ಮಹಾನಗರದ ಬೀದಿಯಲ್ಲಿ

ರಸ್ತೆ ಬದಿಯಲ್ಲಿ ತೆರೆದ ಚರಂಡಿಯ ಪಕ್ಕ
ಬೋಳು ಮರಕ್ಕೆ ಸಂತಾಪ ಸೂಚಿಸುತ್ತ
ಯಾರೋ ಸೇದಿ ಬಿಸಾಡಿದ ಬೀಡಿ-ಸಿಗರೇಟುಗಳ
ಆರದ ಕಿಡಿಯನ್ನ ಹೊಸಕುತಿದ್ದೆ!!

ಪುಟಾಣಿ ಪಾಪುವಿನ ಕೈಯ್ಯಿಂದ ಜಾರಿ
ಚರಂಡಿಗೆ ಬಿದ್ದ ಬಿಸ್ಕತ್ತಿಗೆ
ಅಯ್ಯೋ ಪಾಪ ಅನಿಸುವ ಮೊದಲೇ
ಅದರಮ್ಮ ಮತ್ತೊಂದ ಕೊಟ್ಟು ಸುಧಾರಿಸಿದಳಾದರೂ
ನನ್ನ ಕಣ್ಣೆಲ್ಲ ಆ ಬಿದ್ದ ಬಿಸ್ಕತ್ತಿನ ಮೇಲೆಯೇ!!

ಅಲ್ಲಲ್ಲೇ ಉಗುಳುತ್ತಾ ಬಂದ ಒಬ್ಬ
ಯಾರೊಂದಿಗೋ ಫೋನಲ್ಲಿ ಮಾತಾಡುತ್ತ 
ಹೀಗಂದು ಬಿಟ್ಟ
"ಬೆಂಗ್ಳೂರ್ ಗಬ್ಬೆದ್ದೋಗದೆ ಅಂತೀನಿ!!"

ಅಡ್ಡಾದಿಡ್ಡಿ ಕಾರುಗಳ ನಿಲುಗಡೆ;
ಹಾದು ಹೋದವರೆಲ್ಲ ಒಬ್ಬರಿಗಿಂತ ಒಬ್ಬರು
ಸಂಸ್ಕೃತ ಪಂಡಿತರಂತೆ ಅರಚಿ
ಒಂದೆರಡು ಕಾರುಗಳ ಗೀರಿ
ಜಲ್ಲಿ, ಮರಳಿನ ಗುಡ್ಡೆಗಳ ಮೇಲೆ ಹರಿದು
ದಾಟುವಷ್ಟರಲ್ಲಿ, ಕಿವಿಗಳ ಜನ್ಮ ಪಾವನ!!

ಶಿಶು ವೈದ್ಯರ ಬಳಿ ತೋರಿಸಲು
ಕೆಲವರು ನಡೆದು, ಆಟೋದಲ್ಲಿ,
ಮಾಮೂಲಿ ಕಾರು, ಏ.ಸಿ ಕಾರುಗಳಲ್ಲಿ
ಚಿಣ್ಣರೊಡನೆ ಇಳಿಯುತ್ತಿದ್ದರೆ
ಯೋಗ್ಯತೆ ಅಳೆದಳೆದು ಟೋಕನ್ ಕೊಡುತ್ತಿದ್ದ
ಕಾಂಪೌಂಡರ್ನ ಚಹರೆ ನೋಡಬೇಕಿತ್ತು!!

ಬಿರು ಬಿಸಿಲಲ್ಲಿ ಕಾಗೆ, ಗುಬ್ಬಿಗಳಿಗೆ
ನೀರಿಗಾಗಿ ಆಹಾಕಾರ,
ಎಲ್ಲೋ ಚೂರು ಗಟಾರಿನಲ್ಲಿ
ನಿಂತದ್ದನ್ನೇ ಕುಡಿಯುತ್ತಿದ್ದವು

ಕಣ್ಣಿಲ್ಲದ ಅಸಹಾಯಕರು
ದಾರಿಗೆ ತಡಕಾಡುತ್ತಿದ್ದರೆ
ಇದ್ದವರು ತಪ್ಪು ದಾರಿ ಹಿಡಿದು
ಮೆರೆದಾಡುತ್ತಿದ್ದರು!!

                      -- ರತ್ನಸುತ

Comments

  1. ಬಹುಶಃ ಈವತ್ತಿನ. ಎಲ್ಲ ಮಹಾ ನಗರಗಳ ಅಧೋಗತಿಯೂ ಇದೇ ಏನೋ?
    ಯಾವತ್ತೋ ಇದರ ಓಘಕ್ಕೆ ಬಿದ್ದು ನಾವೂ ನಮ್ಮತನ ಕಳೆದುಕೊಂಡು ಬಿಟ್ಟಿದ್ದೀವೇನೋ ಅಲ್ಲವೇ?

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩