Tuesday 9 December 2014

ಬದುಕನ್ನ ಬದುಕುತ್ತ

ನನ್ನ ಮನದ ಶೇಕಡ ತೊಂಬತ್ತೊಂಬತ್ತು ಭಾಗ
ನಿನ್ನೆಸರಿಗೆ ಬರೆದಿಡುವೆ ತೃಪ್ತಳಾಗು;
ಅದಕ್ಕೂ ಹೆಚ್ಚು ಒಂದಿಂಚೂ ನೀಡಲಾರೆ,
ಮುನಿಸಿಕೊಂಡರೂ ನಾ ಸೋಲುವುದಿಲ್ಲ
ಆ ಬರಡು ಮೂಲೆಗೆ ಮುಳ್ಳು ತಂತಿ ಸುತ್ತಿ
ತುಕ್ಕಿಡಿದ, ಕೀಲಿ ಕಳೆದ ಬೀಗ ಜಡಿದು
ವರ್ಷಗಟ್ಟಲೆ ನಾನೇ ಕಾಲಿಟ್ಟಿಲ್ಲ,
ಅತಿಕ್ರಮಿಸುವ ಆಸೆ ಬಿಟ್ಟು
ಕೊಟ್ಟಷ್ಟರಲ್ಲೇ ರಾಣಿಯಂತಿರು!!
ಆ ಶಾಪಗ್ರಸ್ತ ಜಾಗದಲ್ಲಿ ಚಿಗುರಿನ ಹಬ್ಬವಿಲ್ಲ
ಖುಷಿಯ ದಿಬ್ಬವಿಲ್ಲ, ನಗೆಯ ಶಬ್ಧವಿಲ್ಲ
ಸ್ಮಶಾಣ ಮೌನವನ್ನೂ ಬೆಚ್ಚಿ ಬೀಳಿಸುವ
ಭೀಕರ ಮೌನವೊಂದಿದೆ, ಆಲಿಸಬೇಡ!!
ಒಮ್ಮೊಮ್ಮೆ ಅಲ್ಲಿ ಸೆರೆಯಾದ ಪಳೆಯುಳಿಕೆಗಳು
ಗಾಳಿಯ ನೆರವಿನಿಂದ ಇತ್ತ ಸುಳಿಯುವ,
ಮನ ಕಲಕುವ ಸಂಭವವಿದೆ;
ನನ್ನಂತೆ ನೀನೂ ಎಚ್ಚರದಿಂದಿರು
ಅತ್ತ ಚಿತ್ತ ಹರಿಸಬೇಡ!!
ಬದುಕನ್ನು ನಿನಗೆಂದೇ ತೆರೆದಿಟ್ಟೆ,
ನೋಡು ಎಷ್ಟು ವಿಶಾಲವಾಗಿದೆ.
ಎಷ್ಟೆಲ್ಲ ಅವಕಾಶವಿದೆ
ತಪ್ಪು ಮಾಡಲು, ತಿದ್ದಿಕೊಳ್ಳಲು;
ಇದ ಬಿಟ್ಟು
ಆ ಗತವನ್ನ ಕೆದಕುವ ಸಾಹಸ ಬೇಡ,
ನಾಳೆಗಳ ಗೌರವಿಸೋಣ
ನೆನ್ನೆಗಳಿನ್ನು ನೆನಪು ಮಾತ್ರ!!
ಅಗೋ, ಅಲ್ಲೊಂದು ಸದ್ದು!!
ಹತೋಟಿಯಲ್ಲಿರಲಿ ಗಮನ
ಕುತೂಹಲ ಕೋಲಾಹಲಕ್ಕೆ ತಿರುಗದಿರಲಿ;
ಬಾ, ತೋಳಲ್ಲಿ ಬಂಧಿಯಾಗು
ನನ್ನ ನಿನ್ನ ತಲ್ಲಣಗಳು ಶಾಂತವಾಗಲಿ
ಬದುಕನ್ನು ಬದುಕಿಸಿಕೊಳ್ಳುವ ಬದುಕಲ್ಲಿ
ಇಬ್ಬರೂ ಸಮನಾಗಿ ಬದುಕೋಣ!!
                                -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...