ಓ ಹೃದಯವುಳ್ಳ ಮಾನವರೇ

(ಹೆಂ)
ಓ ಹೃದಯವುಳ್ಳ ಮಾನವರೇ ಮಿಡಿತಗಳನಾಲಿಸಿ
ಪರಿತಪಿಸುವ ಪ್ರಾರ್ಥನೆಗಳ ಮನಸಾರೆ ಗ್ರಹಿಸಿರಿ
ಕಣ್ಣೀರ ಹಾಡು-ಪಾಡು ನಿಮ್ಮೊಳ ರಿಂಗಣಿಸಲಿ
ನಮ್ಮ ನೋವ ಕಥೆಯಲೊಮ್ಮೆ ನಿಮ್ಮನ್ನೂ ಇಣುಕಿಸಿ
(ಗಂ)
ಅಸಹಾಯಕರಾಗಿ ಸೋತ ನಮ್ಮ ಕ್ಷಮಿಸು ಸೋದರಿ
ಅಂಧಕಾರ ಸೀಳುವಂಥ ಬೆಳಕ ಹೊತ್ತು ತರುವೆವು
ಆಗದು ಇನ್ನೆಂದೂ ನಿನಗೆ ಈ ರೀತಿಯ ಅಪಮಾನ
ಅಭಿಮತದ ಸಂಕಲ್ಪದಿ ನಿನಗಿದೋ ಸನ್ಮಾನ
(ಹೆಂ)
ಓ ಅಮಾನುಷ ವ್ಯಾಘ್ರಗಳೇ ಕರುಣಿ ಇಲ್ಲವೇ?
ಎರಗಿದಿರಿ ಹೂವ ಹೊಸಕಿ ಉಸಿರ ಹೀರುತ
ಕಾಣಲಿಲ್ಲವೇ ನಮ್ಮಲಿ ನಿಮ್ಮದೇ ಪ್ರತಿಬಿಂಬ
ಹೀಗೆ ಪರಿಚಯಿಸಿಕೊಳ್ಳುವ ವಿಕೃತ ಮನಸೇಕೆ?
(ಗಂ)
ಅನುಮಾನವೇ ಇಲ್ಲ ನಾವು ಸೋತೆವು ತಾಯೇ
ಶರಣಾದೆವು ಆದರೆ ಸೋಲೊಪ್ಪುವ ಮಾತಿಲ್ಲ
ಆಗದು ಇನ್ನೆಂದೂ ನಿನಗೆ ಈ ರೀತಿಯ ಕಿರುಕುಳ
ಅಭಿಮತದ ಸಂಕಲ್ಪದಿ ನಿನಗಿದೋ ಬೆಂಬಲ
(ಹೆಂ)
ಓ ಆತ್ಮ ಬಂಧುಗಳೇ ಬಂಧನದಿಂ ಮುಕ್ತಗೊಳಿಸಿ
ಬಲಹೀನ ಮನಸುಗಳ ಕೈ ಹಿಡಿದು ಶಕ್ತಗೊಳಿಸಿ
ಸರಹದ್ದುಗಳಾಚೆ ನಮ್ಮ ಕನಸಿನ ಊರಿದೆ ಕಾಣಿ
ಹಾರುವ ರೆಕ್ಕೆ ಪಡೆದು ಆಕಾಶವ ಮೀರುವಾಸೆ
(ಗಂ)
ಬೆಂಬಲಿಸಲು ನಿಮ್ಮ ಬಲಕೆ ಹಂಬಲವದು ನಮ್ಮದು
ತಂಬೆಲರಿನ ತೇರಿನಲ್ಲಿ ನಿಮ್ಮ ಬದುಕು ಸಾಗಲಿ
ಆಗಲು ಬಿಡೆವಿನ್ನು ನಾವು ಹೆಣ್ತನಕೆ ಅಗೌರವ
ನೀಡುವೆವು ಹೀಗೊಂದು ಹೃತ್ಪೂರ್ವಕ ವಚನವ!!
 
                                                 - ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩