ಸೋತ ಸ್ವಗತಗಳು

ಮತ್ತೆ ಮತ್ತೆ ಸುಡುವ ಸ್ವಗತಗಳು
ಬೆರಳೆಣಿಕೆಯಷ್ಟೇ ಆಗಿದ್ದರೂ
ದರ್ಬಾರುಗಳಿಗೆ ಕ್ಷಾಮವಿಲ್ಲದಂತೆ
ಮೆರೆದಾಡುವಾಗ
ಸುಮ್ಮನೆ ಸೋತುಬಿಡುತ್ತೇನೆ
ಎಲ್ಲ ಶಕ್ತಿಯ ಮೂಟೆ ಕಟ್ಟಿ!!

ಯಾರ್ಯಾರೋ ಕೆತ್ತಿ, ಬಿತ್ತಿ ಹೋದ
ನನ್ನತನವನ್ನ ಒಪ್ಪುವುದೂ
ಒಪ್ಪದಿರುವುದಕ್ಕೂ ಕಾರಣಗಳಿಲ್ಲ;
ನನ್ನೊಳಗೆ ನಾನೇ ಸೊತಿದ್ದೇನೆ
ಇಲ್ಲವಾದಲ್ಲಿ ಸಾಲು-ಸಾಲು ಗಜಿನಿಗಳು
ದಂಡೆತ್ತಿ ಬರುತ್ತಿರಲಿಲ್ಲ ದೋಚಲು ನನ್ನ!!

ಬೆಳಕಲ್ಲಿ ಮುಗ್ಗರಿಸುವ ನಾನು
ತಾಮಸ ಪ್ರಿಯ;
ಹಾಗೆಂದು ನೆಪವ ಹೂಡಿ
ಕತ್ತಲಲ್ಲೇ ಉಳಿದು ಬಿಡುತ್ತೇನೆ
ನನ್ನ ಪಾಲಿಗೆ ನಾನೇ ಅಪರಿಚಿತನಾಗಿ
ಹೀಗೇ ಅನೇಕ ಬಾರಿ!!

ಬೇಕು ಬೇಡದವರಿಗೆಲ್ಲ
ನಾ ಜಾಹೀರಾದಾಗಲೆಲ್ಲ 
ಮರೆಯಲ್ಲಿ ಕೂತು ಅತ್ತಿದ್ದೇನೆ
ನನಗಾಗಿ ಅಲ್ಲದಿದ್ದರೂ
ಕಿವಿಗೊಟ್ಟು ಸಹಿಸಿಕೊಂಡವರಿಗಾಗಿ !!

ಸುತ್ತ ಗೋರಿಗಳ ಕಟ್ಟಿ
ಕಲ್ಲುಗಳ ನಿಲ್ಲಿಸಿ
ನಾಲ್ಕು ಸಾಲು ಗೀಚಲು ಹೆಣಗಾಡುತ್ತೇನೆ;
ಕ್ಷಮಿಸಲಿ, ಅವೆಲ್ಲ ನನ್ನ ಸ್ವಂತಿಕೆಯ
ಸೋತ ಕುರುಹುಗಳು!!

                           -- ರತ್ನಸುತ

Comments

  1. ಈ ಸ್ವಗತಗಳನ್ನು ನಮ್ಮ ಪರವಾಗಿ ನೀವು ಬರೆದುಕೊಟ್ಟಂತಿದೆ, ಅಷ್ಟರ ಮಟ್ಟಿಗೆ ನೂರಕ್ಕೆ ಇನ್ನೂರಷ್ಟು ತಾಳೆಯಾಗುತಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩