Friday, 29 January 2016

ನಿನ್ನ ಓದಿಗೆ

ಉಳಿಸಿಕೊಂಡ ಅಷ್ಟೂ ಮಾತನು
ಒಂದೇ ಉಸಿರಲಿ ಹೇಳಿ ಮುಗಿಸುವೆ
ತಡವಾದರೂ ಸರಿ ಬಿಡುವಾಗಿ ಬಾ
ನಡುವಲ್ಲಿ ತಡವರಿಸಿ ಮಾತು ಬಡವಾಗದಿರಲಿ


ಎರಡೂ ಕಣ್ಣಲ್ಲಿ ತಡೆದಿಟ್ಟ ಹೂವನ್ನು
ಅರಳಿಸುವ ಸರದಿಯಲಿ ಕಣ್ಣೀರು ಬಂದರೆ
ತಪ್ಪು ತಿಳಿದು ನೀನೂ ಬಿಕ್ಕಳಿಸಬೇಡ
ಅಳುವಿನ ಮಿತ ಸರಣಿ ಮೊದಲಾಗದಿರಲಿ


ಬೆಟ್ಟದೆತ್ತರದೊಲವ ನೆಲಮಾಳಿಗೆಯಲೊಂದು
ಗುಟ್ಟು ಬಿಚ್ಚಿಡುವಾಗ ಬೆಚ್ಚಿ ಬೀಳದಿರು
ನಾವೊಂದೇ ಎಂದಾದಮೇಲೆ ಮುಂದಾವುದೂ
ನಮ್ಮ ನಡುವೆ ಒಗಟಿನಂತುಳಿಯದಿರಲಿ


ಸಣ್ಣ ಮಳೆಯೊಂದಕ್ಕೆ ಪರಿಚಯಿಸಿಕೊಂಡು
ಮಿಂದು ಅದರೊಳಗೊಂದಾಗುವ ಗಳಿಗೆ
ಅಪ್ಪಿ ತಪ್ಪಿ ಮಿಂಚಿ ಮರೆಯಾದ ಮಿಂಚಿಗೆ
ಎದೆ ಕದಡಿ ನಗು ಮುದುಡಿ ಬರಡಾಗದಿರಲಿ


ಮಾತು ಮುಗಿಯದ ಮಾತಿನಾಳಕ್ಕೆ ಇಳಿದು
ಎತ್ತ ಸಾಗಿದರಲ್ಲಿ ತೆಕ್ಕೆಯಲೇ ಉಳಿದು
ಚುಕ್ಕಿ ಎಣಿಸುತ್ತ ಕತ್ತಲು ಅಪ್ಪಿಕೊಂಡಿರಲು
ಸಡಿಲಾಗಿಸುವ ಬೆಳಕು ಎದುರಾಗದಿರಲಿ


                                           - ರತ್ನಸುತ

1 comment:

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...