Thursday 31 March 2016

ಮನೆ ತುಂಬಬೇಕು

ಜೋಳಿಗೆ ಕಟ್ಟಬೇಕು
ಉಪ್ಪರಿಗೆ ಗಟ್ಟಿಯಿದೆಯೋ ಇಲ್ಲವೋ
ಒಮ್ಮೆ ಪರೀಕ್ಷಿಸಿಕೊಳ್ಳಬೇಕು


ಹಾಲಾಡಿಗೆ ಇರುವೆ ಹತ್ತಿದೆ
ತೆಂಗಿನ ನಾರಲ್ಲಿ ತಿಕ್ಕಿ ತೊಳೆಯಬೇಕು
ಏನೊಂದಕ್ಕೂ ಬೇಕಾಗಬಹುದು


ಮೊದಲೇ ಬೇಸಿಗೆ
ಮೊಗಸಾಲೆಗೆ ಬಿಸಿಲು ಬಡಿಯದಂತೆ
ಚಪ್ಪರ ಹಾಸಿ ಬಿಡಬೇಕು


ಅಜ್ಜಿ ಸೀರೆಗಳನ್ನೆಲ್ಲ ಮಡಿ ಮಾಡಿ
ಬಣ್ಣ ಬಣ್ಣದ ಕೌದಿಗಳ ಹೊಲಿದು
ಮಡಿಸಿ ಜೋಡಿಸಿಡಬೇಕು


ಹಂಡೆಗೆ ಕಿಚ್ಚು ಹೊತ್ತಿಸಿ
ಉಗುರು ಬೆಚ್ಚಗಾದರೂ ಇರಿಸಬೇಕು
ನೀರು ಸುಧೆಯಷ್ಟೇ ನಂಜೂ ಹೌದು


ಮುಂಬಾಗಿಲ ಸಾರಿಸಿ
ಏಳು ಸುತ್ತು ಮಲ್ಲಿಗೆಯ ಮಾಲೆ ಕಟ್ಟಿ
ತೋರಣದ ಸಹಿತ ಅಲಂಕರಿಸಬೇಕು


ಕ್ಷೀರ-ಹಣ್ಣಿನ ರಸ
ಕಾಯ್ಹೋಳಿಗೆ ಪಾಯಸ
ಸಿಹಿ ತಿನಿಸುಗಳನ್ನೇ
ಅಡುಗೆ ಕೋಣೆಯ ತುಂಬ ತುಂಬಬೇಕು


ಸಿಂಗರಿಸಿದ ಬಂಡಿ ಅಲ್ಲಿ
ಕಣ್ಣಿಗೆಟುಕೋ ದೂರದಲ್ಲಿ
ಆರತಿ ತಟ್ಟೆಯೊಡನೆ ಕಾದು ನಿಲ್ಲಬೇಕು


ಮೂಲ ಮನೆಯ ಬಿಟ್ಟು
ಮೂಲದವರ ಮನೆಗೆ ಬಂದ
ಅತಿಥಿಯ ಬಾಚಿ ಬಿಗಿದು
ಮನೆ ತುಂಬಬೇಕು
ಖುಷಿಯು ಮನೆ ತುಂಬಬೇಕು!!


                                     - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...