Wednesday 22 June 2016

ನಮ್ಮ ಸ್ವಗತ

ಮಳೆಯಲ್ಲಿ ನಿನ್ನ ನೆನೆದು ನೆನೆದು
ನೆನೆವುದನ್ನೇ ರೂಢಿಯಾಗಿಸಿಕೊಂಡ ಮನ
ನೀ ಹತ್ತಿರವಿದ್ದಾಗ ನಿರ್ಭಾವುಕ


ಎಲ್ಲ ಚಂಚಲತೆಗಳ ಪರಿಚಯವಿರುವ
ನಿನ್ನ ಅಂಗೈಯ್ಯ ಮೇಲೊಂದು ಸಾಲು ಗೀಚಿ
ಗುಟ್ಟಾಗಿ ಹಿಡಿದಿಟ್ಟುಕೋ ಅಂದಾಗ
ಅದೇನು ನಾಚಿಕೆ ನಿನ್ನ ಕಣ್ಣಲ್ಲಿ?!!


ನಿನ್ನೆದುರು ಯಾವ ಕವಿತೆಗಳೂ ಮೂಡದೆ
ನೀನೇ ಕವಿತೆಯೆಂದು ಬೀಗುವಾಗ
ಮಾಗಿದ ಮೋಡದಂತಾಗಿ ಕರಗಿಬಿಡುತ್ತೇನೆ
ಸಂಪೂರ್ಣವಾಗಿ ನಿನ್ನನ್ನಷ್ಟೇ ತೋಯ್ಸಿ


ಬಾ ಕೈ ಚಾಚು ಕೊಡೆಯೊಂದಿಗೆ
ಕಣ್ಣಮುಚ್ಚಾಲೆಯಾಟವಾಡೋಣ ಮಳೆಯೊಂದಿಗೆ
ಸೋತು ಗೆಲ್ಲುವ, ಗೆದ್ದು ಸೋಲುವ
ಎಲ್ಲ ಸ್ವಾದಗಳನ್ನೂ ಸವಿದಷ್ಟೆ ಸವಿಯಾಗಿ
ಸವೆಸಿಬಿಡೋಣ ಪುನರಾಗಮನದ ಆಕಾಂಕ್ಷಿಗಳಾಗಿ!!


ಮಳೆ ಎಷ್ಟು ಉತ್ಸಾಹಿಯಾಗಿದೆಯೆಂದರೆ
ನಮ್ಮ ಏಕಾಂತಕ್ಕೆ ವಿಘ್ನ ಹಾಡಲೆಂದೇ
ಉಪ್ಪರಿಗೆ ಮೇಲೆ ಸದ್ದು ಮಾಡಿದಂತೆ
ಅದಕ್ಕೇನು ತಿಳಿಯಬೇಕು ನಮ್ಮ ಸ್ವಗತ!!



                                               - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...