Friday 23 May 2014

ಪ್ರಣಯ ಅಶ್ವಮೇಧ

ನಿನ್ನ ಕಣ್ಗಳಲ್ಲಿ
ಸಾವಿರ ಕುದುರೆಗಳ ಓಟವ
ತೋರುತ್ತಲೇ ಲಗಾಮು ಬಿಗಿದ
ನನ್ನ ಹೃದಯದಲ್ಲಿ 
ಇನ್ನೂ ಲೆಕ್ಕಾಚಾರದ ಒಗಟು;
ಅಸಲಿಗೆ ಗೆದ್ದದ್ದಾವುದು
ಸೋತದ್ದಾವುದು? ಎಂದು!!

ಕಣ್ಗಪ್ಪಿನ ಸೀಮೆ ದಾಟಿ
ನೆಗೆದ ಕುದುರೆಗಳಿಗೆ
ಕಾಲೇ ಇರಲಿಲ್ಲವೆಂದು ನಂಬಲು
ನಾ ಕುರುಡನಲ್ಲ;
ಆದರೂ ಒಂದು ಸಣ್ಣ ಅನುಮಾನ,
ಮಂಕು ಬಡಿದಿತ್ತೇ ಬಹುಶಃ?!!

ಹುಡುಗಿ,
ಈಗೀಗ ಎದೆಯಲ್ಲಿ ಗುಡುಗು- ಸಿಡಿಲು;
ಎಲ್ಲೋ ದೂರದಲ್ಲಿ ಸಮೀಪಿಸುತ್ತಿರುವಂತೆ
ಆ ಹುಚ್ಚು ಕುದುರೆಗಳು,
ಕಂಪಿಸಿದೆ ಧೂಳೆಬ್ಬಿಸಿ ಎದೆಯ
ಅಂದಾಜಿಗೇ ಸಿಗದಂತೆ!!

ಅಷ್ಟು ವೇಗದ ನಡುವೆ
ದಣಿವಾರಿಸಿಕೊಳ್ಳಲಾದರೂ
ನೆರಳತ್ತ ಸಾಗಿ ನಿಂತದ್ದು
ಗಮನಕ್ಕೆ ಬರಲೇ ಇಲ್ಲವೆಂದರೆ
ಅತಿಶಯೋಕ್ತಿ ಅಲ್ಲ ಬಿಡು;
ಮರಳುಗಾಡಿನೆದೆ ಮೇಲೆ
ಪಾಪಸುಕಳ್ಳಿಗಳು ಬಿಟ್ಟರೆ
ನೆರಳಿನಾಸರೆಗೆ ಬೇರೇನೂ ಗತಿಯಿಲ್ಲ!!

ಗಾಣಿಗೆ ಹಿಂಡಿಯ ಚಕ್ಕೆಗಳ 
ಗೋದಾಮನ್ನ ನಿಮಿಷದಲ್ಲೇ
ಜೀರ್ಣಿಸಿಕೊಳ್ಳಬಲ್ಲ ಅಶ್ವಗಳಿಗೆ
ಹಸಿ ಭಾವನೆಗಳ ಭೋಜನವವಿಟ್ಟರೆ
ಮೂತಿ ತಿರುಗಿಸುತ್ತಿವೆ;
ಥೇಟು ನೀನು ಸಿಟ್ಟು ಮಾಡಿಕೊಂಡಂತೆ!!

ಹಿಡಿದು ಹೇಗೋ ಕಟ್ಟಿದ್ದಂತೂ ಆಯಿತು;
ಯುದ್ಧಕ್ಕೆ ಸಿದ್ಧನಾಗುವ ಮೊದಲೇ
ದಂಡೆತ್ತಿ ಬಂದ ನೀನು
ನನ್ನ ಕೊಲ್ಲುವುದು ಅದೆಷ್ಟು ಸಲೀಸೆಂದು
ನಿನಗೇ ಗೊತ್ತಾಗುತ್ತದೆ ಬಾ;
ಹಿಂದೆ ಅದೆಷ್ಟೋ ಬಾರಿ
ನನ್ನ ಇರಿದಿರಿದು ಕೊಂದಿದ್ದೆ
ನಿನಗೇ ಗೊತ್ತಿಲ್ಲದಂತೆ,
ಗೊತ್ತಿದ್ದೂ ಒಂದು ಕೊಲೆ ನಡೆದೇ ಹೋಗಲಿ!!

                                              -- ರತ್ನಸುತ

1 comment:

  1. ಆಸೆ ನೋಡು! ಭರತ ಮುನಿಗಳಿಗೆ?
    ’ಗೊತ್ತಿದ್ದೂ ಒಂದು ಕೊಲೆ ನಡೆದೇ ಹೋಗಲಿ!!’

    ಶೀರ್ಷಿಕೆಗೆ ಫುಲ್ ಮಾರ್ಕ್ಸ್...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...