ಗುಂಡಿಗೂ ಗಂಡಾಂತರ

ಗುಂಡಿ ಕಳಚಿ ಬಿತ್ತು
ಮತ್ತೊಂದು ಕೊಂಡುಕೊಳ್ಳಲೆಂದು
ಅಂಗಡಿಗೆ ಹೋದೆ;

ವಾಪಸ್ಸು ಬಂದವನೇ
ಇದ್ದೆಲ್ಲ ಗುಂಡಿಗಳ ಕಿತ್ತೆಸೆದೆ
ಏನಾಯಿತು? ಕೇಳಿ ಮುಂದೆ;

ಅಂಗಡಿಯವ ಕೇಳಿದ
"ಯಾವ ಬಣ್ಣ?"
ಹೌದು, ಯಾವ ಬಣ್ಣ?!!
ಕೊಂಡಾಗ ಕಡುಗೆಂಪು,
ಮೊದಲ ಒಗೆತಕ್ಕೇ ಮಂದಗೆಂಪು
ಮುಂದೆ ಕೇಸರಿ, ಹಳದಿ....
ಈಗ ಹಳದಿಯೇ?!!
ಮತ್ತೆ ಅಂಗಡಿಯವ-
"ಸಾರ್ ಯಾವ ಬಣ್ಣ?"
ನನಗೆ ಕೇಳಿಸಲೇ ಇಲ್ಲ!!

ಎಚ್ಚೆತ್ತು ಕೇಳಿದೆ
"ಇದ್ದೆಲ್ಲ ಬಣ್ಣಗಳ ತೋರಿ"
ಕೇಳಿದ
"ಡಿಜೈನೋ, ಡಿಜೈನ್ಲೆಸ್ಸೋ??
ಟ್ರಾನ್ಸ್ಪರೆಂಟೋ, ಇಲ್ಲ??
ಶೈನಿಂಗೋ, ಪ್ಲೈನೋ??
ನಾಲ್ಕು ತೂತೋ, ಎರಡೋ??"

ಮತ್ತೆ ಯೋಚಿಸಿದೆ;
ಶರ್ಟ್ ಕೊಂಡಗ ಗಮನಿಸಿರಲಿಲ್ಲ;
ಗಮನವೆಲ್ಲ ಬಟ್ಟೆಯ ಕ್ವಾಲಿಟಿ
ಸಹಾಯ ಸಖಿಯರ ಮೇಲೆ
ಪ್ರೈಸ್ ಟ್ಯಾಗ್ ಮೇಲಿತ್ತು!!

ಅಂಗಡಿಯವ ಗೊಣಗಿದ
ನನ್ನ ಕಿವಿಗೆ ತಟ್ಟಿತು;
ಇದ್ದುದರಲ್ಲಿ ಒಂದ ಆರಿಸಿಕೊಂಡೆ
ಲೆಕ್ಕ ಹಾಕಿದೆ...1,2,3....
ತಪ್ಪುತ್ತಾ ಹೋಯಿತು;
ದಿನಾಲೂ ನನ್ನ ಮಾನ ಕಾಯುತ್ತಿದ್ದ
ಪುಣ್ಯಾತ್ಮನ ಸ್ಥಿತಿಯಿದು!!

ಡಜನ್ ಕೊಂಡು ಮನೆಗೆ ಹಿಂದಿರುಗಿದೆ
ಇನ್ನು ಮುಂದೆ ಹೇಳೋದೇನಿದೆ?
ಎಲ್ಲ ತಿಳಿದಿರೋದೇ ತಾನೆ!!

                                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩