Monday, 19 May 2014

ಹೀಗಾಗಬಹುದಾದರೆ?!!

ಕೈಗಂಟಿದ ನೆತ್ತರನ್ನ
ನೆತ್ತರಲ್ಲೇ ತೊಳೆದು
ಗೋಳಿಟ್ಟರೇನು ಬಂತು
ಕಲೆ ಬಿಟ್ಟುಕೊಳ್ಳುವುದೇ?!!

ಸುಟ್ಟ ಗಾಯದ ಸುತ್ತ
ಹತ್ತು ಹನಿಗಳ ಹರಿಸಿ
ಬತ್ತಿ ಕಣ್ಗಳು ನೋವ
ಹೊಣೆ ಹೊತ್ತುಕೊಳ್ಳುವುದೇ?!!

ಕತ್ತು ಇಚುಕುವ ಹಸ್ತ
ಬೆಚ್ಚಗುಳಿಯಿತು ಎಂದು
ತುಟಿ ಕಚ್ಚಿಕೊಂಡರೆ
ಸಿಕ್ಕು ಸಡಿಲಾಗುವುದೇ?!!

ಮೌನ ದಿಬ್ಬದ ಮೇಲೆ
ಮಾತ ನೆರಳಾನಿಸದೆ
ಸೋತ ಮುಖವನು ಕಂಡು
ಜೀತ ಕೊಡಲಾಗುವುದೇ?!!

ಹಾಯೋ ದೋಣಿಯ ಮೇಲೆ
ಮರಳ ಯಾನಕೆ ಕೂತು
ಗೆಲುವ ಮಂತ್ರವ ಜಪಿಸಿ
ದಡವ ಮುಟ್ಟಲುಬಹುದೇ?!!

ಮೊಲೆಯ ಶಂಕಿಸಿ ತಾನು
ಹಸುಳೆ ನಿಂತರೆ ಹೇಗೆ
ಪ್ರವಹಿಸುವ ಜೀವದ್ರವ
ಮನವ ತುಂಬಲುಬಹುದೇ?!!

ಹೆಜ್ಜೆ ಗುರುತನು ಬಿಡಲು
ಅಂಜುವಾ ಪಾದದೊಳು
ಜಂಗಮನ ಜಾಡಲಿ
ಮೋಕ್ಷ ದಕ್ಕಲುಬಹುದೇ?!!

                     -- ರತ್ನಸುತ

1 comment:

  1. ಅಸಲು ಜಂಗಮ ಜಾಡಿನಲ್ಲೇ ಮೋಕ್ಷ ಕಾರಣವು.

    ReplyDelete

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...