ಹೀಗೂ ಒಂದು ಕವನ!!!??

ಮೌನವೇ ರಾಗ, ಏಕಾಂತವೇ ಭಾವ
ನಡುವೆ ಒದ್ದಾಟವೇ ಒಂದು ಹಾಡು 
ಗೀಚುವುದೇ ಸಾಲು, ತೋಚುವುದೇ ಪದ್ಯ 
ಹೀಗಿದೆ ಏಕಾಂಗಿ ಕವಿಯ ಪಾಡು 

ಕಂಡದ್ದೇ ಸ್ಪೂರ್ತಿ, ಅಂದುಕೊಂಡದ್ದೇ ಅರ್ಥ 
ತಾನಾಗೆ ಹರಿದ ಅಕ್ಷರದ ಕಾಲುವೆ 
ಮಿಂದಷ್ಟೇ ಖುಷಿ, ಸಹಿಸಿಕೊಂಡಷ್ಟೇ ಸಹನೆ 
ತೂಗಾಡಿ ಕಟ್ಟಿಕೊಂಡ ಪದಗಳ ಸೇತುವೆ 

ಬಂದಷ್ಟೇ ನಿದ್ದೆ, ತಿಂದಷ್ಟೇ ಹಸಿವು 
ಬಾರದ ನೆನಪುಗಳ ಕಣ್ಣಾ ಮುಚ್ಚಾಲೆ 
ಸಿಕ್ಕಷ್ಟೇ ಗೆಲುವು, ಸಾಕಷ್ಟು ಸೋಲು 
ಒಂದಿಷ್ಟು ತಿದ್ದುಪಡಿ ಹಾಳೆ ಮೇಲೆ 

ಒತ್ತಾಯದ ಸಮಯ, ಅದೇ ಹಳೆ ವಿಶಯ 
ಮಂಕಾದ ವಿಸ್ತಾರದಾವರಣ ಸುತ್ತ
ಮಾಡೆಂದು ಬಿಟ್ಟದ್ದ; ಬಿಟ್ಟು ಬೇರೆಲ್ಲ-
-ಯೋಚನೆಯ ಸೂಚನೆ ನೀಡುವ ಚಿತ್ತ

ಅಲ್ಲೊಂದು ಸದ್ದು, ಆ ಕಿವಿಯ ವೊದ್ದು 
ಗಮನವ ಸೆಳೆಯುವ ಧುಸ್ಸಾಹಾಸ ಯತ್ನ 
ಕವಿ ಕಿವುಡನಲ್ಲ, ಆದರೂ ಸ್ಪಂದಿಸದೆ 
ಮುಂದುವರಿಸಿದ ಅವನ ನಿರಾಕಾರ ಸ್ವಪ್ನ 

ಮುಗಿದಿತ್ತು ಬರಹ, ಮಳೆ ಹನಿಯ ತರಹ 
ಭೂಮಿಯ ದಾಹವ ನೀಗಿಸದ ಹಾಗೆ 
ಹಣೆಯಿಟ್ಟು ಬೆವರ, ಜಾರಲು ಬಿಡದೆ 
ಒಡಲಲ್ಲೇ ಕೂಡಿಟ್ಟುಕೊಂಡರೆ ಹೇಗೆ?
ಜಾರಲು ಬಿಡಿ ಯಾವುದಾದರು ರೂಪ ತಾಳಲಿ, ಈ ಕವಿತೆ ಹಾಗೆ......

                              --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩