ಮೌನದಲ್ಲೇ ಶರಣಾಗುತ್ತ!!

ಚೆಂದಗಾಣುವ ಹೂದೋಟದಲಿ
ಅಡ್ಡಾಡಿ ಬಂದು ದಣಿದ ಆತ್ಮಕ್ಕೆ
ಒಂದು ದೀರ್ಘ ಉಸಿರಿನ 
ಮೌನ ವಿಶ್ರಾಂತಿ ನೀಡಿ
ಎದೆ ಮೇಲೆ ಕೈ ಇಟ್ಟರೆ
ಸದ್ದೇ ಇಲ್ಲದಾಯಿತಲ್ಲ?!!
ಇದ್ದವರಲ್ಲಿ ಕದ್ದವರಾರು?!!

ಮೋಹಕ ಕಣ್ಣು,
ಮಾದಕ ನಗುವಿಗೆ
ಸೂತಕದ ಮನಸು 
ಮಡಿ ತಪ್ಪಿ ಮಿಡಿಯುತ್ತಿತ್ತು!!
ನೋಟ ನೆಟ್ಟೆಡೆಯೆಲ್ಲ
ಮಾಗಿದ ಹಣ್ಣಿನ ಗೊಂಚಲು;
ಆ ಗುಂಡು ತೋಪಿನ
ಕ್ಷಣಿಕ ಒಡೆಯನ ಉದ್ಗಾರ!!

ನಾಚಿ ಶರಣಾಗುತ್ತಿದ್ದ ನನ್ನ
ಪತ್ತೇದಾರಿ ಕಣ್ಣನು
ಥಟ್ಟನೆ ಸೆರೆ ಹಿಡಿದ
ಜೋಡಿಗಣ್ಣಿನ ಸಲುವಾಗಿ
ಅದೆಷ್ಟು ಗೀಚಿಕೊಂಡರೂ
ಅಸಮಾದಾನದ ನಿಟ್ಟುಸಿರೇ
ಬಳುವಳಿಯಾಗುತ್ತಿತ್ತು,
ಉಪಮೆ ಸೋಲುತ್ತಲೇ ಇತ್ತು!!

ನಿಮಿಷಕ್ಕೊಮ್ಮೆ ಬೆವರೊರೆಸಿ
ಕ್ರಾಪು ಸರಿ ಮಾಡಿಕೊಳ್ಳುತ್ತ
ಕಿಟಕಿ ಗಾಜಿಗೆ ಬಿಂಬಿಸಿಕೊಳ್ಳುವಾಗ
ಅಲ್ಲಿ ಕೊಲೆಯೆತ್ನಗಳ ವಿಫಲಕಾರಿ
ಹಗರಣಗಳ ಸುಳುವು;
ಆದರೂ ಜೀವಂತವಾಗಿದ್ದ ಗಾಜು,
ಮುಂದಿನ ಕೊಲೆಗಡುಕಿಯರ ಎದುರಿಸಲು
ನಡೆಸುತ್ತಿತ್ತು ರಿಯಾಜು!!

ಯಾವುದಾದರು ಬೈತಲೆ ಬೊಟ್ಟೋ,
ಕಾಲ್ಗೆಜ್ಜೆಯೋ, ಬಳೆಯ ಚೂರೋ ಸಿಕ್ಕಿದ್ದರೆ
ಕುಂಟು ನೆವ ಹೂಡಿ 
ಮಾತನಾಡಿಸುವ ಚಡಪಡಿಕೆ;
ದಾವಣಿಯ ಅಂಚು
ಫ್ಯಾನು ಗಾಳಿಗೆ ಹಾರಿ
ನನ್ನ ಗುಂಡಿಗೆ ಸಿಕ್ಕಿಕೊಂಡಿದ್ದರೆ
ಗುಂಡಿಗೆ ಸಮೇತ ಬಿಡಿಸಿ ಕೊಡುತ್ತಿದ್ದೆ!!

                                   -- ರತ್ನಸುತ

Comments

  1. ಕೆಲ ಹಣ್ಣುಗಳು ಮಾಗಿದಷ್ಟೂ ರುಚಿಗಟ್ಟು...
    ಅನುಭವದ ಮಾತೇ ಭರತಮುನಿಗಳೇ?

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩