ಮನಮೋಹಿ

ಕೆಂಪು ಅಧರವು ಅರಳಿ
ಮುತ್ತಿನ ಸಾಲು
ತುಂಟ ಕಣ್ಣುಗಳೊಳಗೆ
ಈಚಲಿನ ಕಲ್ಲು

ಕಿವಿ ರಂದ್ರದಲಿ ಸಾಂದ್ರ 
ಗುಟ್ಟುಗಳ ಕುಪ್ಪೆ
ಕುರುಳ ಸಾಲಿನ ಮುಂದೆ
ಕರಿ ಮೋಡ ಸಪ್ಪೆ

ಇಳಿಜಾರಿನ ಕತ್ತು
ಸ್ವರಗಳಿಗೆ ತವರು
ಭುಜಗಳ ನೀಳತೆ
ಮತ್ತದರ ಪೊಗರು

ಅಂಗೈಯ್ಯ ಹಿಡಿ ಹೂವು
ಪಂಚ ಪಕಳೆಗಳು
ವೈಯ್ಯಾರದ ಬಳುಕು
ಬಿಂಕ ತುಂಬಿರಲು

ಎದೆಯೇರಿ ಇಳಿದಾರಿ
ಪೂರ ಮನಮೋಹಿ
ಸುಳಿಯೊಂದು ಇಹುದಲ್ಲಿ
ಪರಮಾಪ್ತ ಸ್ನೇಹಿ

ಮುಂದೆಲ್ಲ ಮರ್ಮವೇ
ಅಧ್ಯಾಯದಾದಿ
ತಳಮಳದ ತಳದಲ್ಲಿ
ಹೂಮಳೆಯೂ ರದ್ದಿ

ಮುಂಗುಟದ ಅಂಚಿನಲಿ
ಗೋರಂಟಿ ಹೊಳಪು
ಪಾದ ಹಾಲಿಗೂ ಮಿಗಿಲು
ಅತಿ ಶುದ್ಧ ಬಿಳುಪು

ಮುಂದೊಂದು ಸಂಕಲನ
ಹಿಂದದರ ಭಾಗ
ಅಡಿಯಿಂದ ಮುಡಿವರೆಗೆ
ಚೈತನ್ಯ ರಾಗ !!

                   -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩