Monday, 18 January 2016

ನನ್ನೊಂದಿಗೆ ನಾನು

ದಾರಿಗೆ ಅಡ್ಡಲಾಗಿ ಮಲಗಿ
ನಾ ಎತ್ತಲೂ ಹೋಗದಂತೆ
ನನ್ನ ಜುಟ್ಟು ಹಿಡಿದು
ನಿಯಂತ್ರಿಸುವ ನೆರಳೇ
ಮುಂದೆ ಸಾಗಲು ಬಿಟ್ಟುಬಿಡು
ಹಿಂದಿರುಗಿದರೆ ಸೋತವುಗಳೊಡನೆ
ಮೋಟು ಬೀಡಿ ಸೇದುತ್ತ
ಅದೇ ಸೋಲುಗಳ ಪರಾಮರ್ಶೆ,
ಹೊಗೆಯೂ ಅರೆ ಗಳಿಗೆ ಎದೆಯಲ್ಲಿ ಉಳಿಯಲಾರದು


ಒಮ್ಮೆ ಎತ್ತರಕ್ಕೆ ಹಿಗ್ಗಿ
ಇನ್ನೊಮ್ಮೆ ಕುಬ್ಜವಾಗುವ ನಿನ್ನ
ನನ್ನ ಸಮಾನಕ್ಕೆ ಎತ್ತಿ ಹಿಡಿದು-ಹಿಡಿದು
ತೋಳುಗಳು ರೋಸಿ ಹೋಗಿವೆ


ಪ್ರಯೋಗಶೀಲತೆಗೆ ನೀ ಕೊಡುವ
ಅದೇ ಎಂದಿನಂತಿನ ಸಪ್ಪೆ ಸಮ್ಮತಿಯಲ್ಲಿ
ಮುನ್ನುಗ್ಗುವ ಛಲಕೆ ಅಚಲತೆ ಬಡಿದು
ಅಲ್ಲೆ ನಿಂತುಕೊಂಡಾಗ ನೋಡಬೇಕು
ನಿನ್ನ ಅಮಾಯಕತನದಲ್ಲಿನ ಸೊಕ್ಕು


ನಿಶೆಯಲ್ಲಿ ನಶೆಯೇರಿಸಿಕೊಳಲು
ನಿನಗೆಂದೇ ಮೀಸಲಿಟ್ಟ ಖಾಲಿ
ಗಾಜಿನ ಲೋಟದ ಮುಖೇನ ನಿನ್ನ ನೋಡುವಾಗ
ಅದೇನು ಅಂಕುಡೊಂಕಾಟ ನಿನದು,
ಅಸಲು ಕುಡಿದದ್ದು ನಾನಾ ನೀನಾ ಎಂಬ ಶಂಕೆ
ಅಲ್ಲೇ ಮುಕ್ಕಾಲು ಭಾಗ ಅಮಲು ಪೋಲು!!


ನಿನ್ನ ಇರುವಿಕೆಯನ್ನು ಪ್ರಶ್ನಿಸಿ
ಅರ್ಧ ಆಯಸ್ಸು ಕಳೆದಿದ್ದೇನೆ
ಕೂದಲು ಬೆಳ್ಳಗಾಯಿತೆಂಬ ಚಿಂತೆಯಿಲ್ಲ
ಹಾಲು ದಂತ ಬಲಿತು ನೋಯುವಾಗ
ನಿನ್ನ ವಿರುದ್ಧ ಹಲ್ಲು ಮಸೆದ ಪ್ರಸಂಗಗಳು
ಒಂದೊಂದಾಗಿ ನೆನಪಾಗುತ್ತ
ಒಂದೊಂದೇ ಉದುರಿ ಬಿದ್ದವು
ನಾನಿನ್ನು ನಗಲಿಕ್ಕೂ ಅಸಮರ್ಥ


ನಾ ನಾಶವಾಗದ ಹೊರತು
ನೀ ನಾಶವಾಗಲಾರೆ ಎಂದರಿತು
ವಿನಾಶದ ಅಂಚಿಗೆ ತಲುಪಿದ್ದೇನೆ
ಅಲ್ಲೂ ನಿನ್ನ ಉತ್ಪ್ರೇಕ್ಷೆ,
ನಾನೇನೆಂಬುದ ನನಗೆ ತೋರುತ್ತಲೇ
ನೀನಾರೆಂಬುದು ರೂಪುಗೊಂಡಂತಿದೆ
ಇಗೋ ಒಂದು ಅಂತಿಮ ಸಾಲು
ಸಾಧ್ಯವಾದರೆ ಇಬ್ಬರೂ ಜೊತೆಗೆ ಓದೋಣ!!


                                           - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...