Tuesday, 29 March 2016

ಬೇಜಾರಿಗೊಂದು

ತುಂಬ ದಿನ ಕಳೆದಿಲ್ಲ
ಆದರೂ ಏನೋ ಕಳೆದಂತೆ
ಮೆಲ್ಲ ಒಂದೊಂದೇ ಅಕ್ಷರ ಕೂಡಿಸಿ
ಪದ್ಯವೊಂದು ತಯಾರಾಗುತ್ತಿತ್ತು



ಎಲ್ಲೂ ಸಾಗದ
ಇನ್ನೂ ಮಾಗದ ಅದೇ
ಎಳೆ ಬಾಳೆಯ ಗೊನೆಯಂತೆ
ಏಟು ತಿಂದವು ಕೊಳೆತವು
ತಿನ್ನದಿದ್ದವೂ...



ಅರ್ಧ ಈರುಳ್ಳಿ, ಮತ್ತುಳಿದ ತರಕಾರಿ ಹೆಚ್ಚಿ
ಚಿಟಿಕೆ ಉಪ್ಪು-ಖಾರ ಉದುರಿಸಿ
ಪಕ್ವವಾಗಿ ಬೆಂದ ರವೆಯ ಉಪ್ಪಿಟ್ಟು
ವಾರಾಂತ್ಯದ ಬಾಡಿನ ಉಂಗುಟಕೂ ಎಟುಕದೆ
ಸಪ್ಪೆ ಹೊಡೆಯುತ್ತಿತ್ತು



ಬೇಸಿಗೆಯ ಸೆಕೆ
ಮನೆಯೊಳಗೂ ಬಾಳಿಸದೆ
ಬೀದಿಗೂ ಬೀಳಿಸದೆ
ಹೊಸ್ತಿಲಲ್ಲಿ ನಿಲ್ಲಿಸಿ ಕಾಡುವಾಗ
ಬಾಗಿಲು ದಢಾರನೆ ಮುಚ್ಚಿಕೊಳ್ಳುತ್ತೆ
ಬೆರಳು ಬಾಗಿಲಿಗೆ ಸಿಲುಕಿ



ಏನೊಂದೂ ನೆನಪಿಗೆ ಬಾರದಿದ್ದಾಗ
ಆತ್ಮಾವಲೋಕನದ ಸರದಿ
ಅದೇನು ವಿಲಕ್ಷಣ ಭಾವ
ಮನದ ಬಿತ್ತಿ ಚಿತ್ರಗಳೆಲ್ಲ ಹರಿದು
ಎಂದೋ ಅಂಟಿಸಿಕೊಂಡವು ಕಂಡು
ಧುತ್ತನೆ ಕುಸಿದದ್ದು ತಿಳಿಯದೆ ಹೋಯ್ತು!!



ಮುಖ್ಯ ಅಮುಖ್ಯಗಳೆಲ್ಲ ಕೂಡಿ
ರಾಡಿಯಾಗಿ ಹರಡಿದಲ್ಲಿ
ಅಲ್ಲೊಬ್ಬರಿಗೆ ಕಲೆ ಕಂಡರೆ
ಮತ್ತೊಬ್ಬರಿಗೆ ಕಂಡದ್ದು ಕೆಸರೇ
ಎಲ್ಲವೂ ಪ್ರಮುಖವೇ!!

                                 
                                      - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...