ಹೆಸರ ಕೂಗುವ ಮುನ್ನ !!

ಮಾತೊಂದಿದೆ 
ಹೇಳಲಾಗದೆ, ನುಂಗಲಾಗದೆ 
ನಾಲಿಗೆ ತುದಿಯಲ್ಲಿ 
ಜೀಕಾಡುತ್ತ, ಯಾರೋ ದೂಡುತ್ತಿರುವಂತೆ  /ಕಾತರ/
 
ಕಚ್ಚಿಕೊಂಡ ತುಟಿಗಳ
ನೆತ್ತರ ಮಡುವಲಿ ದೀರ್ಘ ಉಸಿರು 
ತುಟಿ ದಾಟುವ ಪಿಸುಗುಟ್ಟಲಿ 
ಆಗಬಹುದೇ ಅಸಡ್ಡೆ ಏಂಜಲ ಸಿಂಚನ ?  /ಕೀಳರಿಮೆ/
 
ಮಾತೆಲ್ಲ ನನ್ನಲ್ಲೇ ಉಳಿಸಿ  
ಅನರ್ಥ ಮೌನವೀವೆ 
ಆದಷ್ಟೂ ಫಲಿಸಲಿ, ಮಿಕ್ಕವು 
ಚಿದಂಬರ ರಹಸ್ಯವಾಗಿ ಉಳಿಯಲಿ  /ಚೇತರಿಕೆ/
 
ಬಾಯಿಗೆ ಬೀಗವ ಜಡಿದು 
ಸಪ್ತ ಸಾಗರ ಸೇರುವೆಡೆಯಲಿ 
ಕೀಲಿ ಕಳೆದ ಪುರುಷ ಶಾಕುಂತಲೆಯಾಗುವೆ 
ಆ ಮತ್ಸ ಈಜುವ ದಿಕ್ಕನು ಮರೆತು  /ಮರುಳು/
 
ಹಾಡುಗಳೆಲ್ಲ ಕಂಪಿಸಿವೆ, ಚಿಂತಿಸಿವೆ 
ವಿನಂತಿಸಿಕೊಂಡಿವೆ ಹೊರಹೊಮ್ಮಲು 
ನಿರಾಧಾರವಾಗಿ, ನಿರಾಕಾರವಾಗಿ
ಕಾಯಾಗಿ, ಮಾಗಿ ತಲೆಬಾಗಿ  /ಅಸಹಾಯಕತೆ/
 
ನಾಲಿಗೆ ತುಂಡಾಗಿದೆ 
ಕಿರುನಾಲಿಗೆ ಸದ್ದಿಗೆ ಅಡ್ಡಗಾಲು 
ಕೊರಳು ತಿರುಚಿಕೊಂಡ ಕೊಳಲು 
ಇಷ್ಟೂ ತೊದಲು ನಿನ್ನ- 
-ಹೆಸರೊಮ್ಮೆ ಹಿಡಿದು ಕೂಗಿಕೊಳಲು ............. /ಅಸಲಿಯತ್ತು/
                                      
                                          -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩