Saturday 6 October 2012

ಬಾ ತಾಯೆ ಕಾವೇರಿ!!!



















ಬಾ ತಾಯೆ ಕಾವೇರಿ!!!
ಕನ್ನಡತಿಯೋಬ್ಬಳು ಕಾದಿಹಳು, ಹೊತ್ತು
ಖಾಲಿ ಬಿಂದಿಗೆಯ ಬಿಸಿಲಲ್ಲಿ ನಿಂತು
ನೀರೊಡನೆ ಹೋಗದಿದ್ದರೆ ಇಲ್ಲ ಅಡುಗೆ
ಅತ್ತೆಯ ಬೈಗಳದ ಪೀಕಲಾಟ
ಬಳ್ಳಿಯಂತಿಹಳೀಕೆ ಎಷ್ಟೆಂದು ಕಾಯ್ವಳು
ಇನ್ನೆಷ್ಟು ಸಹಿಸಿಯಾಳು ಬಿಸಿಲಿನಾಟ

ಬಂದವಳು ಬಂದಂತೆ ಹಿಂದಿರುಗಿದ್ದೇಕೆ?
ಊಟಕ್ಕೆ ಕೂತವನು ಕಾಯ ಬೇಕೇ?
ನುಂಗಿದ ಮುದ್ದೆಯ ತುತ್ತು ಕಚ್ಚಿಕೊಂಡಿದೆ ಕೊರಳ
ಧಾವಿಸಿ ಬಾ ಬಿಕ್ಕಳಿಕೆಯ ದೂರಾಗಿಸೋಕೆ

ಅಗೋ ಪಾಪ ವೃಧರೊಬ್ಬರ ಒಂಟಿ ಪಾಡು
ಹೊರಡದ ನಾಲಿಗೆಯ ದಾಹವನು ನೋಡು
ಮೆಟ್ಟಿ ಬಾ ಬಂಡೆಗಳ ತುಂಡು ತುಂಡಾಗಿಸಿ
ನೀನಾಗು ಕಾಲುವೆ, ಅಮೃತದ ಜಾಡು

ನೋಡಲ್ಲಿ ಹಸಿರು ಮುನಿದಿದೆ ಕೆಂಪಾಗುತ
ಬೇರುಗಳು ಕಾಲ್ಕಿತ್ತಿವೆ ಒಣಗಿ ಬಳಲುತ
ನಿನ್ನ ಘಮದ ನಿರೀಕ್ಷೆಯಲ್ಲಿದೆ ಮಣ್ಣ ಮೂಗು
ಹುಸಿಯಾದರೂ ಸರಿಯೇ ಬಾ ಬಸೆದು ಹೋಗು!!

ಮೊಗ್ಗಿನ ಮುಚ್ಚು ಪರದೆಯೊಳಗೆ ಸಿಕ್ಕಿ
ಜಾರದ ಕಂಬನಿಯೊಡನೆ ಒಳಗೆ ಬಿಕ್ಕಿ
ಮೌನದ ಧನಿಯಲ್ಲಿ ಕೈಲಾದ ಪರಿಮಳ
ಸೂಸಿದೆ ನೋಡು ಬಡಪಾಯಿ ಹೂವು
ನೀ ಚಿಮ್ಮಿ ಜಿಗಿದು, ಸಿಂಪಡಿಸು ಹಾಗೆ
ಜೀವಕೆ ನೆರಳು ಕೊಟ್ಟು ಕೊನೆ ಗಳಿಗೆ
ಹೊತ್ತಾರ ಹೋಗು, ಉಳಿಸಾರ ಹೋಗು
ಸಂಪೂರ್ಣ ಉಡುಪಾಗು ಅಪೂರ್ಣತೆಗಳಿಗೆ

ಬರಡು ಹಾಳೆಯ ಮೇಲೆ ಗೀಚಿದ ಪದಗಳು
ಎಂದಾದರು ಉಳಿಯುವುದು ತಾನೇ ಹಾಗೆ
ನೀನೊಮ್ಮೆ ನೆರೆಯಾಗಿ ಎಲ್ಲವನು ಅಳಿಸು
ಆಗುವೆನು ಮತ್ತೊಂದು ಸೃಷ್ಟಿಗೆ ಯತ್ನ
ನೀನಿಟ್ಟ ಪರಿಚಯಕೆ ಎಲ್ಲವೂ ಅದ್ಭುತ
ನೀ ಸೋಕಿ ಹೋದ ದಾರಿಗಳೇ ಧನ್ಯ
ನಿನ್ನರಸಿ ನಾನಿಟ್ಟ ಜೋಡಿಕೆಯ ಪದಮಾಲೆ
ನಿನ್ನ ಮಹಿಮೆಗೆ ಮಣಿದು ತುಂಡಾದ ರತ್ನ......

                                      --ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...