Tuesday 27 September 2016

ನೀ ಮೂಡಿದಾಗ ಮನದಿ ಮಾಯಾ ಚಳುವಳಿ

ನೀ ಮೂಡಿದಾಗ ಮನದಿ ಮಾಯಾ ಚಳುವಳಿ
ನೀ ನಗುವುದೇ ಹಿತವಾದ ಬಳುವಳಿ
(1)
ಒಮ್ಮೆಲೆ ನೀನು, ಅತಿಶಯವಾದರೆ
ತಾಳಲಿ ಹೇಗೆ ನಾ, ಮನಸಿನ ತೊಂದರೆ
ಹತ್ತಿರ ಬಾರದೆ ದೂರ ಉಳಿದಂತಿದೆ
ಈ ಹೃದಯವು ನಿನ್ನನೇ ಬೇಡಿ ಸಾಯುತ್ತಿದೆ
ನೀನಾಗಿ ಆಲಿಸೀಗ ಎಲ್ಲ ಮನವಿಯ
ತಡವ ಮಾಡದೆ
ಇನ್ನೊಮ್ಮೆ ಕಾಡಿಸು ಈ ಜೀವವನ್ನ
ನಿನ್ನಂಗೈಲಿಡುವೆ
ನೂರಾರು ಕನಸು ನೀನಾಗಿ ಬರಬೇಕು
ನೀರಾಗಿ ಹರಿವಾಸೆ ದಡವಾಗು ನನಗೆ!!
(2)
ಸರಿಯೇ ಇದು ಸರಿಯೇ
ದಿನವೆಲ್ಲ ನಿನ್ನದೇ ಸವಿಯೇ
ಒಂದಾಗಿ ಹಾರಿದಂತೆ
ಅನಿಸೋದು ಹೀಗೇತಕೆ?
ನಲಿವಾಸೆಯು ಏತಕೆ?
ಎದುರಾದರೆ ಈಗಲೇ
ಶರಣಾಗುವೆ ಕೂಡಲೆ
ಉಸಿರನ್ನೇ ದೋಚಿ ಕೊಡಲೇ?
"ಹೂ" ನೀಡು ಸಾಕು ಬೇಡ ಯಾವ ದೇಣಿಗೆ
ನೀ ಚೇತನ ಬರಿದಾದ ಬಾಳಿಗೆ
ತೀರಿಸು ಬಾ, ಈ ಬಿಕಾರಿ ಸಾಲವ
ರಾಜಿಯಾಗುತಲೇ ಒಂದಾಗಿ ಬಾಳುವೆ
ಇಂದಿಗೂ, ಎಂದಿಗೂ ಪ್ರೀತಿಯೇ ದೇವರು
ನಿನ್ನಲೂ, ನನ್ನಲೂ ಒಲವು ಒಂದೇ!!

ಮೌನದ ಸಮರದಿ ಸೋಲನು ಕಂಡು

Girl)
ಮೌನದ ಸಮರದಿ ಸೋಲನು ಕಂಡು
ಸರಹದ್ದುಗಳ ಒಳಗೇ ಉಳಿದು
ಚೀತ್ಕಾರದ ಚಿತ್ತಾರವು ಚೆದುರಿ
ನಡುವೆ ಬಿಕ್ಕಳಿಕೆಗಳಿಗೆ ಹೆದರಿ
ಕಂಬನಿಯೊಳಗೆ ಗೀಚಿದ ಸಾಲು
ಹರಿಯಿತು ಕೆನ್ನೆಯ ಸುಕ್ಕನು ಬಳಸಿ
ಕಾದೆವು ಉತ್ತರಗಳಿಗೆ ಈ ದಿನ
ಏಳುವ ಪ್ರಶ್ನೆಗಳಿಲ್ಲದೆ ಉಳಿದು
(Men/Responsible women)
ಕೊರಳಾಗುವೆವು ನಿಮ್ಮ ದನಿಗೆ
ನೆರಳಾಗುವೆವು ಅನವರತ
ಬದಲಾಗಲಿ ಈ ಬೆಳವಣಿಗೆಗಳು
ಸ್ವೇಚ್ಛೆ ನಿಮ್ಮದೇ ಆಗಿಸುತ
(Girl)
ಹೂವಿನ ಪಕಳೆಯ ಮೃದು ಭಾವನೆಯಲಿ
ಉಗುರಿನ ಗುರುತನು ಮರೆಸುವೆವು
ಇನ್ನೂ ಮೊಗ್ಗಿನ ನಿರ್ಮಲ ಮನದಲಿ
ಒತ್ತಾಯದಲೇ ಅರಳುವೆವು
ನರಳುವೆವು ಹೆಜ್ಜೆಜ್ಜೆಯಲೂ
ಹಿಂದಿರುಗಲು ಹೆದರುತ ಹಾದಿಯಲಿ
ಮರೆಸುವೆವು ಗಾಯಗಳ ನೋವನು
ಸಮಾಜ ನೋಟಕೆ ಅಂಜುತಲಿ
(Men/Responsible women)
ಭರಿಸುವೆವು ನಿಮ್ಮ ಭಾರವನು
ಹೊಣೆ ಹೊತ್ತು ಹಗುರಾಗಿಸುತ
ನೀಡುವೆವು ಅಭಯ ಹಸ್ತ ನಿಮಗೆ
ಹಾರಿರಿ ಆಗಸ ಮೀರಿಸುತ
(Girl)
ಅಕ್ಷರ ಕಲಿಸುವ ಗುರುಗಳೇ ಕೇಳಿ
ನಾವೆಂದಿಗೂ ನಿಮ್ಮಾಸರೆ ಬಳ್ಳಿ
ಅಪ್ಪ, ಅಮ್ಮ ನಂತರ ನೀವೇ
ದಾರಿ ದೀಪದ ಹಿತ ಬೆಳಕಲ್ಲಿ
ಬಂಧು, ಬಳಗ ನಿಮ್ಮೊಳಗೆಮ್ಮನು
ಉಳಿಸಿರಿ ನಗುವಿನ ಸಿರಿಯಾಗಿ
ಎಡವದ ಹಾಗೆ ನಡೆಸಿರಿ ನಮ್ಮನು
ಹಿಡಿಗೆ ಚಾಚಿದ ಬೆರಳಾಗಿ
(Men/Responsible women)
ಇರುವೆವು ನಿನ್ನ ರಕ್ಷಣೆಗೆ
ಸರಿಯಾದುದ ಕಲಿಸೋ ಶಿಕ್ಷಣಕೆ
ನೀ ನೀಡದ ಶಾಪಕೆ ಪ್ರತಿಯಾಗಿ
ನಾವಿರುವೆವು ನಿಮ್ಮ ಜೊತೆಯಾಗಿ
(Girl)
ಆಗುವಿರಾ ಹಾರಾಟಕೆ ನೀವು
ಬೆಂಬಲ ಸೂಚಕ ರೆಕ್ಕೆಗಳು
ಚುಕ್ಕಿಗಳಾಟಕೆ ಕರೆದಿವೆ ನಮ್ಮನು
ಕವಿದಿರೆ ಸುತ್ತಲೂ ಕಾರಿರುಳು
ನೀಡುವಿರಾ ನಿಮ್ಮೊಪ್ಪಿಗೆ ಕೂಡಲೇ
ಚಂದಿರನಂಗಳದಿ ಒಮ್ಮೆ
ಸುತ್ತಿ ಬರುವ ಆಸೆಯಾಗಿದೆ
ಒಬ್ಬಂಟಿತನದ ಹಂಗಿರದೆ
(Men/Responsible women)
ಹಾರು ಓ ಸ್ವತಂತ್ರ ಹಕ್ಕಿಯೇ
ಅನುಮಾನಗಳೇ ಇರದಂತೆ
ಇನ್ನು ಬದುಕ ನೀನೇ ರೂಪಿಸು
ಎಲ್ಲವೂ ನಿನ್ನಿಷ್ಟದಂತೆ....

ಓ ಹೃದಯವುಳ್ಳ ಮಾನವರೇ

(ಹೆಂ)
ಓ ಹೃದಯವುಳ್ಳ ಮಾನವರೇ ಮಿಡಿತಗಳನಾಲಿಸಿ
ಪರಿತಪಿಸುವ ಪ್ರಾರ್ಥನೆಗಳ ಮನಸಾರೆ ಗ್ರಹಿಸಿರಿ
ಕಣ್ಣೀರ ಹಾಡು-ಪಾಡು ನಿಮ್ಮೊಳ ರಿಂಗಣಿಸಲಿ
ನಮ್ಮ ನೋವ ಕಥೆಯಲೊಮ್ಮೆ ನಿಮ್ಮನ್ನೂ ಇಣುಕಿಸಿ
(ಗಂ)
ಅಸಹಾಯಕರಾಗಿ ಸೋತ ನಮ್ಮ ಕ್ಷಮಿಸು ಸೋದರಿ
ಅಂಧಕಾರ ಸೀಳುವಂಥ ಬೆಳಕ ಹೊತ್ತು ತರುವೆವು
ಆಗದು ಇನ್ನೆಂದೂ ನಿನಗೆ ಈ ರೀತಿಯ ಅಪಮಾನ
ಅಭಿಮತದ ಸಂಕಲ್ಪದಿ ನಿನಗಿದೋ ಸನ್ಮಾನ
(ಹೆಂ)
ಓ ಅಮಾನುಷ ವ್ಯಾಘ್ರಗಳೇ ಕರುಣಿ ಇಲ್ಲವೇ?
ಎರಗಿದಿರಿ ಹೂವ ಹೊಸಕಿ ಉಸಿರ ಹೀರುತ
ಕಾಣಲಿಲ್ಲವೇ ನಮ್ಮಲಿ ನಿಮ್ಮದೇ ಪ್ರತಿಬಿಂಬ
ಹೀಗೆ ಪರಿಚಯಿಸಿಕೊಳ್ಳುವ ವಿಕೃತ ಮನಸೇಕೆ?
(ಗಂ)
ಅನುಮಾನವೇ ಇಲ್ಲ ನಾವು ಸೋತೆವು ತಾಯೇ
ಶರಣಾದೆವು ಆದರೆ ಸೋಲೊಪ್ಪುವ ಮಾತಿಲ್ಲ
ಆಗದು ಇನ್ನೆಂದೂ ನಿನಗೆ ಈ ರೀತಿಯ ಕಿರುಕುಳ
ಅಭಿಮತದ ಸಂಕಲ್ಪದಿ ನಿನಗಿದೋ ಬೆಂಬಲ
(ಹೆಂ)
ಓ ಆತ್ಮ ಬಂಧುಗಳೇ ಬಂಧನದಿಂ ಮುಕ್ತಗೊಳಿಸಿ
ಬಲಹೀನ ಮನಸುಗಳ ಕೈ ಹಿಡಿದು ಶಕ್ತಗೊಳಿಸಿ
ಸರಹದ್ದುಗಳಾಚೆ ನಮ್ಮ ಕನಸಿನ ಊರಿದೆ ಕಾಣಿ
ಹಾರುವ ರೆಕ್ಕೆ ಪಡೆದು ಆಕಾಶವ ಮೀರುವಾಸೆ
(ಗಂ)
ಬೆಂಬಲಿಸಲು ನಿಮ್ಮ ಬಲಕೆ ಹಂಬಲವದು ನಮ್ಮದು
ತಂಬೆಲರಿನ ತೇರಿನಲ್ಲಿ ನಿಮ್ಮ ಬದುಕು ಸಾಗಲಿ
ಆಗಲು ಬಿಡೆವಿನ್ನು ನಾವು ಹೆಣ್ತನಕೆ ಅಗೌರವ
ನೀಡುವೆವು ಹೀಗೊಂದು ಹೃತ್ಪೂರ್ವಕ ವಚನವ!!
 
                                                 - ರತ್ನಸುತ 

ಶ್ವೇತ ಪದ್ಮ

ಶ್ವೇತ ಪದ್ಮದಲ್ಲಿ ಮಿನುಗು
ಕಣ್ಣು ಅದರ ಹೆಸರು
ಕಡಿದ ಬೆಣ್ಣೆ ಮುದ್ದೆಯೊಂದು
ಕೆನ್ನೆ ಮೇಲೆ ಪಸರು
ಹರಳ ಬೆರಳ ಸರಳತೆಯಲಿ
ಕಲೆಗಾರನ ಕುಸುರಿ
ಮುಗಿಲ ಹೆಗಲ ಏರಿ ಬಂತೇ
ಹೊಂಬಿಸಿಲು ಸವರಿ?
 
ಕದ್ದು ಸೋಕುವಾಗ ಗಾಳಿ
ಕೇಶದಷ್ಟೇ ನವಿರು
ನಿನ್ನ ಸೋಕಿ ಧನ್ಯತೆಗೆ
ಪಾತ್ರವಾಯ್ತು ಹಸಿರು
ಹಣೆಗಿಟ್ಟ ಕಪ್ಪು ಕರಗಿ
ಕಣ್ಣುಬ್ಬಿಗೆ ಮೆರಗು
ಭಾವಚಿತ್ರ ಕಂಡೊಡನೆಯೇ
ಕುಂಚಗಳಿಗೂ ಕೊರಗು
 
ಕವಿದ ಕಪ್ಪು ಮೋಡದಂತೆ
ಕುರುಳ ಸಾಲು ಸಾಲು
ಮಾತುಗಳೂ ತೊದಲುತಿವೆ
ನಾಚಿ ಬಾರದಿರಲು
ಉತ್ಕೃಷ್ಟಗಳೆಲ್ಲ ಶರಣು
ಸಣ್ಣ ಕಿರು ನಗೆಗೆ
ಪ್ರಕೃತಿಯೇ ತಲೆ ಬಾಗಿತು
ಆ ನಗೆಯ ಬಗೆಗೆ
 
ಅಂಬೆಗಾಲು ಇಟ್ಟ ಕನಸು
ನಿದ್ದೆಗೊಡದು ಈಗ
ಎಚ್ಚರಗೊಳ್ಳುವೆ ಎಚ್ಚರ
ಬೆದರುತ ಆಗಾಗ
ಆಮ್ಮ ಇರುವಳು ಪಕ್ಕ
ಅಪ್ಪನ ಎದೆಗಪ್ಪು
ನೋವು ನಿನ್ನ ಸುಳಿಯದಿರಲಿ
ಹೇ ಪುಟಾಣಿ ಪಾಪು!!
 
                     - ರತ್ನಸುತ 

Monday 26 September 2016

ಪಾದರಸ

ಪಲ್ಲವಿ
ಅನುಮಾನ ಇಲ್ಲವೇ ಇಲ್ಲ
ಅನುರಾಗಿ ಆಗಿಹೆ ನಾನು
ಅಲೆಮಾರಿ ಮನಸಿಗೆ ಈಗ
ಕಡಿವಾಣವಾಗುವೆಯೇನು?
ಎದುರಲಿ ನಿಂತರೆ ಹೀಗೆ
ಎದೆಯಲ್ಲಿ ನೂರಾರು ಚಿಲುಮೆ
ಅತಿ ಸುಂದರ ಭಾವ ಅರಳುತಿದೆ
ನಿನ್ನಲ್ಲಿ ಒಂದಾಗಲೆಂದು....
ಅನುಮಾನ ಇಲ್ಲವೇ ಇಲ್ಲ....
 
ಚರಣ 1
ಉಸಿರ ಒಳಗೆ, ಬಿಸಿಯೇ ನೀನು
ನಿದ್ದೆ ಕಸಿದ ಕನಸು ನಿನ್ನದೇ
ಎದೆಯ ಬಿರಿದು, ಹೃದಯ ಸೇರಿ
ನನ್ನ ಪ್ರಾಣ ತೆಗೆವೆ ಕೊಲ್ಲದೆ
ಅತಿಯಾಗಿ ಪ್ರೀತಿಸುವಂತೆ
ಹಿತವಾಗಿ ಅನುಮತಿ ನೀಡು
ಜೊತೆಯಲ್ಲಿ ನೀ ಇರುವಾಗ
ನೆರಳಲ್ಲೂ ಬಣ್ಣದ ಸೊಗಡು...
 
ಚರಣ 2
ಯಾರಲಿ ಹೇಳೋದು ಈ ಪಾಡು
ನನಗಿರೋ ಸಂಗಾತಿ ನೀ
ತಡಬಡಿಸದೆ ನೀ ಕೇಳು
ಅತಿಶಯವೆನಿಸುವ ಈ ಹಾಡು
ಇದರಲಿ ನೀ ಮಿಂದು ಒದ್ದಾಡು
ನೀನಾಗೇ ನನ್ನ ಮುದ್ದಾಡು
ಪ್ರತಿ ಕ್ಷಣವನು ನಿನ್ನ ಮಡಿಲಿನಲಿ
ಎಣಿಸಿ ಬಾಳೋದೇ ಬಾಳು...
ಹಲವಾರು ಕಥೆಗಳು ಬೇರೆ
ನನ್ನ ಪ್ರೇಮ ಪ್ರಕರಣ ಬೇರೆ
ಬಳಿಯಲ್ಲಿ ಬಂದರೆ ನಿನಗೆ
ಬಿಡಿಸುತ್ತ ಹೇಳುವೆ ಬಾರೆ...
 
                        - ರತ್ನಸುತ 

ಮನದ ಕೊಡ

ಕೈ ಹಿಡಿದ ಕೊಡವನ್ನ
ಕೈಲಿಡಿದು ಬಂದವಳೇ
ಕೊಡು ಬೊಗಸೆಯ ತುಂಬ
ಸಿಹಿ ನೀರ ಗುಟುಕು
ನೀ ಸಾಗಿ ಬಂದ ಆ
ರಸ್ತೆಯಲಿ ಬಳುಕಿಲ್ಲ
ನಿನ್ನ ಮೈ ಬಳುಕಲ್ಲಿ
ನೋಟಕ್ಕೆ ಚಳುಕು
 
ತಲೆ ಮೇಲೆ ಒಂದು ಕೊಡ
ನಡುವಲ್ಲಿ ಒಂದು
ಕರಗುತುದೆ ಹಣೆಗಿಟ್ಟ
ಕುಂಕುಮದ ಬೊಟ್ಟು
ತಾ ಹೊರುವೆ ತುಸು ದೂರ
ದಣಿವಾರಲಿ ನಿನಗೂ
ಕೊಳ್ಳುವೆ ಕೊಡವನ್ನ
ಮನವ ಅಡವಿಟ್ಟು
 
ಸೀರೆ ಅಂಚಿನ ಠಸ್ಸೆ
 ಒತ್ತುತಿರೆ ಮೊಗದಲ್ಲಿ
ಬೆವರು ರುಪಾಂತರ-
-ಗೊಳ್ಳುತಿಹ ಸೊಗಸು
ಇನ್ನೂ ಬಿಟ್ಟಿಲ್ಲವೇ
ನೀರು ಸೇದಲು ನಿನ್ನ
ಗೆಳತಿಯರು ರೇಗಿಸಲು
ಹುಟ್ಟಿದ ಮುನಿಸು?!!
 
ಕಳ್ಳ ನೋಟದಿ ನನ್ನ
ಕೊಲ್ಲುವುದು ನಿನಗಿಷ್ಟ
ಎಷ್ಟೇ ಆದರು ನೀನು
ಹೃದಯ ಕದ್ದವಳು
ಎಲ್ಲ ಕನಸುಗಳಲ್ಲೂ
ನಿನ್ನ ಸಹಿಯನು ಗೀಚಿ
ಏನೂ ತಿಳಿಯದ ಹಾಗೆ
ಸುಮ್ಮನಿದ್ದವಳು
 
ಎರಡು ತಿರುವಿನ ಆಚೆ
ಕಾಣುವುದು ನಿನ್ನ ಮನೆ
ಹದರಿಕೆ ಹೆಚ್ಚುತಿದೆ
ಕಂಪಿಸಿದೆ ಕೊರಳು
ನಿನಗೋ ಬಂಡತನ
ಆಲಿಸುವ ಶ್ರಮವಷ್ಟೇ
ಸೋಲಬಹುದೋ ಏನೋ
ಮತ್ತೊಮ್ಮೆ ಸೊಲ್ಲು
 
ಹಿಡಿ ನಿನ್ನ ಕೊಡವನ್ನ
ಬದಲಿ ನೀಡದೆ ಏನೂ
ಇರಲಿ ನನ್ನವುಗಳೆಲ್ಲ
ನಿನ್ನ ಬಳಿಯಲ್ಲೇ
ಹೇಳ ಮರೆತೆ ಕೇಳು
ನಿನ್ನ ಕುರಿತೀ ಕವನ
ಜೋಪಾನ ಮಾಡುವೆನು
ನನ್ನ ಮನದಲ್ಲೇ!!
 
                 - ರತ್ನಸುತ

ನೀನೇ

ಪಲ್ಲವಿ 
(ಹೆಂ)
ನೀನೇ ಮೊದಮೊದಲವ ನೀನೇ
ಮನ ಸೆಳೆದವ ನೀನೇ
ಮಾಯಗಾರನೇ... ನೀನೇ ನೀನೇ...
ಪಲ್ಲವಿ 
ಹಗಲು, ಇರುಳು ನೀನೇನೆ
ಕಡಲು ಅಲೆಯು ನೊರೆಯು ನೀನೇನೆ
ಎದೆಯ ಉಸಿರು ನೀನೇ
ಹೃದಯ ಬಡಿತ ನೀನೇ
ಮಧುರ ಕನಸು ನೀನೇ...
(ಗಂ)    
ನೀನೇ ಎತ್ತರದ ಸಿರಿ
ನೀನೇ ಉತ್ತರದ ಪರಿ
ನೀನೇ ಜೀವಮಾನವೇ.. ಆ ಆ
ಪ್ರೀತಿ ಇಷ್ಟವಾಗುವ ಪಜೀತಿ
ಎಲ್ಲ ಬೇಲಿಯನ್ನೂ ದಾಟಿ
ನಿನ್ನ ಸೇರುವೆ  
 
ಚರಣ ೧ 
(ಗಂ)
ಎಲ್ಲೇ ನೋಡಲು ನಿನ್ನ
ಮೊಗವೇ ಕಾಡಿದೆ ಇಂದು
ಹಿತವೇ ಅನಿಸಿ ತಲೆ ಬಾಗಿ
ಮತ್ತೆ ಮತ್ತೆ ಸೋಲುವೆ
(ಹೆಂ)
ನೀನು ಎದುರು ಬಂದಾಗ
ಹೃದಯ ನಾಚಿಕೊಂಡಂತೆ
ದೂರವಾದರೆ ಅಲ್ಲೇ
ನಾನು ಚೂರಾಗುವೆ
(ಗಂ)
ನೀನೇ... ನನ್ನ ಇತಿ ಮಿತಿ
ನೀನೇ... ನನ್ನ ಸ್ಥಿತಿ ಗತಿ
ನೀನೇ... ನಾನಾದೆನೇ..
ಯಾರೂ ನೀಡಲಾಗದಷ್ಟು 
ಪ್ರೀತಿ ನಾನು ನೀಡಬಲ್ಲೆ
ನಂಬು ನೀ ನನ್ನನೇ....
 
ಚರಣ ೨
(ಹೆಂ)
ನಿನ್ನನು ಹೊರತು ನಾ
ಯಾರನೂ ಬೇಡೆನು
ನನ್ನನೇ ಬರೆಯುವೆ ನಿನ್ನ ಈ ಬದುಕಿಗೆ
(ಗಂ)
ಎಲ್ಲ ಸಿಕ್ಕು ಬಿಡಿಸುತ್ತ 
ನಿಂತೆ ನಿನ್ನ ಜೊತೆಯಾಗಿ 
ನಿನ್ನ ಕರೆಯ ಮರೆಯಲ್ಲೇ ವಾಸವಾಗುವೆ... 
ನೀನೇ... ಅತಿ ಮಧುರವೂ
ನೀನೇ... ಕಣ ಕಣದಲೂ
ನೀನೇ... ವರವಾದಾನವೇ... 
ಪ್ರೀತಿ ಸೋಲುವಂಥದಲ್ಲ
ಪ್ರೀತಿ ಸಾಯುವಂಥದಲ್ಲ
ಪ್ರೀತಿ ಸಂಜೀವಿನಿ.....
 
                                - ರತ್ನಸುತ 

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...