Friday 5 December 2014

ಅವಳು

ಇನ್ನೂ ಸಿಗದ ಅವಳು
ಎಲ್ಲೆಲ್ಲೂ ಕಾಣಸಿಗುತ್ತಾಳೆ
ಆದರೆ ಅಲ್ಲೆಲ್ಲೂ ಅವಳಿಲ್ಲ;
ಅವಳಿಗಾಗಿ ಕನವರಿಸಿದ್ದೂ ಆಯ್ತು
ನಮೂದನೆಗಳುಳಿದಿಲ್ಲ
ಅವಳಲ್ಲಿ ಹದವಾದದ್ದಾಯ್ತು
ಪ್ರಚೋದನೆಗಳೇನಿಲ್ಲ!!
ಅವಳು ನಿರಾಕಾರ
ನಿರುತ್ತರ, ನಿರಾಳ
ನಿರಾವಲಂಬಿ, ನಿರ್ಭಾವುಕ
ನಾ ಅಂತೆ ನಿಶ್ಚಯಿಸಲು;
ಅವಳು ಸುಂದರ
ಸಹ್ಯ, ಸಪೂರ
ಸುಲಲಿತ, ಸುಮಧುರ
ನಾ ನಿಶ್ಚಯಿಸದಿದ್ದರೂ!!
ಅವಳಾಟಕ್ಕೆ ಅಳವಡಿಸಿದ
ಸೂಚನಾ ಪಟ್ಟಿಯನು
ಪಾಲಿಸುವ ಪರದಾಟದಲಿ
ಅವಳ ಇನ್ನೂ ಗೆಲ್ಲಲಾಗಿಲ್ಲವಾದರೂ
ಗೆದ್ದೇ ತೀರುವ ಛಲ;
ಅವಳಿನ್ನೇನು ಸಿಗುವಳನ್ನುವಷ್ಟರಲ್ಲಿ
ಕೈ ತಪ್ಪಿ ಹೋದದ್ದು ಅವಳ ಜಾಣತನವೋ?
ನನ್ನ ಹುಂಬತನವೋ?
ಇನ್ನೂ ಒಗಟಾಗಿಯೇ ಉಳಿದಿದೆ!!
ಅವಳ ಭ್ರಮಾತ್ಮಕ ಸಹವಾಸದಲಿ
ಹಾಳಾಗಲೆಂದೇ
ಚೂರು-ಪಾರು ಒಳ್ಳೆತನಗಳನ್ನುಳಿಸಿಕೊಂಡಿದ್ದೇನೆ;
ಲೇ ಅವಳೇ!!
ಕಾಯಿಸಿ ನನ್ನ ಇನ್ನಷ್ಟು ಸುಡದಿರು,
ಬಂದು ಬಿಡು ಬೇಗ
ಸೋಲೊಪ್ಪಿ ಆಯಿತಾಗಲೇ;
ಗೆಲ್ಲುವ ಆಸೆ ಇನ್ನಾದರೂ ಚಿಗುರಲಿ!!
                                          -- ರತ್ನಸುತ

1 comment:

  1. ಕಾಯಿಸುವ ಹುಡುಗಿಯರ
    ಯಾರು ಪ್ರೀತಿಸಬಾರದು...
    ಪ್ರೀತಿಸುವ ಹುಡುಗರನೂ
    ಯಾರು ಕಾಯಿಸಬಾರದು...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...