ಯಾವ ದಿಗಂತಕೆ?

ಯಾವ ಸಾಗರದಾಚೆ ಅಡಗಿದೆ
ನನ್ನ ನಂಬಿದ ಸಾಧನೆ?
ತೀರದಿ ಮುರಿದ ಹಡಗಿದೆ
ತೇಲಿ ಸಾಗಲೇ ಸುಮ್ಮನೆ?


ಎಲ್ಲಿ ನೆಟ್ಟರೆ ಗುರಿಯ ತಲುಪುವೆ
ಯಾವ ದಿಕ್ಕದು ನನ್ನದು?
ಹಣತೆಯುಂಟು, ಕಿಚ್ಚೂ ಉಂಟು
ಮಬ್ಬಲೇನೂ ಕಾಣದು


ನಕ್ಕ ಎಲ್ಲ ಚುಕ್ಕಿಯೊಳಗೆ
ಒಂದಾದರೂ ಉದುರೀತೇ!!
ನೆರಳೇ ನೀನೇ ಕೊನೆ ವರೆಗೆ
ಶಂಕೆಯಿಲ್ಲದೆ ನಡೆ ಜೊತೆ


ಮುಗಿಲ ಮೇಲೆ ಯಾರೋ ನನ್ನ
ಹಿಂಬಾಲಿಸುವಂತಿದೆ
ಹೇಗೆ ಮರೆಸಲಿ ನನ್ನ ತಪ್ಪನು
ಸ್ವತಃ ನನಗೇ ಕಾಣದೆ?


ತಿರುವುಗಳ ತೆರುವಲ್ಲಿ ತವರಿನ
ದಾರಿ ಮರೆತೆನು ಆದರೂ
ಮತ್ತೆ ಮತ್ತೆ ಮನ್ನಿಸುತ ತಾ
ಎದುರುಗೊಂಡನು ದೇವರು


ಇದ್ದ ಮಾತ್ರಕೆ ಬಿದ್ದ ಬೀಜಕೆ
ಸಿಕ್ಕ ಸ್ಥಾನವು ದೊರಕದು
ನಿದ್ದೆಗೆಟ್ಟರೆ ಕನಸು ಬೀಳದು
ಹೆಜ್ಜೆಯಿಟ್ಟರೆ ಸವೆಯದು


                         - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩