ಸುಡುಗಾಡು ಮತ್ತು ಕವಿತೆ

ಗೋರಿ ಮೇಲೆ ಕೂತು
ಗಡ್ಡ ಗೀರುತ್ತ ಯೊಚಿಸುತ್ತಿದ್ದೆ;
ಹೆಣಕ್ಕೆ ಭಯವಾಗಿ ಕೇಳಿತು
"ನೀನು ಕವಿಯಾ?"
ಇಲ್ಲವೆಂದೆ,
ತಂಟೆ ತಪ್ಪಿತೆಂದು ಮತ್ತೆ ಮಲಗಿತು!!
ಸುತ್ತಲೂ ಚೆಲ್ಲಾಡಿಕೊಂಡ
ಹಾಳೆ ಉಂಡೆಗಳ ತೆರೆದು
ಗೋರಿಯೆದೆಗಿಟ್ಟು ನೀವಿ
ಕನ್ನಡಕ ಸರಿಪಡಿಸಿ ಓದಲು ಶುರುವಿಟ್ಟೆ;
ಮುಂದೆ ದನಿಗೆ ದನಿಗೂಡಿಸಿ
ಹೆಣವೂ ಓದುತ್ತಲೇ ಮುಗಿಸಿತು!!
ಹೀಗೆ ಒಂದೊಂದೇ ಉಂಡೆಗಳ
ಹರಡಿ, ಹರಡಿ
ಜೊತೆಗೂಡಿ ಓದಿ ಮುಗಿಸಿದೆವು;
ಎಲ್ಲವನ್ನೂ ನಾ ನೋಡಿ ಓದಿದಷ್ಟೇ
ಸರಾಗವಾಗಿ ಹೆಣವೂ ಪಾಡಿತು!!
ಸೋಜಿಗದಲ್ಲಿ ಕೇಳಿದೆ
"ನೀನು ಕವಿಯಾ?"
ಇಲ್ಲವೆಂದಿತು ತಾನು!!
ಯಾರೊ ತೊಡೆಯ ಮೇಲೆ ಕೂತು
ಎದೆಯನ್ನ ಮೆಲ್ಲಗೆ ನೀವುತ್ತಿದ್ದಂತನಿಸಿ
ಎಚ್ಚರವಾಗಿ ಕೇಳಿದೆ
"ನೀನು ಕವಿಯಾ?"
ಇಲ್ಲವೆಂದ ತಾನು
ಮುಂದೆ ಅವನೂ ಓದಿದ
ನಾನೂ ದನಿಗೂಡಿಸಿದೆ
ಅವ ನೋಡಿ ಓದಿದಷ್ಟೇ ಸರಾಗವಾಗಿ
ನಾ ನೋಡದೆಯೇ ಪಾಡಿದೆ
ಮನವರಿಕೆಯಾಯಿತು
ಈ ಸುಡುಗಾಡಿನಲ್ಲಿ
ಎಲ್ಲರೂ ಕವಿತೆ ಬರೆಯುತ್ತಾರೆ
ಆದರೆ
ಯಾರೂ ಕವಿಗಳಲ್ಲ!!
"ಕವಿ"ಯೆಂದರೆ
ಕವಿತೆ ಬರೆವವರಿಗೆ ಎಲ್ಲಿಲ್ಲದ ದಿಗಿಲು!!
                              -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩