ನೀನೆಂದರೆ ನಾನು

ಬಯಸಿ ಬಯಸಿ ಹಿಂದೆ ಬಿದ್ದ
ರದ್ದಿ ಕಾಗದದೊಳಗೆ
ನನ್ನ ಪ್ರೀತಿಭರಿತ ಸಂದೇಶಗಳು
ಮೊಣಕೈ-ಕಾಲು, ಮೂಗು ತರಚಿ
ಕೆಸರು ಮೆತ್ತಿ ವಿಕಾರವಾಗಿ ಕಾಣಬಹುದು;
ಅದಕ್ಕಾಗಿಯೇ ಖಾಲಿ ಉಳಿಸಿದ್ದೆ!!

ನಿನಗೆ ನಾ ತೋಚಿದಂತೆ ಬರೆದುಕೋ
ನನಗೆ ನೀ ತೋಚಿದಂತೆ ಬರೆದುಕೊಳ್ಳುತ್ತೇನೆ;
ನನ್ನವು ನನ್ನಲ್ಲೇ, ನಿನ್ನವು ನಿನ್ನಲ್ಲೇ
ಅರ್ಥಾತ್
ನನ್ನವು ನಿನ್ನಲ್ಲಿ, ನಿನ್ನವು ನನ್ನಲ್ಲಿ ಉಳಿದುಬಿಡಲಿ!!

ಏಸು ಬಾರಿ ಓದಿಕೊಂಡರೂ ತೃಪ್ತಿಯಿಲ್ಲ,
ಅಕ್ಷರ ದೋಷಗಳೆಡೆಗೆ ಮುಗ್ಧ ಕರುಣೆ,
ತಿದ್ದುವ ಗೋಜಲಿಗಿಲ್ಲದ ಸಮಯ;

ಮುಂದೆ ತೆರೆದಿಟ್ಟುಕೊಂಡಾಗ
ನೀನೇ ನಿರೂಪಕಿಯಂತೆ ಸಿಂಗಾರಗೊಂಡು
ಅಚ್ಚುಕಟ್ಟಾಗಿ ಒಪ್ಪಿಸುವ ಭಾವನೆಗಳಿಗೆ
ಮರುಳಾಗಿ ಹಾಳೆ ಮೇಲೆ ಉರುಳಿ ಬೀಳುವ
ಹೃದಯಕ್ಕೆ ಪೆಟ್ಟಾದರೂ ಸೊಗಸು!!

ಯಾವ ಗಾಳಿ ಸುದ್ದಿ ಕಿವಿ ಹೊಕ್ಕರೂ
ನಿನ್ನ ಮೇಲಿನ ಅಭಿಮಾನ ಕದಲದಷ್ಟು ದಿಟ,
ಎದೆಯಲ್ಲಿ ನಿನ್ನದೇ ಚಿತ್ರ ಪಟ,
ಜೀವಕೆ ನೀ ಮೋಹಕ ಚಟ....

ಎಂದಾದರೂ ಒಮ್ಮೆ ಸಮಯ ನೋಡಿಕೊಂಡು-
ಸಿಗೋಣ, ಕಾಲ ಮಿಂಚುವ ಮುನ್ನ;
ಬಹುಶಃ ನಾ ನಿನ್ನ, ನೀ ನನ್ನ ಧ್ಯಾನದಲ್ಲಿ
ನಾವು ನಮ್ಮನ್ನೇ ಮರೆತಿದ್ದರೆ ಅತಿಶಯೋಕ್ತಿ ಅಲ್ಲ!!
ನಾನೇನೆಂಬುದ ನೀ ತಿಳಿಸು
ನೀನೇನೆಂಬುದ ನಾ ತಿಳಿಸುತ್ತೇನೆ!!

                                            -- ರತ್ನಸುತ

Comments

  1. ಪರಸ್ಪರ ಅವರರವರ ಒಳಗೆ ಒಲುಮೆ ಸುಪ್ತವಾಗಿರಬೇಕೆನ್ನುವ ಕವಿ ಭಾವವೂ ಸರಯೇ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩