ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ !!!

ಅಷ್ಟು ದೂರ ಕ್ರಮಿಸಿ 
ಮರೆಯಾಗುವ ತಿರುವಿನಲ್ಲಿ 
ಸಣ್ಣದೊಂದು ಖುಷಿಯ ಕೊಟ್ಟೆ 
ಚೂರು ನಿದಾನಿಸಿ 
ಹಿಂದಿರುಗಿ ನೋಡದರೆ 
ಹೊಣೆಯಾಗುವೆ ಆಘಾತಕೆ 
ಗದ್ದಲ ಎಬ್ಬಿಸಿ ಎದೆಯಲಿ 
ಮೌನವ ನಿವಾರಿಸಿ 
 
ಹತ್ತಿರದಲಿ ಅಷ್ಟು ದೂರ 
ದೂರದಲ್ಲಿ ಹತ್ತಿರದ 
ಭಾವ ಸ್ಪರ್ಶದೊಳಗೆ ಎನಿತು 
ವಿಶೇಷವಿದು ಕಾಣೆ ?!!
ಮನದ ಪುಟ್ಟ ಅರಮನೆಯಲಿ 
ದೀಪ ಹೊತ್ತು ಬಂದವಳೇ 
ಈವರಿಗಿನ ಅಚ್ಚರಿಯ 
ಪ್ರವೇಶ ನಿನ್ನದೇನೆ !!
 
ಸೋಲುವ ಪದಗಳ ಹಿಂಡು 
ಸಾಗಿವೆ ಸೊರಗುತ ನೊಂದು 
ಸಾಟಿಯಿಲ್ಲದಂಥ ನಗೆಯ 
ಎದುರು ಸೆಣಸಿ ಸೋತು !
ಕಾವಲ ಕಣ್ಣನು ದಾಟಿ 
ಹೃದಯದ ಬಾಗಿಲ ತಟ್ಟಿ 
ಗದ್ದಿಗೆ ಹಿಡಿಯುವುದೇ
ನೀ ಪಟ್ಟು ಬಿಡದೆ ಕೂತು ?!!
 
ನಂತರ ಆನಂತರ 
ಈ ಹೊತ್ತಿನ ಈ ವಿವರ
ಸಲ್ಲಿಸುವ ಸರದಿಗೆ 
ಸಾಲದಾಯ್ತು ಸೊಲ್ಲು 
ಕೊಂಚ ಸುಧಾರಿಸಿ 
ಮೊದಲಾಗುವೆ ಮಾತಿಗೆ 
ವದಂತಿಗಳನು ಬದಿಗಿಟ್ಟು 
ವಿನಂತಿಯನ್ನು ಕೇಳು 

ಹುರುಳಿಲ್ಲದ ನನ್ನ  
ಕವಲೊಡೆದ ದಾರಿ 
ಪಯಣ ಎಲ್ಲಿಗೋ ಏನೋ 
ಗೊತ್ತು ಗುರಿಯಿಲ್ಲ !
ಕ್ಷಿತಿಜದಲಿ ನಾನು 
ಕೈ ಹಿಡಿವೆ ನಿನ್ನ 
ನಾ ಭೂಮಿ, ನೀ ಬಾನು 
ಕ್ಷುಲ್ಲಕ ಮಿಕ್ಕೆಲ್ಲ !!

               -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩