ಉಸಿರ ಐಸಿರಿ

ಎಳೆ ಚಿಗುರ ಹೊಳಪಲ್ಲಿ
ಹೀಗೊಂದು ಹಾಡು
ಹಕ್ಕಿ ಮುಕ್ಕುತ ಅದನು
ಇಂಪಾದ ಕಾಡು
ಉದುರುವ ಲಯದಲ್ಲಿ
ಹದವಾದ ಪ್ರೇಮ
ಆ ಮರ ಈ ಮರ
ಅಜರಾಮ"ರಾಮ"

ಬಾನೆಲ್ಲ ಬನವಾಗಿ
ಹೂವಾಗಿ ನಗಲು
ಮುಂಗೋಪಿ ರವಿ ತಾನು
ಸಂಗಾತಿ ಮುಗಿಲು
ತೊರೆಯೊಂದರಡಿಯಲ್ಲಿ
ನವಿರಾದ ಉರುಟು
ಭೂತಾಯಿ ಮಡಿಲೆಲ್ಲ
ಹೆಜ್ಜೆಜ್ಜೆ ಒಗಟು!!

ಕಡಲಾಳ ಜಗದಲ್ಲಿ
ಕನಸೆಂಬ ಮತ್ಸೆ
ಅಲೆಗಳೂ ಅರಿತಿವೆ
ದಡದಾ ಜಿಗುಪ್ಸೆ
ಕ್ಷಿತಿಜಕ್ಕೆ ಕೈ ಚಾಚಿ
ಬರೆವಾಕ್ಷರಕ್ಕೆ
ನಮ್ಮದೇ ಮೌನವಿದೆ
ಶಬ್ಧಾರ್ಥವೇಕೆ?!!

ತಂಪಾದ ತಿಳಿಗಾಳಿ
ಶ್ರವಣಕ್ಕೆ ಪ್ರೀತಿ
ಎದೆ ಗೂಡ ಮೊಗಸಾಲೆ
ಪದಮಾಲೆ ದಾಟಿ
ಮೊದಲಾದ ಸಾಲಲ್ಲಿ
ಬದಲಾದ ಭಾವ
ಇದ್ದಲ್ಲೇ ಕಂಪಿಸಿತು
ಶ್ರೀಮಂತ ಜೀವ!!

ಚಂದ್ರಂಗೂ ಮನಸಾಗಿ
ಮುಗಿಬಿದ್ದು ಬಂದ
ನಕ್ಷತ್ರ ಮಿನುಗಲ್ಲಿ
ಎಂಥ ಆನಾಂದ!!
ಹಸಿರುಟ್ಟ ಗೌರಮ್ಮ
ಉಸಿರಿತ್ತ ತಾಯಿ
ವನದೇವಿ ನಗುವಾಗ
ಮೊಗೆವಾಸೆ ಕೈಯ್ಯಿ!!

             -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩