ಅಂಗಿ ಹರಿದಾಗ

ಹೊಸದೊಂದು ಅಂಗಿ ಕೊಂಡುಕೊಂಡೆ
ನಡುವೆ ಒಂದು ಗುಂಡಿ ಇಲ್ಲದಾಗಿತ್ತು,
ಕೋಪಕ್ಕೆ ಮುದುರಿ ಮೂಲೆಗೆಸೆದೆ
ಮಿಕ್ಕ ಗುಂಡಿಗಳೆಲ್ಲ ಅಳ ತೊಡಗಿದವು;
ಆ ಅನಾಥ ಭಾವ ನನ್ನ ಮನ ಮುಟ್ಟಲಿಲ್ಲ!!

ಅಷ್ಟಿರಲಿ, ಪಾಪ ಆ ಕಳೆದ ಗುಂಡಿಗೆ
ಇಲ್ಲಿಯ ಸ್ಥಿತಿಯ ಅರಿವಾದರೆ ಎಷ್ಟು ಮರುಗುವುದೋ!!
ಆ ಪ್ರಜ್ಞೆ ಉಳಿದ ಗುಂಡಿಗಳಿಗೂ ಇಲ್ಲವಾಗಿ
ತೋಚಿದಂತೆ ಶಪಿಸುವಾಗ
ಅಂಗಿ ಗಾಂಭೀರ್ಯ ಮೆರೆದದ್ದೇ ಸೋಜಿಗ!!

ಇಸ್ತ್ರಿ ಪೆಟ್ಟಿಗೆಯ ಇದ್ದಲಿಗೆ
ಹೊಸ ಗೆಳೆಯನ ಸುಕ್ಕು ಬಿಡಿಸುವ ಬೇನೆ,
ನಾ ಅದಕೆ ಅವಕಾಶ ಮಾಡಿಕೊಟ್ಟರೆ ತಾನೆ?
ಕಪಾಟಿನ ಮುಸುರೆ ಮೂಲೆಗುಂಪಾದುದಕೆ
ನನ್ನ ಕ್ರೌರ್ಯ ಅರ್ಥವಾಗಿತ್ತು
ಮಿಕ್ಕಾವುದರ ಮುಗ್ಧತೆಯ ಅಂದಾಜೂ ಇರದಂತೆ!!

ಒಂದು ಕಡೆ ಇನ್ನೂ ಅಳಿಯದ ಹೊಸತನದ ಕಂಪು,
ಮತ್ತೊಂದೆಡೆ ಮೊದಲ ಸರತಿಯಲ್ಲೇ ಬೆಸೆದ
ಕಂಕುಳಿನ ಬೆವರ ಬಂಧ;
ಎರಡರ ನಡುವೆ ನಿರೀಕ್ಷೆಯಲ್ಲೇ ಜೋಮು ಹಿಡಿಸಿಕೊಂಡು
ಮೈ ಮುರಿದಾಗ ಬಿಡಿಯಾದ ಹೊಲಿಗೆ,
ಮತ್ತದರ ಕಸೂತಿ ಬಣ್ಣ!!

ಬೆಲೆ ಕೊಂಡಿಯನ್ನೂ ಕಿತ್ತಿರದ
ಹೊಸತರಲ್ಲೇ ಹಳಸಾದ ಅಂಗಿಯ
ಶಾಶ್ವತವಾಗಿ ದೂರ ಮಾಡಿಕೊಳ್ಳವಾಗ
ಕೊನೆಯದಾಗಿ ಬೆಲೆಯನ್ನೊಮ್ಮೆ ನೋಡಿ
ಬೆರಗಾಗಿ, ಬೇಸರದಲ್ಲೇ ಹೇಳಿಕೊಂಡೆ
"ಹೊಸ ಗುಂಡಿ ಹೊಸೆದುಕೊಂಡಿದ್ದರೆ
ಹೀಗಾಗುತ್ತಿರಲಿಲ್ಲವೇನೋ ಬಹುಶಃ"!!

-- ರತ್ನಸುತ

Comments

  1. ಗಮನಕ್ಕೂ ಬಾರದೆ ಉಳಿವ ವಿಷಯಗಳನು ಎತ್ತಿಕೊಂಡು ಕವನವಾಗಿಸುವ ತಮ್ಮ ಪ್ರತಿಭೆಗೆ ನಮನ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩