ತಾಮಸ ತಪನ

ಕತ್ತಲಿನಿಂದ ಬೆಳಕಿಗೆ ಬಂದ ನನ್ನ
ಮತ್ತೆ ಕತ್ತಲಿನತ್ತ ಸಾಗಿಸಲು ಸೂಚ್ಯವಾಗಿ
ಕಣ್ಣ ಕುಕ್ಕುವಂತೆ ಸಾರಿದ ಬೆಳಕಲ್ಲಿ
ನಾ ಕಂಡ ಅದಮ್ಯ ಚೇತನಾ ಚಿಲುಮೆಗಳು,
ಮೊಸ ಜಾಲಗಳು, ಪಾಪ ಪ್ರಜ್ಞೆಗಳ ಲೆಕ್ಕ
ಬೆರಳ ಮೀರುವಷ್ಟಿದ್ದರೂ
ಸುಮ್ಮನೆ ಲಕ್ಕೆ ತಪ್ಪಿದವನಂತೆ
ಕುಕ್ಕರಗಾಲಲ್ಲಿ ಕೂತು ಮತ್ತೆ-ಮತ್ತೆ ಎಣಿಸುತ್ತೇನೆ!!

ಅವನೋ? ಅವಳೋ? ಗೊತ್ತಾಗದ
ದೂರದ ಆಕೃತಿಯೊಂದು ಕೈ ಬೀಸಿದಂತೆಯೋ,
ಅತ್ತಂತೆಯೋ, ಸತ್ತಂತೆಯೋ ಕಂಡು
ಹತ್ತಿರ-ಹತ್ತಿರಕ್ಕೆ ಹೊರಟೂ ದೂರುಳಿದಂತಾಗಿ
ಇನ್ನೂ ಸಮೀಪಿಸುವ ಹಂಬಲದಿಂದ
ಕಾಲುಗಳು ಚಳುಕು ಹಿಡಿಸಿಕೊಂಡದ್ದು
ನೆರಳಿಗೂ ಅರ್ಥವಾಗಿಹೋಗಿತ್ತು!!

ಬೋಳು ಮರ ಸಂತೈಸುತ್ತಿರುವಂತೆ
ಉದುರಿದೆಲೆಗಳೆಲ್ಲ ಹುಟ್ಟಿಗೆ ಹಪಹಪಿಸಿ
ಸುರುಳಿ ಬೀಸಿದ ಗಾಳಿಯ ಬೆನ್ನು ಹತ್ತಿ
ಜನ್ಮಸ್ಥಳವ ಮುಟ್ಟಿದಾಗ
ಚಿಗುರಿಗೆ ದಿಢೀರ್ ಎಚ್ಚರಾದಂತೆ
ಪುಟಿದು ಕಣ್ಣರಳಿಸಿ
ನಾನೆಂಬ ಪಾಪಿ ಬುಡದಲ್ಲಿ ವಿರಮಿಸುವುದರ
ದರ್ಶನ ಪಡೆದದ್ದೇ ನೋವಿನ ವಿಚಾರ!!

ಆ ಆಕೃತಿ ಇನ್ನು ಅಲ್ಲೇ ಉಳಿದಿತ್ತು,
ನಾನೆಷೇ ಮುಂದರಿದರೂ
ಇದ್ದಲ್ಲೇ ಉಳಿದಷ್ಟು ಅಂತರ ಕಾಯ್ದುಕೊಂಡಿತ್ತು;
ಹಿಂದೆ ಯಾವ ದಾರಿಯೂ ಕಾಣಲಿಲ್ಲ,
ಹಾಗಿದ್ದರೆ ನನಗೆ ನಾನೇ ಮೋಸ ಎಸಗಿದೆನೇ?
ಎಲ್ಲವನ್ನೂ ವಿಶ್ಲೇಷಿಸುವ ವ್ಯವಧಾನವಿಲ್ಲ,
ಮುಂದೆಂಬುದೂ ತೋಚುತ್ತಿಲ್ಲ!!

ಕತ್ತಲ ಏಕ ಮುಖವ ತಿರಸ್ಕರಿಸಿದವನಲ್ಲಿ
ಬಹು ಮುಖಿ ಬೆಳಕು ಅಜೀರ್ಣವಾದಾಗ
ಬದುಕ ಇನ್ನೆತ್ತ ಸಾಗಿಸಬೇಕೋ ಗೊತ್ತಾಗದೆ
ಹಣತೆಯ ಬತ್ತಿಯಾಗಿ ಉಳಿದು ಬಿಟ್ಟೆ;
ಹೊತ್ತಿಸಿದರೆ ಬೆಳಕು,
ಇಲ್ಲವಾದರೆ ಇದ್ದಂತೇ!
ಎಲ್ಲಕ್ಕೂ ಪರಾವಲಂಬಿತನಾಗಿದ್ದೇನೆ!!

ಕೊನೆಗೂ ಆ ದೂರದ ಆಕೃತಿ
ತಾನೇ ಮುಂದಾದಂತೆ ಗೋಚರಿಸಿತು;
ಅವಲಂಬಿತ ಆಧಾರ ಅದಾಗಿರಬಹುದೆಂದು
ಕೌತುಕದಲ್ಲಿ ದಿಟ್ಟಿಸಿದೆ;

ಹತ್ತಿರವಾಗತೊಡಗುತ್ತಲೇ
ಕಣ್ಣು ಹಾಯ್ದಷ್ಟೂ ದೂರ
ಆವರಿಸಿದ ತಾನು
ವಿಚಲಿತಗೊಳ್ಳುವುದಕ್ಕೂ ಮುನ್ನ
ನನ್ನ ಹೊದ್ದುಕೊಂಡಿತು!!

ನಾನೀಗ ಮತ್ತೆ ಕತ್ತಲ ಪಾಲಾದೆ,
ಬೆಳಕು ನನ್ನೊಳಗೆ ನೆನಪಾಗಿ ಉಳಿಯಿತು!!

                                     -- ರತ್ನಸುತ

Comments

  1. ತಮಸೋಮ ಜ್ಯೋತಿರ್ಗಮಯ ತಿರುವುಮರುವು ಆಗೋ ಶೋಕಗೀತೆ.
    ವಿಭಿನ್ನ ರಚನಾ ಕೌಶಲ್ಯ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩