ಒಂದೇ ನಾವಿಬ್ಬರು..

...
ಮೊದಲು ಹೃದಯವೇ ನೀನಾಗಿ
ನೋಡುತ್ತ ನಿಂತ ನನ್ನ ಬಡಿತಗಳ
ಕಸಿದಂತೆ ಬಡಿದಾಡಿಕೊಂಡಿದ್ದ ನೀನು
ಇನ್ನೂ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದೆ


ದೇಹ ಬೆಳೆದಂತೆಲ್ಲ ಹೃದಯ ಕಮರಿದರೂ
ಕೊಟ್ಟಷ್ಟೂ ಪ್ರೀತಿಯ ನರನಾಡಿಗಳಿಗೆ ರವಾನಿಸಿ
ಆಕಾರ ಪಡೆಯತೊಡಗಿದ ನಿನ್ನ ಬೆನ್ನಿಗೆ
ಇಡಿ ಜನ್ಮವ ಹೊತ್ತು ಬದುಕುವ ಶಕ್ತಿ ದೊರೆಯಲಿ


ಯಾವ ಬಯಕೆಗಳಿಗೂ ಚಾಚದ ಕೈಗಳು
ಯಾವ ಗಮ್ಯದೆಡೆಗೂ ಮೋಹಗೊಳ್ಳದ ಕಾಲ್ಗಳು
ಎಲ್ಲ ತಿಳಿದೂ ತಟಸ್ಥ ಸ್ಥಿತಿಯಲ್ಲುಳಿವ ಭಂಗಿ
ಎಲ್ಲ ಕಂಡೂ ಮೌನ ಆಚರಿಸುವ ಪರಿ
ಈಚೆಗೆ ನನ್ನ ಹೆಚ್ಚು ಸೆಳೆತಕ್ಕೊಳಪಡಿಸುತ್ತಿವೆ


ನಿನ್ನ ಸೃಷ್ಟಿಯ ಮಜಲುಗಳೆನ್ನ ಸವೆಯುವಿಕೆ
ನನ್ನ ಅಹಂಕಾರಗಳೆಲ್ಲ ಅಲಂಕೃತಗೊಂಡು
ಅಂತಿಮ ಮೆರವಣಿಗೆಯಲ್ಲಿ ಪಾಲ್ಗೊಂಡಿವೆ
ನಾ ಮೆಲ್ಲೆ ಕಳೆದು ನನ್ನನ್ನು ಕಂಡುಕೊಳ್ಳುವ ತವಕ


ನೀ ಹುಟ್ಟುವ ಕ್ಷಣದ ಮುನ್ನ, ನನ್ನ ಸಾವು
ನೀ ಹುಟ್ಟಿದ ಮರುಕ್ಷಣವೇ ಜನನ
ನಾನು, ನೀನು ಇಬ್ಬರೂ ಮಗುವಂತೆ ಕೂಡಿ
ಜೀವನವನ್ನ ಕಟ್ಟುವಾಟಕ್ಕೆ ನಾಂದಿ ಹಾಡೋಣ


ಅಂದಹಾಗೆ, ಅಸಲಿಯತ್ತೇ ಕಳೆದ ನನಗೆ
ಹೆಸರೇ ಗುರುತಿಲ್ಲದಂತೆ ನಟಿಸುವಾಸೆ
ನಾ ನಿನಗೆ, ನೀ ನನಗೆ ಹೆಸರಿಟ್ಟುಕೊಳ್ಳುವ
ಇಬ್ಬರದ್ದು ಒಂದೇ ನೆತ್ತರು
ಒಂದೇ ನಾವಿಬ್ಬರು....


                                         - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩