ಮನದ ಕೊಡ

ಕೈ ಹಿಡಿದ ಕೊಡವನ್ನ
ಕೈಲಿಡಿದು ಬಂದವಳೇ
ಕೊಡು ಬೊಗಸೆಯ ತುಂಬ
ಸಿಹಿ ನೀರ ಗುಟುಕು
ನೀ ಸಾಗಿ ಬಂದ ಆ
ರಸ್ತೆಯಲಿ ಬಳುಕಿಲ್ಲ
ನಿನ್ನ ಮೈ ಬಳುಕಲ್ಲಿ
ನೋಟಕ್ಕೆ ಚಳುಕು
 
ತಲೆ ಮೇಲೆ ಒಂದು ಕೊಡ
ನಡುವಲ್ಲಿ ಒಂದು
ಕರಗುತುದೆ ಹಣೆಗಿಟ್ಟ
ಕುಂಕುಮದ ಬೊಟ್ಟು
ತಾ ಹೊರುವೆ ತುಸು ದೂರ
ದಣಿವಾರಲಿ ನಿನಗೂ
ಕೊಳ್ಳುವೆ ಕೊಡವನ್ನ
ಮನವ ಅಡವಿಟ್ಟು
 
ಸೀರೆ ಅಂಚಿನ ಠಸ್ಸೆ
 ಒತ್ತುತಿರೆ ಮೊಗದಲ್ಲಿ
ಬೆವರು ರುಪಾಂತರ-
-ಗೊಳ್ಳುತಿಹ ಸೊಗಸು
ಇನ್ನೂ ಬಿಟ್ಟಿಲ್ಲವೇ
ನೀರು ಸೇದಲು ನಿನ್ನ
ಗೆಳತಿಯರು ರೇಗಿಸಲು
ಹುಟ್ಟಿದ ಮುನಿಸು?!!
 
ಕಳ್ಳ ನೋಟದಿ ನನ್ನ
ಕೊಲ್ಲುವುದು ನಿನಗಿಷ್ಟ
ಎಷ್ಟೇ ಆದರು ನೀನು
ಹೃದಯ ಕದ್ದವಳು
ಎಲ್ಲ ಕನಸುಗಳಲ್ಲೂ
ನಿನ್ನ ಸಹಿಯನು ಗೀಚಿ
ಏನೂ ತಿಳಿಯದ ಹಾಗೆ
ಸುಮ್ಮನಿದ್ದವಳು
 
ಎರಡು ತಿರುವಿನ ಆಚೆ
ಕಾಣುವುದು ನಿನ್ನ ಮನೆ
ಹದರಿಕೆ ಹೆಚ್ಚುತಿದೆ
ಕಂಪಿಸಿದೆ ಕೊರಳು
ನಿನಗೋ ಬಂಡತನ
ಆಲಿಸುವ ಶ್ರಮವಷ್ಟೇ
ಸೋಲಬಹುದೋ ಏನೋ
ಮತ್ತೊಮ್ಮೆ ಸೊಲ್ಲು
 
ಹಿಡಿ ನಿನ್ನ ಕೊಡವನ್ನ
ಬದಲಿ ನೀಡದೆ ಏನೂ
ಇರಲಿ ನನ್ನವುಗಳೆಲ್ಲ
ನಿನ್ನ ಬಳಿಯಲ್ಲೇ
ಹೇಳ ಮರೆತೆ ಕೇಳು
ನಿನ್ನ ಕುರಿತೀ ಕವನ
ಜೋಪಾನ ಮಾಡುವೆನು
ನನ್ನ ಮನದಲ್ಲೇ!!
 
                 - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩