ಇಷ್ಟಕ್ಕೆ ಇಷ್ಟು

ಎಲ್ಲೋ ನಿಂತಿರುವಂಥ ನನ್ನಂಥವನನ್ನು
ಎಂತು ಕದಲುವ ಹಾಗೆ ಮಾಡಿದೆ?
ನಿಲ್ಲು ಎಲ್ಲಕೂ ಬೇಕು ನಿನ್ನಾಕ್ಷೇಪಣೆ ಮತ್ತು
ಅಪ್ಪಣೆ ಇಲ್ಲ ನೀ ನೀಡದೆ


ಏಕೆ ಮೌನದ ಸಮರದಲ್ಲೆನ್ನ ಕೊಲ್ಲುವುದು
ಇಗೋ ಉಸಿರು ನಿನ್ನ ಪಾದಕ್ಕೆ
ಕಲ್ಲಿರುವುದೇ ತನ್ನ ಕೆತ್ತಲೆಂದಾದಾಗ
ನೋವನ್ನು ಲೆಕ್ಕಿಸುವುದೇಕೆ?


ಬೇಡಿ ಬಂಧನವನ್ನು, ಎದುರುಗೊಂಡವನನ್ನ
ಅಪ್ಪಿ-ತಪ್ಪಿಯೂ ಕ್ಷಮಿಸಬೇಡ
ನಿನ್ನ ಸೋಕಿದ ಮೇಲೆ ಸೊಕ್ಕು ಹೆಚ್ಚಾದಂತೆ
ಬಡಿದಾಡಿದೆ ಹೃದಯ ಕೂಡ!!


ಒಲ್ಲೆನೆನ್ನುತ ಬಲ್ಲ ಕಳ್ಳ ವಿದ್ಯೆಗಳೆಲ್ಲ
ಊಹೆಗೈದವು ನಿನ್ನ ನೋಡು
ಆಸೆ ಬಾನುಲಿಯಲ್ಲಿ ಮೀಸೆ ಚಿಗುರಿದ ವೇಳೆ
ಬರೆದ ಸಾಲೇ ಹಾಡು!!


ಮೆಲ್ಲ ಹೇಳುವೆ ಮತ್ತೆ ಏನೆಂದು ಕೇಳದಿರು
ನಾಚಿಕೆಗೆ ಕೋಪ ಬರಬಹುದು
ಎಲ್ಲ ಕಲ್ಪನೆಗಳಿಗೂ ದೋಣಿಯೊಂದನು ಕೊಡುವೆ
ನಿನ್ನಲ್ಲೇ ತೇಲುತಿರಬಹುದು
ಒಡೆದು
ನಿನ್ನಲ್ಲೇ ಮುಳುಗಲೂ ಬಹುದು!!


                                            - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩