ಶ್ವೇತ ಪದ್ಮ

ಶ್ವೇತ ಪದ್ಮದಲ್ಲಿ ಮಿನುಗು
ಕಣ್ಣು ಅದರ ಹೆಸರು
ಕಡಿದ ಬೆಣ್ಣೆ ಮುದ್ದೆಯೊಂದು
ಕೆನ್ನೆ ಮೇಲೆ ಪಸರು
ಹರಳ ಬೆರಳ ಸರಳತೆಯಲಿ
ಕಲೆಗಾರನ ಕುಸುರಿ
ಮುಗಿಲ ಹೆಗಲ ಏರಿ ಬಂತೇ
ಹೊಂಬಿಸಿಲು ಸವರಿ?
 
ಕದ್ದು ಸೋಕುವಾಗ ಗಾಳಿ
ಕೇಶದಷ್ಟೇ ನವಿರು
ನಿನ್ನ ಸೋಕಿ ಧನ್ಯತೆಗೆ
ಪಾತ್ರವಾಯ್ತು ಹಸಿರು
ಹಣೆಗಿಟ್ಟ ಕಪ್ಪು ಕರಗಿ
ಕಣ್ಣುಬ್ಬಿಗೆ ಮೆರಗು
ಭಾವಚಿತ್ರ ಕಂಡೊಡನೆಯೇ
ಕುಂಚಗಳಿಗೂ ಕೊರಗು
 
ಕವಿದ ಕಪ್ಪು ಮೋಡದಂತೆ
ಕುರುಳ ಸಾಲು ಸಾಲು
ಮಾತುಗಳೂ ತೊದಲುತಿವೆ
ನಾಚಿ ಬಾರದಿರಲು
ಉತ್ಕೃಷ್ಟಗಳೆಲ್ಲ ಶರಣು
ಸಣ್ಣ ಕಿರು ನಗೆಗೆ
ಪ್ರಕೃತಿಯೇ ತಲೆ ಬಾಗಿತು
ಆ ನಗೆಯ ಬಗೆಗೆ
 
ಅಂಬೆಗಾಲು ಇಟ್ಟ ಕನಸು
ನಿದ್ದೆಗೊಡದು ಈಗ
ಎಚ್ಚರಗೊಳ್ಳುವೆ ಎಚ್ಚರ
ಬೆದರುತ ಆಗಾಗ
ಆಮ್ಮ ಇರುವಳು ಪಕ್ಕ
ಅಪ್ಪನ ಎದೆಗಪ್ಪು
ನೋವು ನಿನ್ನ ಸುಳಿಯದಿರಲಿ
ಹೇ ಪುಟಾಣಿ ಪಾಪು!!
 
                     - ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩