ಪ್ರೇಮ ಸ್ವಗತ

ನೆನಪು ಇಷ್ಟು ಘಾಡವಾಗಿ
ಕಾಡ ಬೇಕು ಅನಿಸಲಿಲ್ಲ
ಎಲ್ಲ ನೀನು ಬಿಟ್ಟು ಹೋದ
ಕಾಲುಗುಣದ ಮಹಿಮೆ;
ಮಾತಿನಲ್ಲಿ ತೊದಲಿಕೊಂಡ
ಗೀತೆ ನಿನ್ನ ಹೆಸರು ಮಾತ್ರ
ರಾಗಬದ್ಧವಾದರಲ್ಲಿ
ನನ್ನದೇನು ಹಿರಿಮೆ?!!ಕಣ್ಣಿನಲ್ಲೇ ಬಿಚ್ಚಿಕೊಂಡ
ನೂರು ಸಂಚಿ ಪ್ರೇಮ ಪತ್ರ
ಹಂಚಿಕೊಂಡ ಗಾಳಿಯಲ್ಲಿ
ಘಮಲಿನಂತೆ ಭಾಸ;
ನಿನ್ನ ಉಸಿರ ಬಿಟ್ಟುಗೊಡದೆ
ಗುಪ್ತವಾಗಿ ಮಡಗಿಕೊಂಡು
ಹೊಸತು ಉಸಿರ ಸೇರುತಿಲ್ಲ
ತುಂಟ ಶ್ವಾಸ ಕೋಶ!!

ಬುಗುರಿ ಮಾತು ಎದೆಯನೇರಿ
ಮೂಡಿ ಬಿಟ್ಟ ಅಕ್ಷರಕ್ಕೆ
ನಿನ್ನ ಸ್ಪರ್ಶದಿಂದ ಮತ್ತೆ
ಜೀವ ಬಂತು ನೋಡೆಯಾ?
ನೀನು ನಾನು ಕೂಡಿ ಮೊದಲು
ಮಾತನಾಡಿಕೊಂಡ ಜಾಗ
ಕೆಂಗುಲಾಬಿ ತೋಟವಾಯ್ತು
ಸುಳ್ಳ ನಂಬಲಾರೆಯಾ?

ಜೇನ ಹಿಂಡಿದಾಗ ನಿನ್ನ
ಕೆನ್ನೆ ಗುಂಡಿಯಲ್ಲಿ ಒಮ್ಮೆ
ಮಿಂದು ಎದ್ದ ಸುಖವ ಮತ್ತೆ
ಕಂಡೆ ನಾನು ಖಂಡಿತ;
ನಿನ್ನ ಅಮಲಿನೊಲುಮೆಯಲ್ಲಿ
ತೇಲಿದಷ್ಟೇ ನನ್ನ ಬದುಕು
ಅದರ ಆಚೆ ಉರುಳಿ ಬಿದ್ದ
ಕೋಟೆ ಮೇಲೆ ಬಾವುಟ!!

ಕೆತ್ತಲಲ್ಲ ನಾನು ಕಲ್ಲು
ಹಿಡಿಗೆ ಸಿಕ್ಕಿ ಬಿದ್ದ ಧೂಳು
ನಿನ್ನ ಒಡಲ ಒರಟು ಮೂಲೆ
ನನ್ನ ಕಳ್ಳ ಕಿಂಡಿ;
ನಿನ್ನ ಸೆರಗಿಗೊಂದು ಗಂಟು
ನಿನ್ನ ಒರಗಿಗೊಂದು ಮಾತು
ನಿನ್ನ ಕನಸಿನೂರ ಕರೆಗೆ
ನಾನು ಮೂಖ ಬಂಡಿ!!
               
                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩