ನಾಲ್ಕು ಗೋಡೆಯ ಸುತ್ತ

ಮನೆ ಅಂದರೆ ಭಯ ಹುಟ್ಟಿಸುತ್ತೆ
ಅದೇನು ಆಳದ ಉತ್ಖನನ
ಅಲ್ಲಿ ಜಲ್ಲಿ, ಮರಳು, ಸಿಮೆಂಟು
ಕಾಸಿಗೆ ಕಾಸು ಕೂಡಿಸಿಟ್ಟ ಕನಸುಗಳ
ನಿರಾಯಾಸ ಸಮಾಧಿಯೊಂದಿಗೆ
ಸಿದ್ಧವಾಗುವ ಪಾಯದ ಗೋರಿ


ಅಲ್ಲಿಗೆ ಉದ್ದುದ್ದ ಸ್ಥಂಬಗಳ ಆಧಾರದ ಮೇಲೆ
ಒಂದೊಂದೇ ಇಟ್ಟಿಗೆಯ ಜೋಡಿಸುತ ಸಾಗಿ
ಕಿಟಕಿ ಬಾಗಿಲುಗಳ ಕೂರಿಸಿ
ಬೆಳಕಿಗೆ ನಿರ್ದಿಷ್ಟ ಹಾದಿ ನಿರ್ಮಿಸುತ್ತೇವೆ
ಕದ್ದು ನುಸುಳಿದಲ್ಲೆಲ್ಲ ತೇಪೆ ಹಾಕುತ್ತಾ
ನಮಗೆ ಬೇಕಾದ ಎತ್ತರ, ವಿಸ್ತಾರಗಳ ಕೋಟ್ಟು
ತೀರದ ತಾಪತ್ರಯಗಳಿಗೆ ಅಣಿಯಾಗುತ್ತೇವೆ


ಅಸಲಿಗೆ ಮನಸಿಗೆ ಮನೆಯೇ ಬೇಡ
ಬೇಕಿರುವುದೆಲ್ಲವೂ ದೇಹಕ್ಕೆ ಮಾತ್ರ
ಜಾಗೃತ ಅಸ್ಮಿತೆಗಳ ಶಾಂತವಾಗಿಸಲು
ಒಂದು ಸೂರಿನಡಿ ಬಂಧಿಯಾಗಬೇಕು
ಕಾಲ ಕಾಲಕ್ಕೆ ಧೂಳುದುರಿಸಿಕೊಂಡು
ಗುಡಿಸಿ ಸಾರಿಸಿ ಶುಚಿ ಕಾಪಾಡಬೇಕು
ನೋಡುಗರ ನೋಟಕ್ಕೆ ಸಿಕ್ಕಿಬೀಳದಿರಲು


ಮನೆ ಗೋಡೆಗಳು ಮಾಸದಂತೆ
ಬಿರುಕು ಬಿಡದಂತೆ ಬಣ್ಣ ಪೂಸಿ
ಕಿಟಕಿ ಗರಿಗಳ ಗಾಜಿನ ಒಳಗೂ ಹೊರಗೂ
ಯಾವುದೇ ಬೆರಳ ಅಚ್ಚು ಬೀಳದಂತೆ
ಎಚ್ಚರ ವಹಿಸುತ್ತಲೇ ಬದುಕಬೇಕು
ಇದ್ದೂ ಇಲ್ಲದವರಂತೆ


ಹುಚ್ಚರಾಗಿ ಅರಚುವಾಗ ದನಿ ಹೊರ ಜಾರದಂತೆ
ಒಗ್ಗರಣೆ ವಾಸನೆ ನೆರೆಯವರ ತಟ್ಟದಂತೆ
ಗುಟ್ಟುಗಳ ಕಾಪಾಡಲೊಂದು ಕೋಣೆ
ಸ್ವಚ್ಛ ಗಾಳಿ ಸೇವನೆಗೆ ಒಂದು ಮೂಲೆ
ಒಂದು ಐದಾದರೂ ಚಿಲಕವಿರುವ ಮುಂಬಾಗಿಲು
ಇದ್ದರೂ ನಮ್ಮದಲ್ಲದ ಹಿತ್ತಲು


ಮನೆಯೆಂದರೆ ಏನೋ ಅಸ್ಥಿರ ಭಾವ
ಸದಾ ಒಂದಲ್ಲೊಂದು ಗೊಂದಲದ ಗೋಂದು
ಅಲ್ಲಿ ಸಿಕ್ಕಿ ನರಳುವವರು ಯಾರೂ ಒಪ್ಪಿಕೊಳ್ಳರು;
ಕೆಲ ಸತ್ಯ ಸಂಗತಿಗಳೇ ಹಾಗೆ
ಬಹಿರಂಗವಾಗಿ ಬೆತ್ತಲಾಗುವ ಬದಲು
ನಾಲ್ಕು ಗೋಡೆಗಳ ನಡುವೆ ಭದ್ರವಾಗಿರಲು ಒಪ್ಪುತ್ತವೆ!!


                                                         - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩