ನನ್ನೊಳಗೊಬ್ಬನ ಸ್ವಗತಗಳು

ಹಾಳೆ ಸೋಕುವ ಮುನ್ನ
ನೆನ್ನೆಗಳ ಮನ್ನಿಸಿ
ಸುಕ್ಕುಗಟ್ಟಿದ ಮೇಲೆ
ನಾಳೆಗಳ ಜ್ಞಾಪಿಸಿ
ಒಂದು ಕವಳದ ನೆನೆಪು
ಒಂದು ಬಳಪದ ಗೀಟು
ಕಪ್ಪು ಹಲಗೆಯ ಬಾಧೆ
ನೋಡಿ ಸಾಯದೆ ಹೋದೆ!!

ಕುರಿ ಕಂಬಳಿಯ ಉಚ್ಚೆ
ಸುಡುಗಾಡು ಕರಿ ಮೋಡ
ಹೆಸರಿಟ್ಟು ಕೂಗುವೆನು
ಓ ರವಿಯೇ ಬರಬೇಡ
ಬೂದಿಯೊಳಗಣ ಕೆಂಡ
ಕೆಂಡದೊಳಗಣ ಮೌನ
ಮೌನದಾಹುತಿ ಬೆಂಕಿ
ನೀರು ಬೆಂಕಿಯ ಬಾಯಿ!!

ಕೊಟ್ಟಿಗೆಯ ಗಂಜಲ
ಬಿಟ್ಟ ಎಲೆ ಎಂಜಲು
ಕಲೆಗುಂದದ ಗೆಜ್ಜೆ
ದಣಿವಾರದ ಕೊರಳು
ಕೊಂಬಿಗೊಂದು ಗಿಲಕಿ
ಬಾಲಕೊಂದು ಕಣ್ಣು
ಹಿಂದೆ ಉಳಿದ ಸಮಯ
ಬೆನ್ನ ಹತ್ತಿ ನಾನು!!

ಕೋಳಿ ಕೆದಕೋ ತಿಪ್ಪೆ
ತುರಿದ ತೆಂಗಿನ ಚಿಪ್ಪು
ಹರಿದ ತೇಪೆ ಅಂಗಿ
ಬಾಯಿ ಬಿಟ್ಟ ಗೋಡೆ
ಒಂದು ಒಲವಿನ ಪತ್ರ
ಅಜ್ಜ ಬಳಸಿದ ಛತ್ರಿ
ದೊಂಬರಾಟದ ನೆರಳು
ನೀರ ಮೇಲಿನ ಗುಳ್ಳೆ!!

ಪಾದದಡಿ ಬಿರುಕು
ರಕ್ತ ಸ್ರಾವದ ಸೊಗಡು
ಮಾಗಿ ಮಂಜಿನ ಬರಹ
ಕೋಮು ವ್ಯಾಘ್ರದ ಉಗುರು
ರೆಪ್ಪೆ ತೆರೆಯದ ಬಣ್ಣ
ಬಿದ್ದು ಸತ್ತಿರೋ ಸೊಳ್ಳೆ
ಮೂಗು ಸೊಟ್ಟಗೆ ಆಯ್ತು
ನೇರ ಕಾಣದೆ ದಾರಿ!!

ನಾನೂ ಒಬ್ಬ ತಿರುಕ
ನಾನೇ ಬೇಯಿಸೋ ತನಕ
ಹೆಜ್ಜೆ ಗುರುತಿಗೆ ಇಲ್ಲ
ಯಾವ ಅಂಜಿಕೆ ತವಕ
ದೇಹ ಮಣ್ಣಿನ ಆಸ್ತಿ
ಜಾಗ ಹುಡುಕುವ ಜನ್ಮ
ಚಿಟಿಯಷ್ಟಿದೆ ಸಾಕು
ಮನದ ಮೂಲೆಯ ಪ್ರೇಮ!!

                  -- ರತ್ನಸುತ

Comments

  1. ಹಳ್ಳಿಗಾಡಿನ ಪ್ರೇಮಿಯ ಮನೋಭಿಲಾಶೆಗಳು ಪರಿಸರದ ಮೂಲ ವಸ್ತುಗಳನ್ನು ಅಳವಡಿಸಿಕೊಂಡು ವಿಕಸನಗೊಳ್ಳುತ್ತವೆ, ಎನ್ನುವುದಕ್ಕೆ ಈ ಕವನವೇ ಸಾಕ್ಷಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩