ಕಣ್ಣೀರ ಕಾವ್ಯ

ಕಣ್ಣೀರೂ ಕೆಲವೊಮ್ಮೆ
ನೆಪ ಹುಡುಕುತ್ತದೆ
ಕೆನ್ನೆಯ ಹಾದಿ ಹಿಡಿದು
ಅಂಗೈಯ್ಯ ದಡದಲ್ಲಿ ಹದವಾಗಲು!!

ಗೊತ್ತಿದ್ದೂ ಕಣ್ಣು
ನಟಿಸಿ ಬೀಳ್ಗೊಡುತ್ತದೆ
ಕ್ಷಣ ಕಾಲವಾದರೂ
ಸಪೂರ ಹಿಂಗಿ ಹಗುರಾಗಲು!!

ಸೋಜಿಗದಲ್ಲೇ 
ಎಂದೂ ಮಾತನಾಡದ ಕೆನ್ನೆ
ತಡೆದೊಮ್ಮೆ ಕೇಳಿತು
"ನಿನಗೆ ಕಣ್ಣು ಮುಖ್ಯವೋ,
ನಾನೋ, ಇಲ್ಲವೇ ಅಂಗೈಯ್ಯೋ?!!"

ಅಲ್ಲಿ ತನಕ ಯಾರೊಂದಿಗೂ 
ಸಂಧಾನಕ್ಕೆ ಕೂಡದ ಕಂಬನಿ
ಹರಿವಿಗೆ ತಡೆಯೊಡ್ಡಿ
ಪಿಸು ಮಾತಲ್ಲಿ 
"ಕಣ್ಣು ಚಂಚಲತೆಯ ಕಲಿಸಿತು,
ನೀನು ಚಲನೆಯನು ಕಲಿಸಿದೆ,
ಅಂಗೈ ಚಿರಂತನವ ನೀಡಿತು;
ಹೀಗಿರಲು 
ಸ್ಥಾವರವ ನಂಬಿ ಕೂತರೆ
ನಿಮ್ಮಗಳ ಅರಿಯಲಿ ಹೇಗೆ?
ಬೆರೆಯಲಿ ಹೇಗೆ?" ಅನ್ನುವಾಗಲೇ...

ಕೇಳು-ಕೇಳುತ್ತ
ನವಿರಾದ ಕೆನ್ನೆ
ಸರಾಗಮಾನ ಜಾಡಿನ
ದಿಕ್ಕು ತೋರಿ
"ಇಗೋ ನಿನ್ನ ಮನೆ ದಾರಿ, ಜಾರು"
ಅನ್ನುವಷ್ಟರಲ್ಲೇ...

ನಲುಮೆಯ ಬೆರಳು
ತನ್ನೊಡಲ ನೀಡಿ
ಕಡಲನ್ನೇ ತೀಡಿ
"ಬಿಡು ಕೆನ್ನೆ ಇನ್ನು-
ಇದು ನನ್ನ ಪಾಲು,
ಬರೆಯಬೇಕಿದೆ ಕುರಿತು
ಇನ್ನೆರಡು ಸಾಲು" ಎನ್ನುತ್ತ
ಹಾಳೆಯೆದೆಗಿಟ್ಟು ಅದ
ನಿರ್ಮಿಸದೆ ಯಾವ ಕದ
ಪದ ಮಾಲೆ ಗೀಚಿತು!!

ಇವೆಲ್ಲದರ ನಡುವೆ
ಮನಸೊಂದೂ ಇದೆಯೆಂದು
ಸಾಬೀತು ಪಡಿಸಿತು;
ಕವಿಯೊಡನೆ ಕೈಗೂಡಿ
ಕಾವ್ಯ ಮಳೆಗರೆಯಿತು!!

ನೋಡು-ನೋಡುತ್ತಲೇ
ಮತ್ತೊಮ್ಮೆ ಕಣ್ಗರಗಿ
ಕೆನ್ನೆ ಹಸಿಯಾಯಿತು!!

               -- ರತ್ನಸುತ

Comments

  1. ನಮ್ಮೆಲ್ಲ ದುಗುಡಗಳಿಗೂ ಸಾಕ್ಷಿಯಾಗುವ ಕಣ್ಣಿರಿಗೆ ಹರಿವಿನ ಮೊದಲ ತಾವು ಕೆನ್ನೆಯೇ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩