ಪ್ರೇಮ ಪ್ರಯಾಸ

ನಿನ್ನತ್ತ ಹೂವೊಂದ ಎಸೆದೆ ನಾ
ಗಮನವ ನನ್ನತ್ತ ಸೆಳೆಯಲು
ಕನಸೊಂದ ನಾ ಕದಡಿಬಿಟ್ಟೆನಾ?
ಒಮ್ಮೆಲೆ ಕಣ್ತುಂಬಿ ಬರಲು


ಯಾವತ್ತೂ ಸಿಗದವಳು ಸಿಕ್ಕೆ ನೀ
ತುಂಬು ಸಂತೆಯಲಿ ಚೌಕಾಸಿ ಮಾಡುತ
ನಾನೊಂದು ಮಳಿಗೆಯನು ತೆರೆಯಲೇ?
ಇದ್ದ ಹೃದಯಕ್ಕೆ ಬೆಲೆಯನ್ನು ಕಟ್ಟುತ


ಕುಂಟು ಬಿಲ್ಲೆ ಆಟಕ್ಕೆ ಕರೆಯುವೆ
ಆಸೆಗೆ ಕಾಲು ಬಂದಂತೆ ಓಡಿ ಬಾ
ಎಲ್ಲ ಆಟದಿ ನಾನಂತೂ ಸೋಲುವೆ
ಮತ್ತೆ ಮತ್ತೆ ಕಲಿಸುತ್ತ ಜಯಿಸು ಬಾ


ಒಬ್ಬನೇ ಇದ್ದರೆ ಶೂನ್ಯ ನಾ
ನೀನಿರೆ ನನಗೆ ಸ್ಥಿರವಾದ ಹೆಸರು
ಜೀವಕ್ಕೆ ವಿಸ್ತಾರ ಬೇಕಿದೆ
ನೀಡು ಅನುಮೋದನೆಯ ನಗೆಯ ಮೊಹರು


ಕಳೆದವನ ಕಿಸೆಯಲ್ಲಿ ಉಳಿದೆ ನೀ
ಎಂದೂ ಅಳಿಯದೆ ಉಳಿದ ವಿಳಾಸ
ನಗುವನ್ನೇ ನೀ ಮುಡಿಯಬೇಕು
ಅದಕೇ ನೋಡೆನ್ನ ಎಲ್ಲ ಪ್ರಯಾಸ!!


                                     - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩