ಬಿಡಿ ಬಿಡಿಯ ಆಸೆಗಳು

ಅತಿಯಾದ ಪ್ರೇಮದಲಿ ಪ್ರೇಮವಲ್ಲದೆ ಮತ್ತೆ
ಬೇರೇನ ಬರೆಯಲಿ ಹೇಳು ನೀನೇ
ಮಿತವಾಗಿ ನಕ್ಕರೂ ಸೋಲುವ ನನ್ನನ್ನು
ನಗುವಲ್ಲಿ ಗೆದ್ದವಳು ನೀನೇ ತಾನೆ?!


ಹಲವಾರು ಕಾರಣ ಇದ್ದರೂ ಏನೊಂದ
ನುಡಿಯದೆ ನಿನ್ನನ್ನೇ ಇಷ್ಟ ಪಡುವೆ
ಕಣ್ಣೆದುರು ಇದ್ದರೆ ನಿನ್ನದೇ ಚಿತ್ರ ಪಟ
ನೋಡುತ್ತ ಜಗವನ್ನೇ ಮರೆತು ಬಿಡುವೆ


ನೀರಂಥ ನೀರೆ ನೀ ನೀರಾಗಿಸುವೆ ನನ್ನ
ಹರಿಯೋಣ ಬಾ ಜೊತೆಗೆ ಕೂಡಿಕೊಂಡು
ಜೀವಂತವಾಗಿಸುವ ಮೈಲಿಗಲ್ಲುಗಳನ್ನು
ನಮ್ಮ ಪ್ರಣಯದ ಕುರಿತು ಹೇಳಿಕೊಂಡು


ನುಡಿದ ಆಸೆಗಳನ್ನು ನುಡಿಸಿಕೊಂಡೆ ನೀನೇ
ಬಿಡಿಸಿಕೊಳ್ಳುವ ಆಸೆ ಇನ್ನೂ ಚೂರು
ನಾವು ಹೊರಟ ದಾರಿಯಲಿ ಹೂವು ಚೆಲಿದೆ
ಸಾಗಿರಲುಬಹುದೇನೋ ಪ್ರೇಮ ತೇರು!!


ಎಳೆಯ ಸಂಪಿಗೆ ನಿನ್ನ ಸ್ಪರ್ಶದ ಹವಣಿಕೆಗೆ
ರೆಕ್ಕೆ ತೊಡಿಸುವ ಕಾಲ ಬರಲಿ ಬೇಗ
ಅಲ್ಲಿ ಇಲ್ಲಿ ಹುಡುಕದಿರು ನಿನ್ನ ಸ್ಥಾನಕ್ಕೆ
ಹೃದಯ ತುಂಬಿ ಕೊಡುವೆ ಅಲ್ಲೇ ಜಾಗ!!


                                           - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩