Friday, 26 February 2016

ಇಲ್ಲಿ ಕೇಳು

ಮೈಯ್ಯೆಲ್ಲಾ ಮಸಿಯಾಗಿಸಿಕೊಂಡು
ನಿನಗೊಂದು ಉಂಗುರ ಕೊಡಿಸುವುದಾದರೆ
ಯಾಕಾಗಬಾರದು?!!
ಮಾತನ್ನೇ ಕಸಿ ಮಾಡಿಕೊಂಡು
ಉಸಿರಲ್ಲಿ ನಿನ್ನ ಬರಮಾಡಿಕೊಂಡರೆಲ್ಲ
ಸರಿಹೋಗಬಹುದು!!


ಅತಿರೇಕದ ನಡತೆಯೊಂದಿಗೆ
ಅತಿ ಸನಿಹವಾಗತೊಡಗುವುದೇನು
ಅಪರಾಧವೇ?
ಅನುಭವಿಸಿದ ನೋವುಗಳಲ್ಲಿ
ಅತಿ ಕಮ್ಮಿ ಅನಿಸಿದನೊಂದ
ಬಾ ಹಂಚುವೆ!!


ಉದಯಿಸುವೆ ನನ್ನೊಳಗೆ ದಿನವೂ
ಹೊತ್ತ ಕಂದೀಲನು ಹಿಡಿದು
ಮಲ್ಲಿಯೇ!!
ತೆರೆಯದ ಖಜಾನೆಯಿದೆ ನನ್ನಲಿ
ಅಲ್ಲಿ ಅಣು-ಅಣುವೂ ಕಾದಿಹುದು
ನಿನಗಾಗಿಯೇ!!


ಎಲ್ಲ ಮರೆತಿರುವಾಗ ಅಲ್ಲೇ ನೆನಪಾಗಿ
ಇಲ್ಲೇ ಎಲ್ಲಾದರೂ ನೆಲೆಸು ಬಾ
ಪುನಃ... ಪುನಃ
ಎತ್ತ ಸಾಗಲಿ ಮತ್ತೆ ನಿನ್ನತ್ತಲೇ ಗಮ್ಯ
ಚ್ಯುತಿಗೊಳ್ಳದ ಪದ್ಯವಾಗುವುದಲ್ಲ
ನನ್ನ ಬರಹ


ಎದುರುಗೊಂಡ ಕನ್ನಡಿಯಲೆನ್ನ ಕಂಡಂತೆ
ಬೆದರುವೆ ನಿನ್ನಲ್ಲಿ ನನ್ನ ಕಂಡು
ದರ್ಪಣ
ಎದೆಯೊಂದು ರಂಗ ಮಂದಿರದಂತೆ ಸಜ್ಜಾಗಿ
ಹೂ ಹಾಸಿದ ಹಾದಿ ಬಯಸಿದೆ ನಿನ್ನ
ನಿತ್ಯ ನರ್ತನ!!


                                          - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...