ಸ್ತ್ರೀ

ಎಲ್ಲೇ ನೋಡಲು ನಿನ್ನ ಬೆರಳ ಅಚ್ಚಿನ ಹೊರತು
ಕಾಣದಾದೆನು ಮತ್ತು ಬೇರೇನನೂ
ಬೇಕಾದ್ದ ನೀಡಿದೆ ನಿರೀಕ್ಷೆಗೂ ಮುನ್ನವೇ
ಬೇಡಲು ಉಳಿದಿಲ್ಲ ಬೇರೇನನೂ


ಎಂದೂ ಬರೆದವನಲ್ಲ ಬಿಗಿ ಹಿಡಿತವಿಲ್ಲದೆ
ಇಂದೇಕೋ ನಿನ್ನ ಕಂಡಷ್ಟೇ ಹಿತ
ನಿನ್ನ ಕರೆಗೆ ಸಿಗುವ ಎಲ್ಲ ಅಕ್ಷರಕೂ
ಹೊಸ ರೂಪ ಸಿಕ್ಕಷ್ಟೇ ಖುಷಿಯಾಯಿತಾ?!!

 
ಎಚ್ಚರ ತಪ್ಪದ ಕನಸುಗಳ ಕಾವಲಿಗೆ
ಬೆಚ್ಚನೆಯ ಅಪ್ಪುಗೆಯ ಕೌದಿಯಂತೆ
ಕಂದೀಲಿನ ಉರಿಗೆ ಕಂಡಷ್ಟು ದೂರಕೆ
ಬರಮಾಡಿಕೊಳ್ಳುವ ಹಾದಿಯಂತೆ


ನೀ ಇರಲು "ನಾ" ಇರದು
ನಾವೆಂಬ ಆತ್ಮ ಸಂತೃಪ್ತ ಭಾವ
ಹಂಚಿಕೊಂಡರೆ ಎಲ್ಲ ಮಿಂಚಿ ಹೋಗುವುದಲ್ಲ
ಸಂಕಟದ ಆಚೆ ಹಗುರಾಗಿ ಜೀವ


ಹೆಣ್ಣೇ ನೀ ಬಣ್ಣಗಳ ರಾಯಭಾರಿ
ಕಣ್ಣಲೇ ಅರಳುವ ಕುಸುಮ ನಾರಿ
ಮನ್ನಣಿ ಸಿಕ್ಕೆಡೆ ಹೊನ್ನ ಗೌರಿ
ತಪ್ಪನು ಖಂಡಿಸೋ ರೌದ್ರ ಮಾರಿ


ಜನನಿ, ಗೆಳತಿ, ಜಾಯೆ, ಭಗಿನಿ
ಸಕಲಕೂ ನೀವೇ ಬೆಳಕು-ರಜನಿ!!

                     - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩