ಬಹುಶಃ!!

ಹಲವು ಕಾಗದ ಚೂರುಗಳ ನಡುವೆ
ಅಡಗಿಸಿಟ್ಟ ಪ್ರೇಮ ಪತ್ರಗಳು
ತಂಗಾಳಿಗೆ ತಲೆದೂಗುತ್ತಲೇ
ಹಗುರಾಗಿ ಹಾರುವಾಗ
ತಡೆವ ಸಾಹಸಿ ತಾನಾಗದ ಮನಸು
ಪಿಸುಗುಟ್ಟಿತು ಹೀಗೆ
"ನೀನಾಗೇ ತಲುಪಿಬಿಡು
ನನ್ನ ಮನದನ್ನೆಯ ಮಡಿಲಿಗೆ!!"

ನಟ್ಟ ನಡುವೆ ಸಿಕ್ಕ ಸಿಕ್ಕವರ
ಓದಿಗೆ ಸಿಗದಂತೆ ಎಚ್ಚರ ವಹಿಸಿ
ಆಗಸವ ಸವರುತ್ತಲೇ ಸಾಗಿದೆ
ಭಾವನೆಗಳ ಒಂಟಿ ಸವಾರಿ

ಅಲ್ಲಲ್ಲಿ ಲಜ್ಜೆ ಕೆಂಪಾದ ಮುಗಿಲು
ಕದ್ದು ಓದಿರಬೇಕು ಚೂರು,
ಅಲ್ಲಿ ಚಂದದ ಬಣ್ಣ ಬಣ್ಣದ
ಚಿತ್ತಾರ ಗೀಚಿದವರಾದರೂ ಯಾರು?!!

ಹಾರಿದ ಪತ್ರಕ್ಕೆ ಟಪಾಲು ಪೆಟ್ಟಿಗೆಯ,
ರಾಯಭಾರಿಗಳ ಹಂಗಿಲ್ಲ;
ಅದರ ಮುಂಬದಿಗೆ
ವಿಳ್ಹಾಸವನ್ನೂ ಬರೆದಿಲ್ಲ ನಾನು!!

ಹೇಗೆ ತಲುಪಬಲ್ಲದು
ಆ ದೂರದೂರಿನ ಚಲುವೆಯ ಮಡಿಲ?!!
ತಣಿಸಬಲ್ಲದೇ
ದಾಸೋಹಿ ಕಣ್ಣುಗಳ ದಣಿವನು?!!

ಗುಡುಗು ಸಿಡಿಲ ಸಹಿತ
ದೋ ಎಂದು ಸುರಿದಿದೆ ಮಳೆ;
ಆಕೆ ಲಕೋಟೆ ಹರಿದಿರಬೇಕು,
ಓದುತ್ತ ಬಿಕ್ಕಿರಬೇಕು ಬಹುಶಃ!!

                          -- ರತ್ನಸುತ

Comments

  1. ಕಾಲೇಜು ದಿನಗಳಲ್ಲಿ,
    ಅವಳು ಸಾಕಿದ ಪಾರಿವಾಳದ ಕಾಲಿಗೆ, ನಾನು ಹಾರಬಿಡುತ್ತಿದ್ದ ಗಾಳಿ ಪಟಕ್ಕೆ ಅಥವಾ ಅವಳ ಮುಂದೆಯೇ ನಡೆಯುತ್ತ ಸುಮ್ಮನೆ ಕಾಗದ ಉಂಡೆ ಬೀಳಿಸಿಕೊಂಡ ಅಗಣಿತ ಪ್ರೇಮ ಪತ್ರಗಳು ನೆನಪಾದವು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩