ಮೌನದ ಸಮರದಿ ಸೋಲನು ಕಂಡು

Girl)
ಮೌನದ ಸಮರದಿ ಸೋಲನು ಕಂಡು
ಸರಹದ್ದುಗಳ ಒಳಗೇ ಉಳಿದು
ಚೀತ್ಕಾರದ ಚಿತ್ತಾರವು ಚೆದುರಿ
ನಡುವೆ ಬಿಕ್ಕಳಿಕೆಗಳಿಗೆ ಹೆದರಿ
ಕಂಬನಿಯೊಳಗೆ ಗೀಚಿದ ಸಾಲು
ಹರಿಯಿತು ಕೆನ್ನೆಯ ಸುಕ್ಕನು ಬಳಸಿ
ಕಾದೆವು ಉತ್ತರಗಳಿಗೆ ಈ ದಿನ
ಏಳುವ ಪ್ರಶ್ನೆಗಳಿಲ್ಲದೆ ಉಳಿದು
(Men/Responsible women)
ಕೊರಳಾಗುವೆವು ನಿಮ್ಮ ದನಿಗೆ
ನೆರಳಾಗುವೆವು ಅನವರತ
ಬದಲಾಗಲಿ ಈ ಬೆಳವಣಿಗೆಗಳು
ಸ್ವೇಚ್ಛೆ ನಿಮ್ಮದೇ ಆಗಿಸುತ
(Girl)
ಹೂವಿನ ಪಕಳೆಯ ಮೃದು ಭಾವನೆಯಲಿ
ಉಗುರಿನ ಗುರುತನು ಮರೆಸುವೆವು
ಇನ್ನೂ ಮೊಗ್ಗಿನ ನಿರ್ಮಲ ಮನದಲಿ
ಒತ್ತಾಯದಲೇ ಅರಳುವೆವು
ನರಳುವೆವು ಹೆಜ್ಜೆಜ್ಜೆಯಲೂ
ಹಿಂದಿರುಗಲು ಹೆದರುತ ಹಾದಿಯಲಿ
ಮರೆಸುವೆವು ಗಾಯಗಳ ನೋವನು
ಸಮಾಜ ನೋಟಕೆ ಅಂಜುತಲಿ
(Men/Responsible women)
ಭರಿಸುವೆವು ನಿಮ್ಮ ಭಾರವನು
ಹೊಣೆ ಹೊತ್ತು ಹಗುರಾಗಿಸುತ
ನೀಡುವೆವು ಅಭಯ ಹಸ್ತ ನಿಮಗೆ
ಹಾರಿರಿ ಆಗಸ ಮೀರಿಸುತ
(Girl)
ಅಕ್ಷರ ಕಲಿಸುವ ಗುರುಗಳೇ ಕೇಳಿ
ನಾವೆಂದಿಗೂ ನಿಮ್ಮಾಸರೆ ಬಳ್ಳಿ
ಅಪ್ಪ, ಅಮ್ಮ ನಂತರ ನೀವೇ
ದಾರಿ ದೀಪದ ಹಿತ ಬೆಳಕಲ್ಲಿ
ಬಂಧು, ಬಳಗ ನಿಮ್ಮೊಳಗೆಮ್ಮನು
ಉಳಿಸಿರಿ ನಗುವಿನ ಸಿರಿಯಾಗಿ
ಎಡವದ ಹಾಗೆ ನಡೆಸಿರಿ ನಮ್ಮನು
ಹಿಡಿಗೆ ಚಾಚಿದ ಬೆರಳಾಗಿ
(Men/Responsible women)
ಇರುವೆವು ನಿನ್ನ ರಕ್ಷಣೆಗೆ
ಸರಿಯಾದುದ ಕಲಿಸೋ ಶಿಕ್ಷಣಕೆ
ನೀ ನೀಡದ ಶಾಪಕೆ ಪ್ರತಿಯಾಗಿ
ನಾವಿರುವೆವು ನಿಮ್ಮ ಜೊತೆಯಾಗಿ
(Girl)
ಆಗುವಿರಾ ಹಾರಾಟಕೆ ನೀವು
ಬೆಂಬಲ ಸೂಚಕ ರೆಕ್ಕೆಗಳು
ಚುಕ್ಕಿಗಳಾಟಕೆ ಕರೆದಿವೆ ನಮ್ಮನು
ಕವಿದಿರೆ ಸುತ್ತಲೂ ಕಾರಿರುಳು
ನೀಡುವಿರಾ ನಿಮ್ಮೊಪ್ಪಿಗೆ ಕೂಡಲೇ
ಚಂದಿರನಂಗಳದಿ ಒಮ್ಮೆ
ಸುತ್ತಿ ಬರುವ ಆಸೆಯಾಗಿದೆ
ಒಬ್ಬಂಟಿತನದ ಹಂಗಿರದೆ
(Men/Responsible women)
ಹಾರು ಓ ಸ್ವತಂತ್ರ ಹಕ್ಕಿಯೇ
ಅನುಮಾನಗಳೇ ಇರದಂತೆ
ಇನ್ನು ಬದುಕ ನೀನೇ ರೂಪಿಸು
ಎಲ್ಲವೂ ನಿನ್ನಿಷ್ಟದಂತೆ....

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩