Tuesday 16 September 2014

ಕಡಲ ಹಸಿವು

ಗಡಿಯಾರ ಎಂದಿನ ಹುರುಪಿನಲ್ಲೇ
ಒಂದೊಂದೇ ಹೆಜ್ಜೆ ಮುಂದಿಕ್ಕುತ
ಎಲ್ಲೂ ತೊಡರದಂತೆ ಸಾಗುತ್ತಿತ್ತು;
ಅಲ್ಲಿ ನೆರೆದಿದ್ದವರೆಲ್ಲ ಕಂಠ ಪೂರ್ತಿ ಕುಡಿದು
ಕುಣಿದು, ಕುಪ್ಪಳಿಸಿ ಲೋಕವನ್ನೇ ಮರೆತಿದ್ದರು!!

ತಟವನ್ನೇ ಬಯಸದ ಹಡಗು
ಅಲೆಗಳ ಸ್ಪರ್ಶ ಸುಖದಲ್ಲಿ ಲೀನ;
ಕಣ್ಣು-ಕಣ್ಣು ಕೂಡಿದ ಬೆಳವಣಿಗೆ
ಮನಸು-ಮನಸುಗಳ ಬೆರೆಸಿ
ದೇಹ-ದೇಹಗಳ ಬೆಸೆದು
ಅಧರ-ಅಧರಗಳ ಒಗ್ಗೂಡಿಸಿದ್ದು
ಅದೇ ಮೈ ಮರೆತ ಹಡಗಿನ ಮೇಲೆ!!

ಹೃದಯಂಗಮ ಪ್ರೇಮಕ್ಕೆ ನೂರು ಅಡ್ಡಗಾಲು;
ಮಂಜುಗಡ್ಡೆಯ ಕೆಕ್ಕರುಗಣ್ಣು
ಹಡಗಿನ ಮೂಗು ಮುರಿಯಲೆಂದು
ಸಂಚು ರೂಪಿಸಿದ್ದೇ ಮೊದಲಾಯ್ತು;
ಅಲ್ಲಿಯವರೆಗೆ ನೇವರಿಸಿ ಮುದ್ದಾಡಿದ ಅಲೆ
ಅಪ್ಪಣೆಯಿಲ್ಲದೆ ಸೀಮೆ ದಾಟಿ
ಸಿಕ್ಕ ಸಿಕ್ಕಲ್ಲಿ, ಸಿಕ್ಕ ಸಿಕ್ಕಂತೆ ನುಸುಳಿದಾಗ
ಲಂಗರು ಹಣೆಗೆ ಹಸ್ತಿವಿಟ್ಟು
ಬಂದರನ್ನು ಎದುರು ನೋಡತೊಡಗಿತು!!

ಮೋಸದ ಹಲ್ಲು ಮಸೆದಾಗ
ಉಲ್ಬಣವಾದ ಶಾಖಕ್ಕೆ
ಜೋಡಿ ಹೃದಯಗಳು ಕುದಿಯುತ್ತಿದ್ದವು;
ಕಡಲ ರೌದ್ರತೆಗೆ ತುತ್ತಾಗದಂತೆ
ನಿದ್ದೆಗೆ ಜಾರಿದ ಕಣ್ಣುಗಳು ನಾಳೆಗಳನ್ನೆಣಿಸುತ್ತಿದ್ದರೆ,
ಎಚ್ಚರವಿದ್ದವು ಕೊನೆಗೊಮ್ಮೆ ಅಳುತ್ತಿದ್ದವು!!

ತುಂಡಾಗಿ ಮುಳುಗುತ್ತಿದ್ದ ಹಡಗಿನೊಳಗೆ
ಸಮಯ ಮಹತ್ತರವಾಯಿತು;
ಆಗಲೇ ಅದನ್ನು ನಿಲ್ಲಿಸಿ ದಾಖಲಿಸಲಾಯಿತು!!

"ಪ್ರೇಮ ದೋಣಿಯಲಿ ಒಬ್ಬರಿಗಷ್ಟೇ ಸ್ಥಾನ,
ಮತ್ತೊಂದು ಜೀವದ ಬಲಿದಾನ"
ಇದು ಯಾವ ಪ್ರೇಮ ಗ್ರಂಥದಲ್ಲೂ ಉಲ್ಲೇಖಿಸದ
ಹೊಸ ವ್ಯಾಖ್ಯಾನವಾಯಿತು!!
                                          -- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...