Tuesday 16 September 2014

ಮೌನ ಕವನ

ಮೌನವ ಕೆದಕುತ್ತ ಹೋದಂತೆ
ನೂರು ಮಾತುಗಳು ಮೈದುಂಬಿ
ಅರಳಿಕೊಂಡ ದಾರಿಯಲ್ಲಿ
ಹೆಜ್ಜೆ ಸಪ್ಪಳವೂ ಮೂಕವಾಗಿತ್ತು!!

ಇದೊಂದು ರೀತಿ ಜಾಡ್ಯ;
ನನ್ನೊಳಗಿನ ಅನಂತ ಮೌನವ
ಲೋಕದೆಡೆಗೆ ಜೋಡಿಸಿ
ಅಳತೆ ಮಾಡುವ ಕುಸುರಿಯೆಂಬಂತೆ!!

ಹುಡುಕುತ್ತ ಸೋತು ಕೂತಾಗ
ಥಟ್ಟನೆ ಸುಳುವು ನೀಡಿ
ಎಚ್ಚೆತ್ತ ಮನಸಿನ ಸಂಭ್ರಮಕ್ಕೆ
ಮತ್ತೂ ಕರಣ ಕೊಡುವ ಕಿಡಿಗೇಡಿ!!
ಒಮ್ಮೊಮ್ಮೆ ಮಾತು ಎಟುಕುತ್ತದೆ,
ಮೌನಕ್ಕೆ ಏಣಿಯೆಂಬುದೇ ಇಲ್ಲ;
ಒಬ್ಬಂಟಿತನಕ್ಕೆ ಉರಿ ಘಾಟು ಅಥವ
ಜೇನ ಕುಂಭದಂತೆ!!

ಮೌನವ ಪದಗಳಲ್ಲಿ ಕಟ್ಟಿಟ್ಟು
ನಿಟ್ಟುಸಿರು ಬಿಟ್ಟ ಕವಿಗಳು
ಬೆನ್ನಲ್ಲೇ ಬಿಡುಗಡೆಗೊಂಡ ಅವುಗಳ
ಹಿಡಿಯುವಲ್ಲಿ ಸೋತವರೇ!!

ಮೌನ ಈಗ ಮತ್ತಾರದ್ದೋ ಕಿವಿಯಲ್ಲಿ
ಗುಯ್ಗುಡುತ್ತಿದೆ, ನಿರಾಕಾರವಾಗಿ!!

ಎಲ್ಲರೊಳಗಿನ ಮೌನ ಮಾತಾಗುತ್ತೆ;
ಕಿವಿಗೊಡುವ ಔದಾರ್ಯತೆ ಇದ್ದರೆ
ಮಾತಿಗೂ ಮಿಗಿಲಾಗುವ ತಾನು
ನಿಘಂಟಿನರ್ಥವ ಕಾಲದಿಂದಲೂ
ಖಂಡಿಸಿತ್ತಾ ಬರುತ್ತಿದೆ, ಮೌನವಾಗಿ!!

                             -- ರತ್ನಸುತ

1 comment:

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...