Wednesday, 9 March 2016

ಬಾ ಕನಸೇ

ಎಲ್ಲಿ ಸಾಯುವೆ ಕನಸೇ
ಅಕ್ಷ ಸಾಗರದಲ್ಲಿ ಮುಳುಗಿ
ಮೋಕ್ಷ ಪಡೆಯೆಲು ಬಾ
ನಿದ್ದೆ ಜೊಂಪಿನ ನಡುವೆ
ತೂಗುತಾ ತೂಗುತಾ
ಕೊನೆಗೆಲ್ಲೋ ಉದುರೆ ಬಾ
ಇಷ್ಟಪಟ್ಟ ಉಡುಪ ತೊಟ್ಟು
ಕೊನೆಯದಾಗಿ ಕೊನೆದು
ಅರಳುವಷ್ಟು ದಣಿದು
ಮರಳಿ ಮರಳಿ ಮರಳಿ ಬಾ


ಬಾ ಕನಸೇ
ಎಂದೋ ಹೇಳದೆ ಬಿಟ್ಟ
ಗುಟ್ಟೊಂದ ನುಡಿವಂತೆ
ಇಂದೇ ಕೊನೆಯೆಂಬಂತೆ
ಸುಳಿದು ಮನಬಂದಂತೆ
ಅಂತೆ, ಕಂತೆಗಳಂತೆ
ಚಿಂತೆ, ಚಿತ್ತಾರದಂತೆ
ಎಂತಾದರೂ ಬಾ
ನೀ ಕಣ್ಣ ಅತಿಥಿ


ಬೆಕ್ಕು ಹಾಲುಂಡಂತೆ
ಸಿಕ್ಕೂ ಕೈ ಸಿಗದಂತೆ
ಸೊಕ್ಕಿದ ಸಿಬಿರಂತೆ
ಹೊಕ್ಕು ಕಾಡೆನ್ನನು
ಬಿಟ್ಟುಗೊಡದೆ ನನಗೆ
ಮತ್ತೊಮ್ಮೆ ನನ್ನನು!!


ಬೆಟ್ಟದ ತುದಿಯಲ್ಲಿ ತಳೆದು
ಕಡಲಿನ ತಟದಲ್ಲಿ ಕರಗು
ಮೂಡಣದ ಹರಿವಲ್ಲಿ ಕಂಡು
ತೋರಣದ ಇಬ್ಬನಿಯ ವರೆಗೂ
ಮಣ್ಣಿನ ಧೂಳಲ್ಲಿ ಎದ್ದು
ಕಣ್ಣ ಪೊರೆ ಸೀಳು
ಮೀಸಲಿಡಲಿ ಪಾಪೆ
ನಿನಗಿಷ್ಟು ಪಾಲು


ಬಾ ಕನಸೇ ಹೆಸರಿಡುವೆ
ಅಲೆದಲೆದು ದಣಿದಿರುವೆ
ಚೂರು ನೆಲೆಸು ಮನದಿ
ಬೆನ್ನೀರ ಮಜ್ಜನಕೆ
ಕಾಯಿಸಿದ ಹಸಿ ಬಯಕೆ
ಹೊಗೆಯಾಡದಂತೆ ತಾ
ಬೆಂದು ಕರೆದಿಹುದು
ನಿನ್ನಲ್ಲೇ ಮಿಂದು
ಚೂರಲ್ಲಿ ಉಳಿದಿಹುದು!!


                    - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...