Thursday, 14 January 2016

ಅಮ್ಮನೊಡನೆ...


ಅಮ್ಮನೊಡನೆ ಮಗುವಾಗಿರಬೇಕು
ತಮಾಷೆಗೆ ಚಪ್ಪಾಳೆ ತಟ್ಟುತ್ತ ನಕ್ಕು
ದುಃಖಕ್ಕೆ ಬಳಬಳನೆ ಅತ್ತು
ರೇಗುತ, ರೇಗಿಸುತ, ರೋಧಿಸುತ್ತ
ಒಂದು ಹತ್ತಾದರೂ ಲಟ್ಟಣಿಗೆ ಮುರಿದೂ
ತಲೆ ಗಟ್ಟಿಗಿರಿಸಿಕೊಳ್ಳಬೇಕು



ಅಮ್ಮನೊಡನೆ ಮಗುವಾಗಿರಬೇಕು
ಹಸಿವಾದಾಗ ಬೇಕಾದ್ದ ಬೇಡಿ
ಅವಳಿಲ್ಲದಾಗ ನೊಂದು ಒದ್ದಾಡಿ
ಆಗಾಗ ಬಿಗಿದಪ್ಪಿ ಮುತ್ತಿಟ್ಟು
ಎಲ್ಲ ಹಿಂಜರಿಕೆ ಬದಿಗಿಟ್ಟು
ಹಬ್ಬಕ್ಕೆ ಕೊಡಿಸದ ಸೀರೆಯ ನೆಪದಲ್ಲಿ
ನೂರು ಬಾರಿಯಾದರೂ ಉಗಿಸಿಕೊಂಡು



ಅಮ್ಮನೊಡನೆ ಮಗುವಾಗಿರಬೇಕು
ತಡವಾಗಿ ಬಂದಾಗ ಮಾತು ತಡವರಿಸಿ
ತಪ್ಪುಗಳ ಮೇಲೆ ತಪ್ಪನ್ನು ಎಸಗಿ
ತಪ್ಪಾಯಿತೆಂದು ತಪ್ಪೊಪ್ಪಿಕೊಂಡಾಗ
ಕರುಳ ಕಿವುಚಿಕೊಂಡು ಕಿವಿ ಹಿಂಡುವಾಗ
ಆಕಾಶ ಭೂಮಿಯ ಒಂದಾಗಿಸಿ ಅಳಲು
ಮುಂದಾಗಿ ಅವಳೇ ಮುನಿಸನ್ನು ಬಿಡಲು



ಅಮ್ಮನೊಡನೆ ಮಗುವಾಗಿರಬೇಕು
ಹಠದಲ್ಲಿ ಯಾವುದೇ ರಾಜಿಯಿರದಂತೆ
ಚಟಗಳೆಲ್ಲವ ತಾನು ಅರಿತುಕೊಂಡಂತೆ
ಮೌನದ ಮಾತುಗಳ ತಿಳಿ ಪಡಿಸುವಂತೆ
ಒಪ್ಪಿಗೆಯ ಕೊನೆಯಲ್ಲಿ ಒಪ್ಪದ ಮನಸನ್ನು
ತೆರೆದು ತನಗೆ ಎಲ್ಲ ಒಪ್ಪಿಸಿ ಬಿಡುವಂತೆ



ಅಮ್ಮನೊಡನೆ ಮಗುವಾಗಿರಬೇಕು
ನಾನಾಗಿ ಹೇಳದ ತಾನಾಗೇ ಅರಿತದ್ದ
ಸುಳ್ಳೆನ್ನುವ ನನ್ನ ತಾ ಸುಳ್ಳಾಗಿಸಲು
ಕ್ರೋಧವ ನಿಗ್ರಹಿಸಿ, ಪ್ರೀತಿಯ ಆಗ್ರಹಿಸಿ
ಹಾಲಾಹಲದ ಮನವ ಹಾಲಾಗಿಸಲು
ನನ್ನ ನನ್ನೊಳಗೆತನ್ನ ನನ್ನೊಳಗೆ
ನನ್ನ ತನ್ನೊಳಗೆ, ತನ್ನ ತನ್ನೊಳಗೆ
ಮರು ತಾಳಿಸುವ ತವಕ ಚಿರವಾಗುವಂತೆ!!



                                       - ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...