನ್ನೂ 
ಗಾಳಿಗೆ, ಮಣ್ಣಿಗೆ, ನೀರಿಗೆ
ಕಡೆಗೆ ದೇವರಿಗೂ ಅರ್ಪಿಸು,
ನಂತರಗಳೇ ಸೊಗಸು"

ಹೀಗಂದ ಜಂಗಮನೊಬ್ಬ
ಆಗಾಗ ಬಂದು ಹೋಗುತ್ತಾನೆ
ಕನಸಿನೂರ ಹೆಬ್ಬಾಗಿಲಲಿ
ನಾ ಒಂಟಿಯಾಗಿ ಮಣ್ಣ ಕೆದಕುವಾಗ!!

ನೆಲಗಚ್ಚಿದ ಕಣ್ಣನು ಮೇಲೆತ್ತಿ,
ಕೆನ್ನೆಗಾನಿಕೊಂಡ ನೀರ
ಒರೆಸುತ್ತಲೇ ಹೀಗಂದುಬಿಡುತ್ತಾನೆ
"ಸರ್ವಂ ಸುಂದರಂ, ಚಿತ್ತ ಚಂಚಲಂ"

ಹುಂಬನ ತಲೆಗೆ ಮತ್ತೊಂದು ಒಗಟು,
ಗೋಜಲಿಗೆ ಮತ್ತೊಂದು ಕಗ್ಗಂಟು;

ಅವನ ದನಿ ಅಷ್ಟಾಗಿ ನೆನಪಿಲ್ಲ,
ಮಾಸಲು ಮುಖ ನಿಖರವಾಗಿಲ್ಲ;
ಮೀಸೆ ಮರೆಯ ನಗು,
ಕಣ್ಣಡಿಯ ರೇಖೆಯ ಸಂಕುಚಿತ ಭಾವ
ಗೋಚರಿಸುವಷ್ಟರಲ್ಲೇ ಮರೆಯಾಗುತ್ತಾನೆ,
ಮತ್ತೆರಡು ಮಂತ್ರ ಪಠಿಸುತ್ತ!!

ಆ ನಂತರ ಸುದೀರ್ಘ ನಿದ್ದೆ,
ನಿಲ್ಲದ ಕನಸು;
ಹೆಬ್ಬಾಗಿಲಿಂದ ಹಟ್ಟಿಯ ಪಡಸಾಲೆ-
ತಲುಪುವಷ್ಟರಲ್ಲೇ ಎಚ್ಚರ;
ಸ್ವಪ್ನ ಸ್ಖಲನವಾಗಿತ್ತು
ನೀರಲ್ಲಿ ತೋಯ್ಸಿ ಬಿಟ್ಟೆ!!

                   -- ರತ್ನಸುತ

ನೆನಪುಗಳೇ ಹೀಗೆ !!

ಮೂಟೆ ಕಟ್ಟಿ ಬಿಸಾಡಬೇಕು
ಉರುಳಿದವಶೇಷಗಳಡಿಯಲ್ಲಿ
ಸಿಲುಕಿಕೊಂಡ ಅದೆಷ್ಟೋ ನೆನಪುಗಳು
ಉಸಿರಾಟ ನಿಲ್ಲಿಸಿವೆ;
ನೀರು ಚಿಮುಕಿಸಿದರೆ 
ಮರು ಜೀವ ಪಡೆಯಬಹುದೆಂಬ-
ಆತಂಕದಲಿ ಅತಿ ಜಾಗರೂಕತೆಯಲ್ಲಿ
ಅದುಮಿಟ್ಟೆ ಇದ್ದ ಉಸಿರನ್ನ ಉಡಾಯಿಸಿ!!

ವಿರಕ್ತಿಗೊಳಗಾದವುಗಳ ಉಳಿಸಿಬಿಟ್ಟೆ
ಧ್ಯಾನಸ್ಥ ಮನಸಿಗೆ ಬೆಂಬಲವಾಗಿ
ವಿಮುಕ್ತಿ ಬೇಡಿದವುಗಳ ಬುಡ ಸಹಿತ ಕಿತ್ತು
ವಿಮೋಚನೆ ನೀಡಿದೆ;
ಸಮಾದಿಗಳ ಬೇಲಿಯ ಒಳಗೆ
ಮಣ್ಣಿನಡಿಯಲ್ಲಿ ಬೆಚ್ಚಗುಳಿದವುಗಳ-
ಎದೆಗೆ ಗುದ್ದಲಿ ಇಟ್ಟು
ಮಹಲ್ಲುಗಳ ಕಟ್ಟಿ ಬಿಟ್ಟೆ!!

ಈಗಿರುವವುಗಳೆಲ್ಲ
ಬಣ್ಣದುಡುಪು ಧರಿಸಿದ
ನೆನ್ನೆ ಮೊನ್ನೆಯ ಬೆತ್ತಲ
ನವಜಾತ ಶಿಶುಗಳು;
ಸದ್ದು ಮೂಡುವಲ್ಲಿ ತಿರುಗಿ,
ಹದ್ದು ಮೀರುವಲ್ಲಿ ಪಳಗಿ
ಖುದ್ದು ಬೆಳೆದು ನಿಂತು
ಮನದೊಳಗೆಲ್ಲ ಬೇರನ್ನ ಹರಡಿಸಿವೆ!!

ಕಾವಿ ತೊಟ್ಟ ಮನಸಿಗೆ
ನೆನಪುಗಳ ಹಂಗೇತಕೆ?
ಬಹಿಷ್ಕಾರ ಹೇರಿ
ಸುಮ್ಮನಿರಬೇಕಿತ್ತಲ್ಲವೇ ತಾನು?!!
ಬೇಡದ ಕಡೆ ಬಿಟ್ಟುಕೊಂಡಂತೆ
ವೈರಾಗ್ಯದ ಹಾದಿಯ 
ಕ್ಲಿಷ್ಟಗೊಳಿಸಿದ್ದು
ಇದೇ ಮರು ಹಿಟ್ಟಿನ ನೆನಪುಗಳು!!

ಬಹುತೇಕ ದ್ವಂಸವಾದ ಎಲ್ಲವೂ
ಸಣ್ಣ ಸಲುಗೆಯ ಹಿಡಿದು
ಎಳೆದು ಕೂರಿಸುತ್ತಿವೆ ಎಲ್ಲವ;
ನೆನಪುಗಳಿಗೆ ಮರುವಿಲ್ಲ,
ಮರುವಲ್ಲೂ ನೆನೆಪಾಗುತ್ತವೆ!!

                        -- ರತ್ನಸುತ

ಮೌನದಲ್ಲೇ ಶರಣಾಗುತ್ತ!!

ಚೆಂದಗಾಣುವ ಹೂದೋಟದಲಿ
ಅಡ್ಡಾಡಿ ಬಂದು ದಣಿದ ಆತ್ಮಕ್ಕೆ
ಒಂದು ದೀರ್ಘ ಉಸಿರಿನ 
ಮೌನ ವಿಶ್ರಾಂತಿ ನೀಡಿ
ಎದೆ ಮೇಲೆ ಕೈ ಇಟ್ಟರೆ
ಸದ್ದೇ ಇಲ್ಲದಾಯಿತಲ್ಲ?!!
ಇದ್ದವರಲ್ಲಿ ಕದ್ದವರಾರು?!!

ಮೋಹಕ ಕಣ್ಣು,
ಮಾದಕ ನಗುವಿಗೆ
ಸೂತಕದ ಮನಸು 
ಮಡಿ ತಪ್ಪಿ ಮಿಡಿಯುತ್ತಿತ್ತು!!
ನೋಟ ನೆಟ್ಟೆಡೆಯೆಲ್ಲ
ಮಾಗಿದ ಹಣ್ಣಿನ ಗೊಂಚಲು;
ಆ ಗುಂಡು ತೋಪಿನ
ಕ್ಷಣಿಕ ಒಡೆಯನ ಉದ್ಗಾರ!!

ನಾಚಿ ಶರಣಾಗುತ್ತಿದ್ದ ನನ್ನ
ಪತ್ತೇದಾರಿ ಕಣ್ಣನು
ಥಟ್ಟನೆ ಸೆರೆ ಹಿಡಿದ
ಜೋಡಿಗಣ್ಣಿನ ಸಲುವಾಗಿ
ಅದೆಷ್ಟು ಗೀಚಿಕೊಂಡರೂ
ಅಸಮಾದಾನದ ನಿಟ್ಟುಸಿರೇ
ಬಳುವಳಿಯಾಗುತ್ತಿತ್ತು,
ಉಪಮೆ ಸೋಲುತ್ತಲೇ ಇತ್ತು!!

ನಿಮಿಷಕ್ಕೊಮ್ಮೆ ಬೆವರೊರೆಸಿ
ಕ್ರಾಪು ಸರಿ ಮಾಡಿಕೊಳ್ಳುತ್ತ
ಕಿಟಕಿ ಗಾಜಿಗೆ ಬಿಂಬಿಸಿಕೊಳ್ಳುವಾಗ
ಅಲ್ಲಿ ಕೊಲೆಯೆತ್ನಗಳ ವಿಫಲಕಾರಿ
ಹಗರಣಗಳ ಸುಳುವು;
ಆದರೂ ಜೀವಂತವಾಗಿದ್ದ ಗಾಜು,
ಮುಂದಿನ ಕೊಲೆಗಡುಕಿಯರ ಎದುರಿಸಲು
ನಡೆಸುತ್ತಿತ್ತು ರಿಯಾಜು!!

ಯಾವುದಾದರು ಬೈತಲೆ ಬೊಟ್ಟೋ,
ಕಾಲ್ಗೆಜ್ಜೆಯೋ, ಬಳೆಯ ಚೂರೋ ಸಿಕ್ಕಿದ್ದರೆ
ಕುಂಟು ನೆವ ಹೂಡಿ 
ಮಾತನಾಡಿಸುವ ಚಡಪಡಿಕೆ;
ದಾವಣಿಯ ಅಂಚು
ಫ್ಯಾನು ಗಾಳಿಗೆ ಹಾರಿ
ನನ್ನ ಗುಂಡಿಗೆ ಸಿಕ್ಕಿಕೊಂಡಿದ್ದರೆ
ಗುಂಡಿಗೆ ಸಮೇತ ಬಿಡಿಸಿ ಕೊಡುತ್ತಿದ್ದೆ!!

                                   -- ರತ್ನಸುತ

ಆ ಮೊದಲ ನೋಟಕ್ಕೆ

ತಂಗಾಳಿ ಪಿಸು ಮಾತ
ಆಡುವ ಸಮಯ
ನಿನ್ನನ್ನು ನೇವರಿಸಿ ಬಂತೇ ತಾನು?
ಮುಸ್ಸಂಜೆ ವೇಳೆಯಲಿ
ಗುಟ್ಟಿನ ವಿಷಯವ
ಯಾರಲ್ಲಿ ಹೇಳಲು ಬಂದೆ ನೀನು?

ಮುಗಿಲೆಲ್ಲ ಇಣುಕಿಣುಕಿ
ಮಗುವಂತೆ ತೋಚಿವೆ
ತಲೆ ಮೇಲೆ ನೀ ಹೊತ್ತು ತಂದೆಯೇನು?
ಆಕಾಶವೇ ಹಿಗ್ಗಿ
ಕೆಂಪಾಗಿ ಹೋಗಿದೆ
ಕೈಯ್ಯಾರೆ ನೀ ಹಚ್ಚಿ ಬಂದೆಯೇನು?

ಕ್ಷಿತಿಜಕ್ಕೂ ಕೌತುಕವು
ಸಹಿಸಲಾಗದೆ ಹೋಗಿ
ಕೈ ಚಾಚು ದೂರದಲಿ ಸಿಕ್ಕಿತಲ್ಲ!!
ಹಾರಾಟವ ಬೆಳೆಸಿ
ದಣಿವಾರಲು ಬಂದ
ಹಕ್ಕಿ ಈ ಮಾತನ್ನು ಒಪ್ಪುತಿಲ್ಲ!!

ಹೂವಲ್ಲಿಯ ಪೊಗರು
ಹೊತ್ತು ನಿಂತ ಬಳ್ಳಿ
ನಿನ್ನಿಂದ ಪಾಠವನು ಕಲಿಯಬೇಕು;
ದೇವಕನ್ಯೆಯರೆಂದು
ಕರೆಸಿಕೊಳ್ಳುವರೆಲ್ಲ
ಸಾಲಲ್ಲಿ ತುಸು ದೂರ ನಿಲ್ಲ ಬೇಕು!!

ಕವಿಯಾಗುವ ಸಲುವೆ
ಪರಿತಪಿಸುವ ಮನಸು
ನಿನ್ನಿಂದ ಸ್ಪೂರ್ತಿಯನು ತುಂಬಿಕೊಳಲಿ;
ಅಚ್ಚಾಗುವ ಹಾಳೆ
ತುಂಟ ರಸಿಕರ ಕಣ್ಣ
ಅರಳಿಸಿ ಕೆರಳಿಸಲು ಹಾರಿಬಿಡಲಿ!!

ಮುಂಗುರುಳ ಕುಣಿತಕ್ಕೆ
ಹೆಂಗರುಳು ಕಿವುಚುತ್ತ
ಹೊಟ್ಟೆ ಕಿಚ್ಚಿಗೆ ಕಾರಣ ಆಯಿತೇ?
ನಿನ್ನನ್ನು ಹೊಗಳೋಕೆ
ಎಲ್ಲ ಭಾಷೆಯ ಬಿಟ್ಟು
ಅಪ್ಪಟ ಕನ್ನಡವೇ ಬೇಕಾಯಿತೇ!!

                            -- ರತ್ನಸುತ

ಅಲ್ಪನ ಕೃ(ಖು)ಷಿ

ಅವರು ಬಿತ್ತರು ಪಕ್ವ ತಳಿ;
ನನ್ನ ಗುಡಾಣದ ಗಡಿಗೆಯಲಿ
ಎಂದೋ ಕೂಡಿಟ್ಟ ಕಾಳಿಗೆ
ಇರುವೆ, ಗೆದ್ದಲು, ಹೆಗ್ಗಣಗಳು ಮುತ್ತಿ
ಉಳಿದದ್ದು ಅರೆ ಬೊಗಸೆಯಷ್ಟು ಮಾತ್ರ!!

ಅದರಲ್ಲೂ
ಏಟು ಬಿದ್ದು
ಕಜ್ಜಿ ಹಿಡಿದವು,
ಟೊಳ್ಳಿನವು,
ಸುಳ್ಳಿನವು,
ಕಣ ಕಲ್ಲುಗಳು.
ನಡು-ನಡುವೊಂದು
ಚೂರು ಬರವಸೆ!!

ಕಳೆ ಬೀಡು ಬಿಟ್ಟ ನೆಲಕೆ
ನಿಸ್ಸಹಾಯಕ ನೇಗಿಲಿಟ್ಟು
ಕೊರೆದು ಹುತ್ತಷ್ಟೂ ನೋವು;
ಬಿರುಕು ಭೂಮಿಯ ಸೀಳಿದರೂ
ತೆವಾಂಶದ ಸುಳುವಿಲ್ಲ,
ಆದರೂ ಚೆಲ್ಲಿಕೊಂಡೆ
ಅಳಿದುಳಿದ ನಾಲ್ಕು ಕಾಳುಗಳ!!

ಆಶ್ಚರ್ಯವೆಂಬಂತೆ ಮಳೆ,
ಹಿಂದೆಯೇ ಬಿರು ಬಿಸಿಲು;
ಹೌಹಾರಿ ಜಾರಿ ಬಿದ್ದ
ಕೆಸರಿನ ಕೊಳದಲ್ಲೂ ನೀರಿಲ್ಲ!!

ಉರುಳಿದ ಕಾಲದ ಸಾಂತ್ವನಕೆ
ಪುಟಿದೆದ್ದ ಚಿಗುರು
ಮೊಣಕಾಲ ವರೆಗೆ;
ತೆನೆ ಹೂವು ಬಿಟ್ಟು
ದಿನಗಳೇ ಕಳೆದೋ,
ಎದೆ ಬಾರದ ಹೆಣ್ಣು
ನನ್ನವ್ವ ಹಡೆದಾಕೆ!!

ಅಲ್ಲೊಂದು ಇಲ್ಲೊಂದು
ಮೈನೆರೆದ ಪೈರು,
ತಿಳಿ ಹಳದಿ ಹಸಿರುಟ್ಟು
ಒಂದಿಷ್ಟು ಜೋರು;

ಕಣ ಮಾಡಿ,
ತೆನೆ ತೊನೆದು,
ತೂರಿದರೆ ಅಲ್ಲಿ
ಸಿಕ್ಕದ್ದು
ಬೊಗಸೆಯಷ್ಟೇ ಫಸಲು!!

ಮತ್ತೆ ಗುಡಾಣಕೆ-
ಚೆಲ್ಲುವ ಮನಸಿಲ್ಲ,
ಯಾರಾದರೂ ಕೊಳ್ಳುವಿರೇನು??

                             -- ರತ್ನಸುತ

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...