Thursday, 18 February 2016

ಪರಿಹಾಸ

ಯಾವ ಎಲೆ ಮರೆಯಲ್ಲಿ ಮಾಗಿಸಲಿ ಮನವ
ಬಹುಕಾಲ ನಿನ್ನನ್ನು ನೋಡದೆ ಉಳಿದು
ಹೀಗೇ ಕಳೆಯಲೇ ಇಡಿ ಜನುಮವನ್ನು
ನೀ ಕನವರಿಸಿ ಬಿಟ್ಟ ಕನಸನ್ನು ಪಡೆದು


ಹೇಗೆ ಉಸಿರನ್ನು ಹಿಡಿದಿಡುವ ಹವಣಿಕೆಯಲಿ
ಬೀಳ್ಗೊಡುವ ಪರಿಹಾಸ ಜೀವ ಉಳಿಸುವುದೋ,
ನಿನ್ನನ್ನೂ ಹಿಡಿದಿಡುವ ಇಂಗಿತ ಆದರೆ
ನನ್ನೊಳಗೆ ನಿನ್ನೊಲವನೆಲ್ಲಿ ಇರಿಸುವುದು?!!


ಕಣ್ಣ ಮುಂದೆ ಬರಲು ಕಾವ್ಯಗಳು ನಿರ್ಲಿಪ
ಮರು ಹುಟ್ಟಿಗೆ ಇಡುತಲಿವೆ ಕೋರಿಕೆ
ನಿನ್ನ ಸೇರೋ ಆಶಯದ ಹೃದಯ ಹೊತ್ತಿಹೆ
ಇನ್ನು ನನ್ನೊಳಗೆ ಮಿಡಿವುದು ಏತಕೆ?


ಎಚ್ಚರದ ಇರುಳಿನಲಿ ಎಚ್ಚರಿಕೆ ತಪ್ಪಿಸುವ
ಸ್ವಚ್ಛ ಬೆಳಕಿನ ತುಣುಕು ನೀನಾದರೆ
ತುಂಬು ಗೊಂದಲದಲ್ಲಿ ಒಂದು ಗೂಡನು ಕಟ್ಟಿ
ಬಂಧಿಯಾಗಿಸು ನಾನು ಪಾರಾದರೆ


ಯಾವ ಕಾರಣ ಕೊಟ್ಟೂ ಕೊಲ್ಲದಿರು ನನ್ನನ್ನು
ಕಾದಿರುವೆ ಕೆನ್ನೆಯಲಿ ಸಣ್ಣದಾಗಿ
ಅಳಿಸಿದ ಆಪಾದನೆ ನಂತರಕೆ ಇರಲಿ
ಕಣ್ಣೀರ ಹರಿಸು ನೀ ನನ್ನ ಕೂಗಿ!!


                                             - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...