ಹಾಗೇ ಕರ್ಗೋಗ್ತಾ!!

ಕಾಮನ ಬಿಲ್ಲಿದೆ ಕಣ್ಣೆದುರಲ್ಲಿ 
ಕರಗಲು ಕಾರಣವಿದೆ ಅದಕೆ 
ಹನಿಯುವ ಹೊತ್ತಿಗೆ ಕೆನ್ನೆ ಕೇಳಿತು 
"ಮಡಿಲಾಗಲಿ ನಾ ಯಾವುದಕೆ?"

ಕಬ್ಬಿನ ಮಾತನು ಕಿವಿ ಆಲಿಸಲು 
ಆಲೆ ಮನೆಯೇ ತಾನಾಯ್ತು 
ಕಿವಿಯ ಆಲೆಗೆ ಜಾರಿತು ಬೆಲ್ಲ 
ಸಿಕ್ಕಿ ಬಿದ್ದರೆ ಏನಾಯ್ತು?!!

ಕುರುಳಿನ ಸಾಗರ ತಿಳಿ ತಂಗಾಳಿ 
ಮರುಳಾಗಲು ನಾ ತೀರದಲಿ 
ಮೈ ಮರೆತು ಕನವರಿಸುತಲಿರಲು 
ಮಿತಿ ಮೀರದೆ ನಾ ಹೇಗಿರಲಿ?!!

ಬಳೆಯ ಸದ್ದಿಗೆ, ಮುದ್ದಿಸೋ ಮಳೆಯ 
ಹೋಲಿಸಿ ಬರೆವ ಕಾತರವು 
ಸಾಮ್ಯವೇ ಇಲ್ಲದ ರೂಪಕ ನೀಡಿ 
ದಕ್ಕುವುದೇ ಒಪ್ಪುವ ಗೆಲುವು?!!

ಬೆನ್ನೀರದು ಬೆನ್ನಿಗೆ ಅಂಟಿರುವುದು 
ಬೆವರಿಗೆ ಪರಿಚಯಿಸದೆ ಇರಲಿ 
ಬೆರಳಿದೋ ಸಜ್ಜಾಗಿದೆ ಮುಂದಾಗಲು 
ಬಾಚುವ ತನಕ ಕಾದಿರಲಿ 

ಮುನ್ನೋಟದ ಮುನ್ನುಡಿಯ ಪದವೇ 
ಪ್ರೇರಣೆ ಆಯ್ತು ಮುನ್ನಡೆಗೆ 
ಚಂದಿರ ಮಡಿಲಲಿ ಕಾಣಿಸುವಂತ್ಯಕೆ 
ಮುಂಗಡ ಪಡೆಯಲೇ ಬಾಡಿಗೆಗೆ?!!

ಬೇಯುವ ಮನಸಿದೆ ಕಾವಿಗೆ ಕೊರತೆ 
ಇರಲಾರದು ಒರಗಿ ನೋಡು 
ಇಷ್ಟವಾದರೆ ನಿನ್ನದೇ ಕವನ 
ಇಲ್ಲವೇ ಹೊಸೆಯುವೆ ಹೊಸ ಹಾಡು !!

                                   -- ರತ್ನಸುತ 

Comments

  1. ಎರಡನೇ ಕೋನ ಸದರಿ ಕವಿತೆಗಿದೆ. hostಗಳ ಅಳಲು ಇಲ್ಲಿ ಅವ್ಯಕ್ತವಾಗಿ ಬಂದಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩