Wednesday, 27 November 2013

ನಾನು ಹೆಸರಿಲ್ಲದವಳು ಸ್ವಾಮಿ !!ಕಾರ್ಮುಗಿಲು ದುರುಗುಟ್ಟುತಿತ್ತು 
ಕಪ್ಪೆಗಳು ವಟರುಗುಡುತಲೇ ಇದ್ದವು 
ಗೋಡೆಗಂಟಿದ ಸಿನಿಮಾ ಪೋಸ್ಟರ್ರು ಹರಿದಿತ್ತು 
ನಾಯಕಿಯ ನಡು ಭಾಗವೊಂದ ಬಿಟ್ಟು 
ಲೈಟು ಕಂಬಗಳಿಗಿಲ್ಲ ಕಂಬಳಿಯ ಹಂಗು 
ತಂತಿ ಮೇಲೆ ಕೂತ ಕಾಗೆಗಳಿಗೂ 
ಎಂದಿನಂತೆ ಸಂಜೆ ಸೂರ್ಯನ ಮುಳುಗಡೆ 
ಹಸಿದ ಹೊಟ್ಟೆಯ ಒಳಗೆ ಸಣ್ಣ ಕೂಗು 
 
ನೆನ್ನೆ ಸುರಿದ ಮಳೆಗೆ ಗುಂಡಿಗಳು ತುಂಬಿ 
ಕಕ್ಕುತಿದ್ದವು ಆಚೆ ಉಕ್ಕು ನೀರ 
ಫುಟ್ಪಾತಿನ ಮೇಲೆ ಬೈಕುಗಳ ಸಂಚಾರ 
ನಡೆದವರು ಕಡು ಬಡವರೇ ತೀರಾ 
ಸಿಗ್ನಲ್ಲಿನಲಿ ಜೋರು ಹಾರನ್ನು ಶಬ್ಧ
ಗಾಜು ಮೇಲೆತ್ತಿ ಏ.ಸಿ ಒಳಗೆ ಕೂತವರು 
ಹೊರಗಿನ ಗಜಿಬಿಜಿಯ ಕೆಳಿಯಾರೇ ?
ತಟ್ಟಿ ನೋಡುವೆ ಒಮ್ಮೆ ಕೇಳುತಾರೆ 
 
"ತಂದೆ ಅಲ್ಲದ ತಂದೆ ನನ್ನ ಜನಕ 
ನಿಮ್ಮೊಳಗೆ ತನ್ನ ಕಾಣೆಂದ ತಿರುಕ 
ಒಂದು ಕೊಂಡರೆ ಹತ್ತು ರೂ, ಮತ್ತೊಂದು ಫ್ರೀ 
ಪ್ರೀತಿ ಸಂಕೇತ ಇದು ಪ್ಲೀಸ್ ತಗೊಳ್ರಿ"
ಮಸಿಯೆದ್ದ ಕೈಯ್ಯಿ, ಗೀಜು ತುದಿಗಣ್ಣು 
ಮಾಸಲು ಬಟ್ಟೆ, ನಾರಿದ ಮೈಯ್ಯಿ 
ಕಾರಿನೊಳ ಮಗು ಅತ್ತಿತು ಗುಮ್ಮಳೆಂದು 
ಸಿಟ್ಟಿಗೆದ್ದವರಂದರು "ಹೋಗು ಮುಂದೆ ಮುಚ್ಚಿಕೊಂಡು" 
 
ಸಿಗ್ನಲ್ಲು ಹಸಿರಾಗಿ ಮುಂದುವರೆಯಿತು ಅಲ್ಲಿ 
ಕಾರುಗಳ ತೇರು, ಫುಟ್ಪಾತು ಬೈಕುಗಳ ಪಾಲು  
ಲಂಗಕೆ ಬಿಗಿದ ಚೀಲ ಜಣಗುಡುತಲಿತ್ತು 
ಓಡಿ ಹೋದೆ ಅವ್ವಳ ಬಳಿಯಲ್ಲಿ ಕೂತು 
ತುಂತುರು ಛೇಡಿಸಿತು ವ್ಯಾಪಾರ ಕಂಡು 
"ನಾನೀಗ ಬಂದೆ, ಏನು ಮಾಡುವೆ?" ಎಂದು 
ಲಾಭ ದಕ್ಕುವುದಿರಲಿ ಅಸಲು ಬರಲಿ
ಬೇಗ ಸಿಗ್ನಲ್ಲು ಕೆಂಪೆದ್ದು ಬಿಡಲಿ 
 
ಕೆಮ್ಮುತ್ತಲೇ ಬಿಟ್ಟು ಕೊಟ್ಟಳವ್ವ 
ಮಗಳಲ್ಲದ ಮಗಳ ಮತ್ತೊಂದು ಸರದಿಗೆ 
ಮಂಜೆದ್ದ ಗಾಜನು ತಟ್ಟಿಕೊಂಡೆ 
ಚಿಟ-ಪಟ ಹನಿಗಳ ಸವಾಲಿನ ನಡುವೆ 
ಅಲ್ಲಿ ಬೈದವರಿಲ್ಲ, ಜರಿದವರಿಲ್ಲ, ಅತ್ತವರಿಲ್ಲ 
ಕೇಳಿಬಂದಿದ್ದೆಲ್ಲ ಎಫ್.ಎಮ್ಮಿನಮ್ಮಿಯರ ವೈಯ್ಯಾರ ಮಾತು 
ತಲೆಯ ಆಸರೆ ಚೀಲದ ಉಪ್ಪರಿಗೆ ಸೋರಿತ್ತು
ಸೇಲಾಗದ ಒಂದೂ ಹೂವ ಮೈದೆರೆದು ಮಳೆಹನಿಗೆ 
 
ಒಬ್ಬ ಚಾಲಕ ನಿಲ್ಲಿಸಿ ವಿಚಾರಿಸಿದ 
ಹೂವ ಸವರಿ, ಮೈಯ್ಯ ಸವರಿ
ಹೆಲ್ಮೆಟ್ಟಿನೊಳಗಣ್ಣ ಕಾಮ ಬಾಣವ ಗುರಿಯಿಟ್ಟು. 
ಅಷ್ಟರಲೇ ಹಸಿರಾದ ಸಿಗ್ನಲ್ಲು,
ದಿನಾಲೂ ಇಂಥವೆಲ್ಲ ಮಾಮೂಲು 
 
ಮುರುಕಲು ಗುಡಿಸಲು ಕಿತ್ತು ಹೋಯಿತು 
ಒಳಗೆ ಪಾತ್ರೆ, ಪಗಡೆ, ನಗ, ನಾಣ್ಯ ಹಾರಿತು 
ಮತ್ತೊಂದು ಊರಿಗೆ, ಹೊಸದೊಂದು ಸೂರಿಗೆ- 
-ಹುಡುಕಾಟ ನಡೆಸಬೇಕಿದೆ ಈಗ 
ಹೊಸ ಅಪ್ಪ, ಹೊಸ ಅವ್ವ 
ಅದೇ ಹಳೆ ಬಡತನ, ಅಪ್ಪನ ಕುಡಿತ 
ಅವ್ವಳ ಕೆಮ್ಮು, ಪೇದೆಗಳಿಗೆ ಭಿಕ್ಷೆ 
ಕಾಮ ನಗರಿಯಲ್ಲಿ ಮಾನಕೆ ಅಲ್ಪ ರಕ್ಷೆ 
 
ಸಿಗ್ನಲ್ಲು ಬದಲಾಯ್ತು ಮಾರಾಟದ ಸರಕೂ 
ಈಗ ಹಿಡಿದ ಮಾಲು ಚಿರಕಾಲ ಉಳಿವಂತದು 
ಬಣ್ಣ ಬಣ್ಣದ ಪ್ಲಾಸ್ಟಿಕ್ ಹೂವ
ಸಿಂಗಲ್, ಡಬಲ್, ಸೆಟ್ಟುಗಳ ಪ್ಯಾಕೆಟ್ಟಿನಲ್ಲಿ 
ಮಾರಾಟ ವೈಖರಿ, ಅದೇ ಬೇಜಾರು ರಾಗ 
ಹೃದಯದಿಂದಲ್ಲ, ಹೊಟ್ಟೆಯಿಂದ ಹೊಮ್ಮುವಂತದು 
ನಾನೂ ಆ ಪ್ಲಾಸ್ಟಿಕ್ಕಿನಂತೇ 
ಹೊಸಕಿದರೂ ಮತ್ತೆ ಅರಳಬಲ್ಲ ಗುಲಾಬಿ 
 
ಹೂವ ಕೊಳ್ಳುವವರೀಗ, ನನ್ನನ್ನೂ ಕೇಳುವರು 
"ಎಷ್ಟು ರೇಟು?" ಎಂದು 
ನನಗೆಲ್ಲಿ ತಿಳಿದೀತು ನನ್ನ ರೇಟು 
ಈಗೀಗ ಡಲ್ಲು ಹೊಡಿತಿದೆ ಮಾರ್ಕೆಟ್ಟೂ 

ಕೆಮ್ಮುತಿರುವೆ ಈ ನಡುವೆ ನನ್ನ ಅವ್ವಂದಿರಂತೇ 
ನನಗೂ ಇದ್ದಾನೆ ಕುಡುಕ ಗಂಡ
ದಿನಕ್ಕೊಬ್ಬಳು ಮಗಳು 
ಅವಳು ಥೇಟು ನನ್ನತೆಯೇ, ಹೆಸರಿಲ್ಲದ ಪ್ರಾಣಿ !!
 
                                               -- ರತ್ನಸುತ 

1 comment:

  1. ಬದುಕಿನ ಕ್ರೌರ್ಯವೇ ಹಾಗೆ ಮಿತ್ರ, ಅವಳಿಗಾದರೂ ಅನಿವಾರ್ಯ ಭಿಕ್ಷಾಟನೆ.

    ReplyDelete

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...