ನನಗೊಂದು ಕಥೆ ಹೇಳ್ತೀರಾ?!!

ಕಥೆ ಹೇಳುವ ಮನಸಿಲ್ಲ
ಕೇಳುವ ಮನಸಿದೆ;
ಮಚ್ಚು-ಕೊಚ್ಚುಗಳ ಕಥೆ
ತೆರೆಮರೆಯ ಬೆಚ್ಚನೆಯ 
ದಂತ-ದುರಂತ 
ಹರಿ-ಹರ ಒಂದಾದ 
ಜಲಚರ ಹುಟ್ಟಿಕೊಂಡ 
ಗಾಂಧಿ ಮಹಾತ್ಮನಾದ 
ಯೇಸು ಶಿಲುಬೆ ಏರಿದ 
ಬುದ್ಧ, ಅಕ್ಕ, ಅಣ್ಣ, ಅಲ್ಲಮನ ಕಥೆ
ಪ್ರಾಫೆಟ್ ಸಾರಿದ ಅಲ್ಲಾಹ್ನ ಕಥೆ
ಇತ್ಯಾದಿಗಳಾವುದಾದರೂ ಸರಿಯೇ!!

ಸಿಕ್ಕ ಸಿಕ್ಕ ತಿರುವುಗಳಲ್ಲಿ
ಒಮ್ಮೆ ಮೌನವಹಿಸಿ
"ಮುಂದೇನು?" ಎಂದು
ಊಹಿಸುತ್ತಲೇ, ನಾನೂ ಪಾತ್ರವಾಗುವ
ಮಗುವಿನಂಥ ಮನಸಿದೆ.

ನನ್ನೊಳಗಿನ ಕಲಾಕಾರನು
ತೂಕಡಿಕೆಯಿಂದ ಎಚ್ಚೆತ್ತು
ಬಣ್ಣ ಹಚ್ಚಿಕೊಳ್ಳುವಂತೆ
ಸ್ಪೂರ್ತಿಯಾಗಬಲ್ಲ ಯಾವುದಾದರೂ
ಕಥೆಗೆ ಮನಸೋಲುವ ಮನಸಿಗೆ
ಮೈಯ್ಯೆಲ್ಲ ಕಿವಿಗಳೇ;

ನೆರೆ ಮನೆಯ ಗುಸು-ಪಿಸು ಮಾತು
ಲಲ್ಲೆ ಹೊಡೆಯುತ್ತಾ ಕಾಲ ನೂಕುವವರ
ಮಾತುಗಳಿಗೆ ಎಲ್ಲಿಲ್ಲದ ಪ್ರೀತಿ;
ಮನೆ, ಮನೆ ಕಥೆಗಳೇ ಹಾಗೆ;
ಇದ್ದವರಿಗಿಂತ, ಉಳಿದವರಿಗೇ 
ಕೌತುಕ ಹೆಚ್ಚಿಸುವ,
ಚಟದಂತೆ ಮೈಗೂಡಿ ಬಿಡಿಸಿಕೊಳ್ಳ-
-ಲಾಗದ ಹಫೀಮಿನಂತೆ!!

ಸಿನಿಮಾ, ದಾರಾವಾಹಿ ಕಥೆಗಳು
ತಕ್ಕ ಮಟ್ಟಿಗೆ ಒಪ್ಪುಗೆಯಾದರೂ
ನಾಟಕೀಯತೆ ವಿಪರೀತವಾದಾಗ
ಸಹಜವಾಗಿ ನೋಡುವುದೇ ಒಂದು ಸಾಹಸ;
ಆ ಜಾಗದಲ್ಲಿ ನನ್ನನ್ನ ಕಲ್ಪಿಸಿಕೊಂಡು
ಅದ್ಭುತವಾಗಿ ನಟಿಸಿಬಿಡುತ್ತೇನೆ;

ಕನಸಿನ ಕಥೆಗಳು
ಎಳೆದಷ್ಟೂ ಚಾಚಿಕೊಳ್ಳುವ
ರಬ್ಬರ್ ಬ್ಯಂಡಿನಂತೆ;
ಎಲ್ಲೋ ಒಂದು ಕಡೆ
ತುಂಡಾಗುವುದಂತೂ ಗ್ಯಾರಂಟೀ!!

ಇಷ್ಟು ಹೇಳಿ-ಕೇಳಿ ಮುಗಿಸಿದ ಮೇಲೆ
ನನ್ನ ಕಥೆ ಕೇಳುವ ಸೌಜನ್ಯವಿದ್ದರೆ
ಒಂದು ಸನ್ನೆ ಮಾಡಿ ಸಾಕು
ಸಹಸ್ರಕ್ಕೆ ಒಂದೆಣಿಕೆ ಕೊಟ್ಟು
ಹೇಳಿ ಮುಗಿಸುತ್ತೇನೆ;
ನನಗೆ ಕಥೆ ಹೇಳುವುದೂ ಇಷ್ಟವೇ!!

                               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩